ಬೆಂಗಳೂರು, ಜ.9 ,ಮಾಸಿಕ ಕನಿಷ್ಠ 12 ಸಾವಿರ ಗೌರವಧನ, ಪಿಂಚಣಿ ಸೇರಿದಂತೆ 12 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ನಗರದ ಪುರಭವನದ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.ಸಂಘದ ಅಧ್ಯಕ್ಷೆ ಡಿ.ನಾಗಲಕ್ಷ್ಮಿ ಮಾತನಾಡಿ, ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರ ಶೋಷಣೆ ನಡೆಯುತ್ತಿದೆ. ಎರಡು ಗಂಟೆ ಕೆಲಸ ಮಾಡಿದರೆ ಸಾಕು ಎಂಬ ಭರವಸೆಯಲ್ಲಿ ನೇಮಕಾತಿ ಮಾಡಲಾಗಿತ್ತು. ಈಗ ಎರಡು ಗಂಟೆ ವಿಶ್ರಾಂತಿಯೂ ಇಲ್ಲವಾಗಿದೆ. ಕೆಲಸಕ್ಕೆ ತಕ್ಕ ಗೌರವಧನ ಕೂಡ ನೀಡುತ್ತಿಲ್ಲ. ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವೇತನವನ್ನೂ ನಮಗೆ ನೀಡುತ್ತಿಲ್ಲ ಎಂದು ದೂರಿದರು.
ಪ್ರತಿ ತಿಂಗಳು ನಿಗದಿತ ದಿನದಂದು ಗೌರವಧನ ಪಾವತಿಸಬೇಕು. ಸಮೀಕ್ಷೆ ಮತ್ತು ಸಭೆಗಳಿಗೆ ಪ್ರತ್ಯೇಕ ಭತ್ಯೆ ನೀಡಬೇಕು. ಆಶಾ ಕಾರ್ಯಕರ್ತೆಯರ ನೇಮಕಾತಿಯ ಬಳಿಕ ತಾಯಿ ಮತ್ತು ಶಿಶುಗಳ ಮರಣ ಪ್ರಮಾಣ ಇಳಿದಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸೂಚ್ಯಂಕಗಳಲ್ಲಿ ಏರಿಕೆಯಾಗಿದೆ. ತಿಂಗಳಲ್ಲಿ ಮೂರರಿಂದ ನಾಲ್ಕು ಸಮೀಕ್ಷೆ ಮಾಡಿಸುತ್ತಿದ್ದಾರೆ. ಕುಟುಂಬ ಮತ್ತು ಮಕ್ಕಳಿಗೆ ಸಮಯ ನೀಡಲಾಗದ ಪರಿಸ್ಥಿತಿ ಇದೆ. ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡಬೇಕಾದ ಸ್ಥಿತಿ ಇದೆ. ಆಶಾ ಕಾರ್ಯಕರ್ತೆಯರ ಸುರಕ್ಷತೆಯ ಬಗ್ಗೆ ಸರ್ಕಾರ ಯಾವ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.