ಲೋಕದರ್ಶನ ವರದಿ
ರಾಮದುರ್ಗ 03: ಕಾರ್ಮಿಕ ಮುಖಂಡರಾದ ಎಸ್. ವರಲಕ್ಷ್ಮೀ ರವರ ಬಂಧನ ಖಂಡಿಸಿ ಹಾಗೂ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ(ಸಿಐಟಿಯು) ತಾಲೂಕಾ ಸಮಿತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಸರಕಾರದ ವಿರುದ್ದ ದಿಕ್ಕಾರ ಕೂಗುತ್ತಾ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕಡಿಮೆ ಕೂಲಿಯಲ್ಲಿ ದುಡಿಯುತ್ತಿರುವ ಬಿಸಿ ಊಟದ ನೌಕರರಿಗೆ ಕನಿಷ್ಠ ವೇತನ ಕೆಳಲು ಬೆಂಗಳೂರಕ್ಕೆ ಹೋದರೆ ಸರಕಾರ ಪೊಲೀಸರನ್ನು ಛೂಬಿಟ್ಟು ಪ್ರಜಾಸತ್ತಾತ್ಮಕ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವದನ್ನು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ತೀವ್ರವಾಗಿ ಖಂಡಿಸುತ್ತದೆ.
ಪ್ರತಿಯೊಬ್ಬ ಪ್ರಜೆ ತನಗೆ ಅನ್ಯಾಯವಾದರೆ ಪ್ರತಿಭಟನೆ ನಡೆಸುವ ಹಕ್ಕು ನಮಗೆ ಸಂವಿಧಾನ ನೀಡಿದೆ. ಈ ಸಂವಿಧಾನವನ್ನೆ ಬುಡಮೇಲು ಮಾಡಲು ಹೊರಟಿರುವ ಸರಕಾರ ಕ್ರಮದ ವಿರುದ್ದ ಜನತೆ ತಿರುಗಿ ಬೀಳುವ ಕಾಲ ಬರುತ್ತಿದೆ. ತಿಂಗಳಿಗೆ ಕೇವಲ ರೂ.2600 ವೇತನದಲ್ಲಿ ದುಡಿಯುತ್ತಿರುವ ಅಕ್ಷರ ದಾಸೋಹ ಯೋಜನೆಯ ಬಿಸಿ ಊಟದ ಬಡ ಮಹಿಳೆಯರು ವೇತನ ಹೆಚ್ಚಳ, ಕೆಲಸದ ಭದ್ರತೆ, ಪಿಂಚಣಿ ಹೀಗೆ ಮೊದಲಾದ ಬೇಡಿಕೆಗಳನ್ನು ಈಡೇರಿಸಲು ಸರಕಾರಕ್ಕೆ ಕೇಳಬಾರದೆ?. ನಿಮ್ಮ ಕಿವುಡ ಸರಕಾರಕ್ಕೆ ಬೇಡಿಕೆಗಳ ಕುರಿತು ಒತ್ತಾಯ ಮಾಡಲು ಬಂದರೆ ಸಂಘಟನೆಯ ಮುಖಂಡರನ್ನು ಬಂಧನ ಮಾಡಿ ಈಡಿ ಚಳುವಳಿಯನ್ನು ಮುರಿಯಲು ಹಾಗೂ ಪೊಲೀಸರ ಮೂಲಕ ಮಹಿಳೆಯರನ್ನು ಹೆದರಿಸುತ್ತಿರುವದು ನಾಚಿಗೇಡಿನ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜಿ.ಎಂ. ಜೈನೆಖಾನ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಬಿಸಿ ಊಟದ ನೌಕರರು ಹೋರಾಟ ನಡೆಸಲು ಮುಂದಾದಾಗ ಅವರ ಬೇಡಿಕೆಗಳಿಗೆ ಸ್ಪಂದಿಸದೆ 144 ಕಲಂ ಜಾರಿ ಮಾಡಿ ಮುಖಂಡರಾದ ಎಸ್. ವರಲಕ್ಷ್ಮೀರವರನ್ನು ಬಂಧನ ಮಾಡಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯ ನಾಶ ಮಾಡಲು ಹೊರಟ್ಟಂತಿದೆ. ಕಾರಣ ಬಂಧನದಲ್ಲಿರಿಸಿದ ಮುಖಂಡರಾದ ಎಸ್. ವರಲಕ್ಷ್ಮೀರವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಬಿಸಿ ಅಡುಗೆ ನೌಕರರಿಗೆ ಹೋರಾಟ ಮಾಡಲು ಅವಕಾಶ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಶಕುಂತಲಾ ಶಿರಸಂಗಿ, ಶ್ವೇತಾ ಕೊಳ್ಳಿ, ಬೋರಮ್ಮಾ ತೆಕ್ಕಿ, ರೇಖಾ ಪಟ್ಯಾಳ, ವಿಜಯಲಕ್ಷ್ಮೀ ಸಿದ್ದಿಬಾಂವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.