ಬೆಳಗಾವಿ 16: ಮನೆ ಪಲ್ಲಕ್ಕಿ ಹೊರುವ ಮೂಲತ ಭೋವಿ ಜನಾಂಗಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ, ಅಖಿಲ ಕರ್ನಾಟಕ ಭೋವಿ ಸಮಾಜ ವಿವಿದೋದ್ದೇಶ ಕಲ್ಯಾಣ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಭೋವಿ ಜಾತಿಯವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಾಗ ಕೇವಲ ಭೋವಿ ಎಂದು ಪರಿಗಣಿಸುವುದರ ಜೊತೆಗೆ ಸಮಾನಾಂತರ ವಡ್ಡರ ಜಾತಿಯ ಉಪಜಾತಿಗಳ ಪದ ಬಳಿಸಬಾರದು. ಭೋವಿ ನಿಗಮದ ಹೆಸರು ವಡ್ಡರ ಎಂದು ನಾಮಕರಣ ಮಾಡಲು ಮುಂದಾಗುತ್ತಿದ್ದಾರೆ. ಹೀಗಾಗಿ ನಿಗಮ ಭೋವಿ ಜಾತಿಯ ಹೆಸರಿನಲ್ಲಿಯೇ ಮುಂದುವರಿಸಬೇಕು. ಈ ಸಮುದಾಯದ ಸಮಾನಾಂತರ ಉಪಜಾತಿಗಳನ್ನು ಭೋವಿ ಜಾತಿಯ ಪಟ್ಟಿಯಿಂದ ಹೊರಗೆಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಮುದಾಯಕ್ಕೆ ರಾಜಕೀಯವಾಗಿ ಮೀಸಲಾತಿ ಕಲ್ಪಿಸಬೇಕು. ಮೂಲ ಭೋವಿ ಸಮುದಾಯದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶಾಲೆ, ವಸತಿ ನಿಲಯಗಳನ್ನು ನಿರ್ಮಿಸಬೇಕು. ಹುಬ್ಬಳ್ಳಿ, ಧಾರವಾಡನಲ್ಲಿ ಭೋವಿ ಸಮುದಾಯದ ಭವನ ನಿರ್ಮಿಸಲು ಸರಕಾರ ನಿವೇಶನ ಒದಗಿಸಬೇಕು. ಹಿಂದಿನಿಂದಲೂ ಎಸ್.ಸಿ ಪ್ರಮಾಣ ಪತ್ರ ಪಡೆಯುತ್ತಿರುವ ಸಮುದಾಯಕ್ಕೆ ಪ್ರಮಾಣ ಪತ್ರ ನೀಡಲು ನಿರಾಕರಿಸುತ್ತಿರುವ ಹಿರಿಯ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರಕಾರ ಮುಂಬರುವ ದಿನಗಳಲ್ಲಿ ಈ ಎಲ್ಲ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ನವಲಗುಂದದಿಂದ ಪಾದಯಾತ್ರೆ ಪ್ರಾರಂಭಿಸಿ, ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಉಗ್ರ ಹೋರಾಟ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಸರಕಾರಕ್ಕೆ ಎಚ್ಚರಿಕೆ ನೀಡಿದರು.