ಲೋಕದರ್ಶನ ವರದಿ
ರಾಯಬಾಗ 04: ಸ್ಥಳೀಯ ನ್ಯಾಯವಾದಿ ಆರ್.ಎಲ್.ಅಸೋದೆ ಅವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವುದನ್ನು ಮತ್ತು ನ.2 ರಂದು ದೆಹಲಿಯ ತೀಸ ಹಜಾರೆ ನ್ಯಾಯಾಲಯದ ಆವರಣದಲ್ಲಿ ನ್ಯಾಯವಾದಿಗಳ ಮೇಲೆ ಪೊಲೀಸರು ಹಲ್ಲೆ ಮಾಡಿರುವುದನ್ನು ಖಂಡಿಸಿ ಸ್ಥಳೀಯ ನ್ಯಾಯವಾದಿಗಳ ಸಂಘದ ಸದಸ್ಯರು ಸೋಮವಾರದಂದು ನ್ಯಾಯಾಲಯದ ಕಾರ್ಯಕಲಾಪಗಳಿಂದ ಹೊರಗುಳಿದು ಪ್ರತಿಭಟಿಸಿದರು.
ಕಳೆದ ಅ.26 ರಂದು ನ್ಯಾಯವಾದಿ ಆರ್.ಎಲ್.ಅಸೋದೆ ಅವರ ಮೇಲೆ ಹಲ್ಲೆ ಮಾಡಿದ ವ್ಯಕ್ತಿ ಮೇಲೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪೊಲೀಸ್ ಠಾಣೆಯಲ್ಲಿ ಜಾಮೀನು ಪಡೆದು, ಮತ್ತೇ (ಸೋಮವಾರ) ಇಂದು ಬೆಳಿಗ್ಗೆ ನ್ಯಾಯವಾದಿ ಅಸೋದೆ ಅವರ ಮನೆಗೆ ತೆರಳಿ ಜೀವ ಬೆದರಿಕೆ ಹಾಕಿ, ಕೊಲೆ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಿ, ಆತನ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ನ್ಯಾಯವಾದಿಗಳು ರಾಯಬಾಗ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ನ್ಯಾಯವಾದಿ ಟಿ.ಕೆ.ಶಿಂಧೆ ಮಾತನಾಡಿ, ನ್ಯಾಯವಾದಿಗಳ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಉಗ್ರವಾಗಿ ಖಂಡಿಸುತ್ತೇವೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು, ನ್ಯಾಯವನ್ನು ಕೊಡಿಸು ನ್ಯಾಯವಾದಿಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.
ಪಿಎಸ್ಐ ಈರಪ್ಪರತ್ತಿ ಮಾತನಾಡಿ, ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳವುದಾಗಿ ಭರವಸೆ ನೀಡಿದ ನಂತರ, ನ್ಯಾಯವಾದಿಗಳು ಪ್ರತಿಭಟನೆ ಹಿಂಪಡೆದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ, ಉಪಾಧ್ಯಕ್ಷ ಕೆ.ಎಮ್.ಮಡಿವಾಳ, ಕಾರ್ಯದಶರ್ಿ ಆರ್.ಎಸ್.ಹೊಳೆಪ್ಪಗೋಳ, ನ್ಯಾಯವಾದಿಗಳಾದ ಆರ್.ಎಸ್.ಶಿರಗಾಂವೆ, ಜಿ.ಎಸ್.ಪವಾರ, ಎ.ಎಮ್.ಗೆಜ್ಜೆ, ಆರ್.ಎ.ಗೆನ್ನೆವರ, ಎಸ್.ಪಿ.ಕಾಂಬಳೆ, ಕೆ.ಆರ್.ಕೋಟಿವಾಲೆ, ಎ.ಬಿ.ಸರವ, ಎ.ಬಿ.ತೆಗೂರ, ಡಿ.ಕೆ.ಮನಗುತ್ತಿ, ಪಿ.ಆರ್.ಗುಡೋಡಗಿ, ಆರ್.ಎಸ್.ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.