ಕೊಪ್ಪಳ 29: ಬಾಲಮಂದಿರದ ಸಿಬ್ಬಂದಿ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವುದರ ಜೊತೆಗೆ ಮಕ್ಕಳು ಸರ್ಕಾರದ ಸೌಲಭ್ಯಗಳನ್ನು ಪಡೆದು ಗುರಿ ಸಾಧನೆ ಮಾಡಲು ಉತ್ತಮ ಮಾರ್ಗದರ್ಶನ ನೀಡಬೇಕು ಎಂದು ಬಾಲ ನ್ಯಾಯಮಂಡಳಿ ಸದಸ್ಯ ಶೇಖರಗೌಡ ಗಿ. ರಹಮತ್ನಾಳ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಾಲಕರ ಮತ್ತು ಬಾಲಕಿಯರ ಬಾಲಮಂದಿರ ಹಾಗೂ ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಯೋಜನೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಬಾಲಮಂದಿರದಲ್ಲಿ ಜ.28 ರಂದು ಆಯೋಜಿಸಿದ್ದ ಮಕ್ಕಳ ದಿನಾಚರಣೆ 2019-20 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಮಕ್ಕಳಿಗಾಗಿ ಇಂಥ ಕಾರ್ಯಕ್ರಮವನ್ನು ಆಯೋಜಿಸಿದ್ದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವೀರೇಂದ್ರ ಅ. ನಾವದಿ ಮಾತನಾಡಿ ಬಾಲಮಂದಿರದಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಇದು ಮಕ್ಕಳ ಎಲ್ಲಾ ಘಟಕಗಳ ಚುರುಕಿನ ಕಾರ್ಯಚಟುವಟಿಕೆಯನ್ನು ತೋರಿಸುತ್ತದೆ. ಮಕ್ಕಳಿಗೆ ನಾವು ಮೊದಲು ಪ್ರೀತಿ ಕೊಡಬೇಕು ನಂತರ ಶಿಸ್ತು ಪಾಲಿಸುವಂತೆ ತಿಳಿಸಿ ಅವರ ಉತ್ತಮ ವ್ಯಕ್ತಿತ್ವ ನಿರ್ಮಿಸುವಲ್ಲಿ ಸಿಬ್ಬಂದಿ ಪ್ರಮುಖ ಪಾತ್ರವಹಿಸಬೇಕು ಎಂದು ಹೇಳಿದರು.
ಬಾಲ ವಿಕಾಸ ಅಕಾಡೆಮಿ ಸದಸ್ಯ ಗಿರೀಶಾನಂದ ಜ್ಞಾನಸುಂದರ ಮಾತನಾಡಿ, ಮಕ್ಕಳ ದಿನಾಚರಣೆ ಕುರಿತು ತಿಳಿಸುತ್ತಾ, ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಮತ್ತು ಅವರು ಸರ್ವತೋಮುಖ ಅಭಿವೃದ್ಧಿ ಹೊಂದುವಂತೆ ಮಾಡಬೇಕು ಎಂದು ಹೇಳಿದರು. ವಿಶೇಷ ಮಕ್ಕಳ ಪೊಲೀಸ್ ಘಟಕದ ಬಸಪ್ಪ ಹಾದಿಮನಿ ಮಾತನಾಡಿ, ಮಕ್ಕಳನ್ನು ಪ್ರೀತಿಯಿಂದ ಅವರ ಕಾರ್ಯಚಟುವಟಿಕೆಗಳನ್ನು ಗ್ರಹಿಸಿ, ಅವರ ಸಾಮಥ್ರ್ಯ ಗುರುತಿಸಲು ಸೂಕ್ತ ವೇದಿಕೆ ಒದಗಿಸಬೇಕು ಎಂದು ಹೇಳಿದರು.
ಇದೇ ಸಂದರ್ಭ ಬಾಲಮಂದಿರದ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ಮತ್ತು ಸಿದ್ಧ ಉಡುಪುಗಳನ್ನು ದೇಣಿಗೆ ನೀಡಿದವರನ್ನು ಸನ್ಮಾನಿಸಲಾಯಿತು. ಉತ್ತಮ ಫಲಿತಾಂಶ ಮತ್ತು ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಯುನಿಸೆಫ್, ಜಿಲ್ಲಾ ಮಕ್ಕಳ ಯೋಜನೆಯ ಸಂಯೋಜಕ ಹರೀಶ್ ಜೋಗಿ, ಬಾಲ ವಿಕಾಸ ಅಕಾಡೆಮಿಯ ಸದಸ್ಯರಾದ ಗವಿಸಿದ್ದಪ್ಪ ಕರ್ಕಿಹಳ್ಳಿ, ಶ್ರೀನಿವಾಸ ಚಿತ್ರಗಾರ, ಸರಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ನಾಗಮ್ಮ, ಹೆಚ್.ಲಿಂಗರಾಜ್, ಸರ್ಕಾರಿ ಬಾಲಕರ ಬಾಲಮಂದಿರದ ಸಮಾಜ ವಿಷಯ ಪರಿಶೀಲಕ ಇಮಾಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು. ಬಾಲಕರ ಬಾಲಮಂದಿರದ ಅಧೀಕ್ಷಕಿ ರೋಹಿಣಿ ಕೊಟಗಾರ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ನೇತ್ರಾ ನಿರೂಪಿಸಿದರು. ಆಪ್ತ ಸಮಾಲೋಚಕ ರವಿ ಗುಡ್ಡದಮೇಗಳ್ ವಂದಿಸಿದರು.