ಸಾರ್ವಜನಿಕರು ಮಿತವಾಗಿ ನೀರನ್ನು ಬಳಕೆ ಮಾಡಿಕೊಳ್ಳಬೇಕು: ಸಚಿವ ಸತೀಶ ಜಾರಕಿಹೊಳಿ

Public should use water sparingly: Minister Satish Jarkiholi

ಸಾರ್ವಜನಿಕರು ಮಿತವಾಗಿ ನೀರನ್ನು ಬಳಕೆ ಮಾಡಿಕೊಳ್ಳಬೇಕು: ಸಚಿವ ಸತೀಶ ಜಾರಕಿಹೊಳಿ 

ರಾಯಬಾಗ, 15 : ತಾಲೂಕಿಗೆ ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಮಿತವಾಗಿ ನೀರನ್ನು ಬಳಕೆ ಮಾಡಿಕೊಳ್ಳಬೇಕೆಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.  

ರವಿವಾರ ಸಾಯಂಕಾಲ ಪಟ್ಟಣದ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದ ಆವರಣದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಡಕಲ್ ಜಲಾಶಯ ನೀರು ಸರಿಯಾಗಿ ಮುಟ್ಟಿಸುವಲ್ಲಿ ಅಧಿಕಾರಿಗಳು ಎಲ್ಲ ಕ್ರಮಕೈಗೊಂಡಿದ್ದಾರೆ ಎಂದು ತಿಳಿಸಿದರು. ತಾಲೂಕಿನ 39 ಕೆರೆಗಳನ್ನು ತುಂಬಿಸುವ ಯೋಜನೆ ಮುಕ್ತಾಯ ಹಂತದಲ್ಲಿದ್ದು, ಜೂನ್ ನಂತರ ಕೆರೆಗಳಿಗೆ ನೀರು ತುಂಬಿಸಲು ಕ್ರಮಕೈಗೊಳ್ಳುವುದಾಗಿ ಹೇಳಿದರು. ತಾಲೂಕಿನಲ್ಲಿ ಅಪೂರ್ಣಗೊಂಡಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರವಾಗಿ ಕಾಮಗಾರಿ ಮುಗಿಸಲು ಕ್ರಮಕೈಗೊಳ್ಳುವಂತೆ ಲೋಕೋಪಯೋಗಿ ಅಭಿಯಂತರ ಆರ್‌.ಬಿ.ಮನವಡ್ಡರ ಅವರಿಗೆ ಸೂಚಿಸಿದರು.  

ಹೆಸ್ಕಾಂ ರಾಯಬಾಗ ಉಪವಿಭಾಗ ಮಟ್ಟದ ಗ್ರಾಹಕರ ಸಲಹಾ ಸಮಿತಿಗೆ ಸದಸ್ಯರಾಗಿ ನಾಮನಿದೇರ್ಶನಗೊಂಡ ತಮ್ಮಣ್ಣ ನಾಯಿಕವಾಡಿ, ಫಾರೂಕ ಮೊಮಿನ, ವಿಶ್ವನಾಥ ಬೆರಡಿ, ಸುಂದರ ಕೆಳಗಡೆ, ಸೌಭಾಗ್ಯವತಿ ದಾಮೋಜಿ ಅವರಿಗೆ ಸಚಿವರು ಆದೇಶ ಪತ್ರವನ್ನು ನೀಡಿದರು.  

ಕೆಪಿಸಿಸಿ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ, ಬಿಡಿಸಿಸಿ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೊಹಿತೆ, ತಹಶೀಲ್ದಾರ ಸುರೇಶ ಮುಂಜೆ, ವಿ.ಎಸ್‌.ಚಂದರಗಿ, ಆರ್‌.ಬಿ.ಮನವಡ್ಡರ, ರಾಜು ಶಿರಗಾಂವೆ, ಅರ್ಜುನ ನಾಯಿಕವಾಡಿ, ದೀಲೀಪ ಜಮಾದಾರ, ಹಾಜಿ ಮುಲ್ಲಾ, ಸಿದ್ದು ಬಂಡಗರ, ಅಬ್ದುಲ್ ಸತ್ತಾರಮುಲ್ಲಾ, ಜ್ಯೋತಿ ಕೆಂಪಟ್ಟಿ, ನಿರ್ಮಲಾ ಪಾಟೀಲ ಸೇರಿ ಅನೇಕರು ಇದ್ದರು.