ರಾಜ್ಯಾದ್ಯಂತ ನಿಷೇಧಾಜ್ಞೆ ನಡುವೆಯೂ ಪ್ರತಿಭಟನೆ; ಮಂಗಳೂರಿನಲ್ಲಿ ಕರ್ಪ್ಯೂ; 100ಕ್ಕೂ ಅಧಿಕ ಮಂದಿ ಬಂಧನ

ಬೆಂಗಳೂರು, ಡಿ.19:     ನಿಷೇಧಾಜ್ಞೆ ನಡುವೆಯೂ ಪೌರತ್ವ ಕಾಯ್ದೆ ಹಾಗೂ ಎನ್ಆರ್ಸಿ ಜಾರಿ ವಿರೋಧಿಸಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆದಿದ್ದು, ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಪೊಲೀಸರು ಗುಂಡು ಹಾರಿಸಿದ್ದು, ಕರ್ಪ್ಯೂ ಜಾರಿ ಮಾಡಲಾಗಿದೆ.

ಪ್ರತಿಭಟನೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ  ಮಂಗಳೂರು ಕೇಂದ್ರ ವಿಭಾಗದ ವ್ಯಾಪ್ತಿಯಲ್ಲಿ ಕರ್ಪ್ಯೂ ಹೇರಲಾಗಿದೆ. 

ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು  ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಪ್ರಯೋಗ ಮಾಡಿದರು.  ಬಳಿಕ ಗುಂಡು ಹಾರಿಸಿದರು.  

ಮಂಗಳೂರಿನ ಸ್ಟೇಟ್  ಬ್ಯಾಂಕ್ ಬಳಿ ಲಾಠಿ ಪ್ರಹಾರ ನಡೆದ ಪರಿಣಾಮ ನಗರದಾದ್ಯಂತ ವಾಹನ ದಟ್ಟಣೆ ಉಂಟಾಗಿತ್ತು.  ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ರಾವ್ ಆ್ಯಂಡ್ ರಾವ್ ವೃತ್ತದಲ್ಲಿ ಪೊಲೀಸರು  ಕೆಲ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸಿದರು. ಜಿಲ್ಲೆಯಲ್ಲಿ  ನಿಷೇದಾಜ್ಞೆ ನಡುವೆಯೂ  ಕೆಲ ಕಿಡಿಗೇಡಿಗಳು ನಗರ ಮಧ್ಯಭಾಗದ ಬಲ್ಮಠದ ಶಾಂತಿ ನಿಲಯ ಆವರಣದ ಆಲದ ಮರಕ್ಕೆ ಬೆಂಕಿ  ಹಚ್ಚಿದ್ದರು. 

ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಪ್ರಕರಣಕ್ಕೆ ಸಂಬಂಧಿಸಿದಂತೆ 

ಕದ್ರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

ಬೆಂಗಳೂರು ನಗರದಲ್ಲಿಂದು ಪುರಭವನ ಮುಂಭಾಗ ಹಾಗೂ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಿಐಟಿಯು, ಸಿಪಿಎಂ, ಪ್ರಗತಿಪರ ಸಂಘಟನೆಗಳ ಸದಸ್ಯರು, ಚಿಂತಕರು, ಸಾಹಿತಿಗಳು ಹಾಗೂ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು, 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ ಹಿನ್ನೆಲೆ ಪ್ರತಿಭಟನೆ ನಡೆಸದಂತೆ ಎಚ್ಚರಿಕೆ ನೀಡಿದರು. 

ನಗರದ ಎಸ್ಜೆಪಿ ರಸ್ತೆ, ಶಿವಾಜಿನಗರ ವೃತ್ತ ಸೇರಿ ಹಲವೆಡೆ ಮುಸ್ಲಿಮರು ಸ್ವಯಂ ಪ್ರೇರಿತವಾಗಿಯೇ ಕಾಯ್ದೆ ವಿರೋಧಿಸಿ, ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಪರಿಣಾಮ, ನಗರದ  ಎಲ್ಲೆಡೆ ಸಂಚಾರ ದಟ್ಟಣೆ  ಉಂಟಾಗಿತ್ತು.  

ಪುರಭವನದ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಸೇರಿದಂತೆ ನೂರಾರು ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದರು. 

ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಅಸಾಂವಿಧಾನಿಕ ವಾದುದು. ಅಲ್ಲದೇ ಇದು ದೇಶದ ಅಭದ್ರತೆ ಮತ್ತು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ.  ದೇಶವಾಸಿಗಳನ್ನು ಧರ್ಮದ ಆಧಾರದಲ್ಲಿ ವಿಭಜಿಸುವ, ಕೋಮು ಸೌಹಾರ್ದ ನಾಶ ಮಾಡುವ, ಕೋಮು ವಿಷ ಬೀಜ ಬಿತ್ತುವ ಹಾಗೂ ಮಾನವೀಯತೆಗೆ ವಿರುದ್ಧವಾಗಿದ್ದರಿಂದ  ಕೂಡಲೇ ಇದನ್ನು ರದ್ದುಪಡಿಸಬೇಕು ಎಂದು ಪ್ರತಿಭಟನಕಾರರು  ಒತ್ತಾಯಿಸಿದರು. 

ಕೇಂದ್ರ ಸರ್ಕಾರ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮಸೂದೆ ಮಂಡನೆ ಮಾಡುವ ಸಂದರ್ಭದಲ್ಲಿ ಭಾರತದಲ್ಲಿನ ಮುಸ್ಲಿಂ ಸಮುದಾಯದವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಬಹುದಿತ್ತು. ಆದರೆ, ಆ ರೀತಿ ಮಾಡದೆ ದೇಶದ್ಯಾಂತ ವಿನಾಕಾರಣ ಗೊಂದಲಕ್ಕೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ವಂಶಪಾರ್ಯಂಪರ್ಯವಾಗಿ ಭಾರತದಲ್ಲೇ ಹುಟ್ಟಿ, ಬೆಳೆದವರು ತಮ್ಮ ಪೌರತ್ವ ರುಜುವಾತುಪಡಿಸಬೇಕು ಎನ್ನುವ ಮಾತೇ ಸರಿ ಅಲ್ಲ. ಪೌರತ್ವ ರುಜುವಾತುಪಡಿಸಲು ಅಗತ್ಯ ದಾಖಲೆಗಳಿಗೆ ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಇಲ್ಲಿಯೇ ಹುಟ್ಟಿ ಬೆಳೆದವರು ಪೌರತ್ವದ ದಾಖಲೆ ತೋರಿಸಬೇಕು ಎನ್ನುವ ಅಂಶ ಬಹಳ ನೋವಿನ ವಿಚಾರ. ಹಾಗಾಗಿ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ತಿದ್ದುಪಡಿಯನ್ನಾದರೂ ತರಬೇಕು ಇಲ್ಲವೇ ತಕ್ಷಣವೇ ರದ್ದುಪಡಿಸಬೇಕು ಎಂದು ಬಂಧನಕ್ಕೊಳಗಾದ ವಿದ್ಯಾರ್ಥಿಗಳು ಒತ್ತಾಯಿಸಿದರು. 

ಆಥರ್ಿಕ ಕುಸಿತ, ಜಿಡಿಪಿ ದರ ಇಳಿಕೆ, ಬೆಲೆ ಏರಿಕೆ ಮುಂತಾದ ಜ್ವಲಂತ ಸಮಸ್ಯೆಗಳಿಂದ ಜನರು ತೀವ್ರ ತೊಂದರೆಯಲ್ಲಿ ಇದ್ದಾರೆ. ಅಂತಹ ಸಮಸ್ಯೆಗಳನ್ನು ಬಗೆಹರಿಸುವ ಬದಲಿಗೆ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯಂತಹ ಅಸಾಂವಿಧಾನಿಕ, ಮಾನವೀಯ ವಿರೋಧ ಕಾಯ್ದೆಗೆ ಆಸಕ್ತಿ ತೋರುತ್ತಿದೆ. 

ತನ್ನ ವೈಫಲ್ಯವನ್ನು ಮರೆಮಾಚಲು, ದೇಶದ ಜನರ ಗಮನ ಬೇರೆಡೆಗೆ ಸೆಳೆಯಲು ಇಂತಹ ಕಾಯ್ದೆ, ಕಾನೂನು ಬಗ್ಗೆ ಮಾತನಾಡುತ್ತಿದೆ. ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವಂತಹ ಈ ಕಾಯ್ದೆಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು. 

ದೇಶವನ್ನು ಧರ್ಮ-ಜಾತಿಯ ಆಧಾರದಲ್ಲಿ ಒಡೆದು ಆಳುವ ನೀತಿಯನ್ನು ತಮ್ಮದಾಗಿಸಿಕೊಂಡು ರಾಜಕೀಯದ ಮೂಲಕ ಅಧಿಕಾರದಲ್ಲಿರುವ ಬಿಜೆಪಿ  ಮಹಿಳೆಯರ ಮೇಲಿನ ಅತ್ಯಾಚಾರ ಇತ್ಯಾದಿಗಳನ್ನು ಜನರ ಮನಸ್ಸಿನಿಂದ ಬೇರೆಡೆಗೆ ಸೆಳೆಯಲು ಅನೇಕ ಭಾವನಾತ್ಮಕ ವಿಷಯಗಳನ್ನು ಬಳಕೆ ಮಾಡುತ್ತಿದೆ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ದೂರಿದರು. 

 ನಾನು ಗಾಂಧೀಜಿ ಅವರ ಭಾವಚಿತ್ರ  ಹಿಡಿದು ಕೊಂಡು ಸಂವಿಧಾನದ ಕುರಿತು ಟೌನ್ ಹಾಲ್ ಬಳಿ ಮಾಧ್ಯಮದೊಂದಿಗೆ ಮಾತನಾಡುತ್ತಿದ್ದಾಗಲೇ ಪೊಲೀಸರು ನನ್ನನ್ನು ಬಂಧಿಸಿದ್ದಾರೆ. ಪೊಲೀಸರು ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಕೆಲಸ ಮಾಡುತ್ತಿದ್ದಾರೆ. ಪಕ್ಷಪಾತದಿಂದ ಕೂಡಿರುವ ಕಾಯ್ದೆಯ ವಿರುದ್ಧ ನಾವೆಲ್ಲರೂ ಅಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಎಲ್ಲರೂ ಶಾಂತಿಯುತವಾಗಿಯೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ನಿಮಗೆ ಏನಾದರೂ ಹಿಂಸೆ ಕಾಣಿಸಿದೆಯೇ ಎಂದು ಅವರು ಪ್ರಶ್ನಿಸಿದರು. 

ಈ ಸಂದರ್ಭದಲ್ಲಿ ಹೋರಾಟಗಾರರಾದ ಜಿ.ಎನ್.ನಾಗರಾಜ್, ವಿ.ಎಸ್.ವಿಮಲಾ, ಜ್ಯೋತಿ ಅನಂತ್ ಸುಬ್ಬರಾವ್, ಎಸ್.ವರಲಕ್ಷ್ಮೀ ಸೇರಿ ಹಲವರನ್ನು ಪೊಲೀಸರು  ವಶಕ್ಕೆ ಪಡೆದರು.  

ಕನ್ನಡ ಚಳವಳಿ ಹಾಗೂ ವಾಟಾಳ್ ಪಕ್ಷದ ಅಧ್ಯಕ್ಷ, ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ನಗರದ ಡಾಲರ್ಸ್ ಕಾಲೋನಿಯಲ್ಲಿರುವ ವಾಟಾಳ್ ಮನೆಯಲ್ಲಿ ಪೋಲಿಸರು ಅವರನ್ನು ವಶಕ್ಕೆ ಪಡೆದು, ಪೋಲಿಸ್ ವಾಹನದಲ್ಲೆ ಮುಂದಿನ ಸೀಟ್ ನಲ್ಲಿ ಕುರಿಸಿಕೊಂಡು ಸದಾಶಿವನಗರ ಪೋಲಿಸ್ ಠಾಣೆಗೆ ಅವರನ್ನು ಕರೆದುಕೊಂಡು ಹೋದರು.  

ಮಹಿಳಾ ಪ್ರತಿಭಟನಕಾರರನ್ನು ವಶಕ್ಕೆ ಪಡೆಯುವ ವೇಳೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯ ಕೊರತೆ ಕಾಣಿಸಿತು. ಹೋರಾಟಗಾರ್ತಿ ಎಸ್.ವರಲಕ್ಷ್ಮೀ ಸೇರಿದಂತೆ ಹಲವು ವಿದ್ಯಾರ್ಥಿನಿಗಳನ್ನು ಪುರುಷ ಪೊಲೀಸರೇ ಎಳೆದಾಡಿದ ಪ್ರಸಂಗ ನಡೆಯಿತು. 

ಟೌನ್ ಹಾಲ್ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜನೆಗೊಳಿಸಲಾಗಿದೆ.  

ಟೌನ್ ಹಾಲ್, ಕೆ ಆರ್ ಮಾರುಕಟ್ಟೆ, ಎಸ್ ಪಿ ರಸ್ತೆ, ಮೆಜೆಸ್ಟಿಕ್, ವಿಧಾನಸೌಧ, ರಾಜಭವನ ಸುತ್ತಮುತ್ತ ಭಾರಿ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಡಿದರು.  ಇನ್ನೂ ಮಂಗಳೂರಿನಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ತಾಳಿದ್ದು, ಪೊಲೀಸರ ಮೇಲೆಯೇ ಪ್ರತಿಭಟನೆ ಕಾರರು ಕಲ್ಲು ತೂರಾಟ ನಡೆಸಿದರು.  

ಚಿಕ್ಕಬಳ್ಳಾಪುರದಲ್ಲಿ  ಪೌರತ್ವ ಕಾಯಿದೆ ವಿರೋಧಿಸಿ ಸಿಪಿಎಂ ಮುಖಂಡ ಮುನಿವೆಂಕಟಪ್ಪ ನಗರದ ವಿಶ್ವವಿವೇಕ ಪಿಯು ಕಾಲೇಜಿನಲ್ಲಿ  ವಿದ್ಯಾರ್ಥಿಗಳನ್ನು ಗುಂಪುಗೂಡಿಸಿ ಭಾಷಣ ಮಾಡುವ ಮೂಲಕ ವಿಭಿನ್ನವಾಗಿ ಹೋರಾಟ ಮಾಡಿದರು. 

ಇನ್ನೂ ಕೋಲಾರದ ಹೊಸ ಬಸ್ ನಿಲ್ದಾಣದ ಸರ್ಕಲ್ ಬಳಿ ಸಿಪಿಎಂ , ಜನಾಧಿಕಾರ, ಎಸ್ ಎಪ್ ಐ ಸಂಘಟನೆಗಳ ಕಾರ್ಯಕರ್ತರು ಬಾವುಟ ಹಿಡಿದು ಪ್ರತಿಭಟನೆ ನಡೆಸಿದರು.  ನಿಷೇಧಾಜ್ಞೆ ಹಿನ್ನೆಲೆ ಪ್ರತಿಭಟನೆ ನಡೆಸಲು ಮುಂದಾದ ಹಿನ್ನಲೆಯಲ್ಲಿ ಪೊಲೀಸ್ ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಕ್ಸಮರ ನಡೆಯಿತು. ಈ ಸಂದರ್ಭದಲ್ಲಿ ಹಲವು ಕಾರ್ಯಕರ್ತರನ್ನು ಪೊಲೀಸರನ್ನು ಬಂಧಿಸಿದರು.   

ಗದಗ  ಜಿಲ್ಲೆಯ ಗಜೇಂದ್ರಗಡ ತಾಲೂಕಿನಲ್ಲಿ ಪೌರತ್ವ ತಿದ್ದುಪಡಿ ಖಂಡಿಸಿ ಪ್ರತಿಭಟನೆ ನಡೆಸುವ  ವೇಳೆ ಗಜೇಂದ್ರಗಡ ಸಿಪಿಐಎಂ ಹಾಗೂ ಪ್ರಗತಿಪರ ಸಂಘಟನೆಯ ಕಾರ್ಯಕರ್ತರು ಹಾಗೂ ರಂಗಕರ್ಮಿ  ಎಸ್ ಪ್ರಸನ್ನ ಸೇರಿ ಐದತ್ತಕ್ಕೂ ಹೆಚ್ಚು ಪ್ರತಿಭಟನಕಾರರನ್ನು ಪೊಲೀಸರು  ಬಂಧಿಸಿದರು.