ಬಾದನಹಟ್ಟಿಯಲ್ಲಿ ಮನೆ ಉಳಿವಿಗಾಗಿ ಸಾರ್ವಜನಿಕರ ಪ್ರತಿಭಟನೆ
ಬಳ್ಳಾರಿ 15: ಬಾದನಹಟ್ಟಿ ಗ್ರಾಮದಲ್ಲಿ ರಸ್ತೆ ಅಗಲೀಕರಣದ ಹೆಸರಿನ ಮೇಲೆ ಬಡ ಜನರ ಮನೆ ತೆರವುಗೊಳಿಸುವ ನಿರ್ಧಾರವನ್ನು ಕೂಡಲೇ ಕೈ ಬಿಡಲು ಆಗ್ರಹಿಸಿ ಮನೆ ಉಳಿವಿಗಾಗಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ಮಾಡಲಾಯಿತು.ಬಾದನಹಟ್ಟಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಹಾದು ಹೋಗುವ ಕಾರಣವಾಗಿ, ರಸ್ತೆ ಅಗಲೀಕರಣದ ಹೆಸರಿನ ಮೇಲೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಬಡಜನರ ಮನೆಗಳನ್ನು ಹೊಡೆಯುವುದು ಅವರ ಜೀವಿಸುವ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಇದನ್ನು ನಾವು ವಿರೋಧಿಸುತ್ತೇವೆ. ಸದ್ಯ ನಮ್ಮ ಗ್ರಾಮಕ್ಕೆ ಈಗಿರುವ ರಸ್ತೆಯನ್ನು ಸುಸೂತ್ರವಾಗಿ ಸರಿಯಾಗಿ ನಿರ್ಮಿಸಿಕೊಂಡರೆ ಸಾಕಾಗುತ್ತದೆ. ಇದನ್ನು ಬಿಟ್ಟು ಬಡ ಜನರ ಮನೆಗಳನ್ನು ಕಿತ್ತು ರಸ್ತೆ ನಿರ್ಮಿಸಲು ಮುಂದಾದರೆ ಅವರ ಜೀವನ ಬೀದಿಗೆ ಬೀಳುತ್ತದೆ. ಇಂದಿನ ದಿನಮಾನಗಳಲ್ಲಿ ತುಂಡು ಭೂಮಿಯನ್ನು ಖರಿಧಿಸುವುದು ಎಷ್ಟು ಕಷ್ಟ ಎಂಬುದು ಅಧಿಕಾರದಲ್ಲಿರುವವರು ಯೋಚಿಸಬೇಕು.ದಿನಗೂಲಿಯ ಮೇಲೆ ತಮ್ಮ ಜೀವನವನ್ನು ರೂಪಿಸಿಕೊಂಡಿರುವ ಈ ಜನರು ಈಗ ಸದ್ಯ ತಾವುಗಳು ವಾಸಿಸುವ ಮನೆಯ ಮೇಲೆಯೇ ಅವರ ಕುಟುಂಬವು ಅವಲಂಬನೆ ಆಗಿದೆ, ಆದ್ದರಿಂದ ಈ ಬಡ ಜನರ ಹಿತದೃಷ್ಟಿಯಿಂದ ಪಂಚಾಯಿತಿಯವರು ತೆಗೆದುಕೊಂಡಿರುವ ನಿರ್ಧಾರವನ್ನು ಕೂಡಲೇ ಬದಲಾಯಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕರಾದ ಗುರಳ್ಳಿ ರಾಜ ಮುಖಂಡರಾದ ಕೋಳೂರು ಪಂಪಾಪತಿ, ಈ.ಹನುಮಂತಪ್ಪ, ಗೋವಿಂದ್ ರೈತರಾದ ಕರಿಯಮ್ಮ, ರಾಮಾಂಜಿನಿ, ಜಡಿಯ, ಗಂಟೆ ಹನುಮಂತ, ಮಣ್ಣೂರು ಕರಿಯಣ್ಣ ಲಕ್ಷ್ಮಿ, ನಾರಾಯನಮ್ಮ ಸೇರಿದಂತೆ ಇತರರು ಆಗಮಿಸಿದ್ದರು.