ವ್ಯಸನಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಜನಜಾಗೃತಿ ಯಾತ್ರೆ

ವ್ಯಸನಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಜನಜಾಗೃತಿ ಯಾತ್ರೆ Public Awareness Campaign for Creating Addiction-Free Villages

ಲೋಕದರ್ಶನ ವರದಿ 

  ಜಮಖಂಡಿ 29: ಆರೋಗ್ಯ, ಸಂಪತ್ತು ಮತ್ತು ಸಂತೋಷವು ಸುಖಮಯ ಜೀವನದ ಪ್ರಮುಖ ಸೂತ್ರಗಳಾಗಿದ್ದು, ಆರೋಗ್ಯವಿದ್ದಾಗ ಮಾತ್ರ ಜೀವನದ ಇತರ ಸೌಲಭ್ಯಗಳಿಗೆ ಅರ್ಥವಿದೆ ಎಂದು ಓಲೆಮಠದ ಆನಂದ ದೇವರು ಹೇಳಿದರು. ಜಮಖಂಡಿ ಸಮೀಪದ   ಗ್ರಾಮದಲ್ಲಿ ನಡೆದ ಓಲೆಮಠದ ಆಶ್ರಯದ ವ್ಯಸನಮುಕ್ತ ಗ್ರಾಮಗಳ ನಿರ್ಮಾಣದ ಸಂಕಲ್ಪ ಹಾಗೂ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಕುರಿತ ಒಂಬತ್ತು ದಿನಗಳ ಜನಜಾಗೃತಿ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಹಣದಿಂದ ನಿದ್ರೆ, ವಿದ್ಯೆ ಹಾಗೂ ಆರೋಗ್ಯವನ್ನು ಖರೀದಿಸಲು ಸಾಧ್ಯವಿಲ್ಲ.

ಬದುಕಲು ಹಣ ಅಗತ್ಯವಾದರೂ ಹಣವೇ ಬದುಕಾಗಬಾರದು. ಸಂಪತ್ತು ಇದ್ದಾಗ ಅದನ್ನು ಸಮಾಜದ ಒಳಿತಿಗಾಗಿ ಬಳಸಬೇಕು. ನಿಷ್ಕಲ್ಮಶ ಮನಸ್ಸಿನಿಂದ ಇತರರಿಗೆ ಒಳಿತು ಮಾಡಿದಾಗ ದೇವರು ಒಲಿಯುತ್ತಾನೆ ಎಂದು ಅವರು ಹೇಳಿದರು. ಜೀವನದಲ್ಲಿ ನಗುವಿಗೆ ಮಹತ್ವವಿದ್ದು, ಇತರರನ್ನು ನೋಯಿಸದೆ ನಗಿಸುವುದು ಧರ್ಮ. ಸಾತ್ವಿಕ ಆಹಾರ, ಸತ್ಯನಿಷ್ಠ ಜೀವನ ಮತ್ತು ಉತ್ತಮ ಚಿಂತನೆಯಿಂದ ಆರೋಗ್ಯಕರ ಹಾಗೂ ಸಂತೋಷದ ಬದುಕು ಸಾಧ್ಯ ಎಂದು ಆನಂದ ದೇವರು ತಿಳಿಸಿದರು. ಆಂಧ್ರ​‍್ರದೇಶದ ವಿರೂಪಾಕ್ಷ ದೇವರು ಪ್ರವಚನ ನೀಡಿದರು. ಕಡಪಟ್ಟಿಯ ಜಗದೀಶ್ವರ ಮಠದ ಮಾತೋಶ್ರೀ ಪ್ರಮಿಳಾತಾಯಿ ಹಾಗೂ ಕಾಡಸಿದ್ಧೇಶ್ವರ ಮಠದ ಶ್ರೀಶೈಲ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಗ್ರಾಮದ ಪರವಾಗಿ ಮಹಾದೇವ ಇಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಒಂಬತ್ತು ದಿನಗಳ ಕಾರ್ಯಕ್ರಮದ ಯಶಸ್ಸಿಗೆ ಶ್ರೀಕಾಂತ ರಾಮದುರ್ಗ, ಮಲ್ಲಪ್ಪ ಅಪ್ಪಣ್ಣಗೋಳ, ಬಸಯ್ಯ ಕಡಕೋಳ, ಸಲಬಯ್ಯ ಮಠಪತಿ, ಕಲ್ಲಪ್ಪ ಇಟ್ಟಿ, ಕೆ.ಎಲ್‌. ಮಾಳಿ, ಪ್ರಜಾಪತಿ ಸುವರ್ಣಖಂಡಿ, ರಮೇಶ ಗಿರಿಸಾಗರ ಸೇರಿದಂತೆ ಹಲವರು ಶ್ರಮಿಸಿದರು. ಈರಯ್ಯ ಕಡಕೋಳ ಹಾಗೂ ಸಂಗಡಿಗರು ಸಂಗೀತ ಸೇವೆ ಸಲ್ಲಿಸಿದರೆ, ಸಾನಿಯಾ ಹುಣಗುಂದ ಹಾಗೂ ಸಂಗಡಿಗರು ಭರತನಾಟ್ಯ ಪ್ರದರ್ಶಿಸಿದರು. ಶಿಕ್ಷಕ ಎಚ್‌.ಎಸ್‌. ಕಲ್ಯಾಣಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಮಹಿಳೆಯರು ತಲೆಯ ಮೇಲೆ ಬುತ್ತಿಬುಟ್ಟಿ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಬುತ್ತಿಜಾತ್ರೆ ನಡೆಸಿದರು.