ಎಡದಂಡೆ ಕಾಲುವೆಗೆ ಏಪ್ರಿಲ್ 20ರವರೆಗೆ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆ
ಕೊಪ್ಪಳ 03: 123ನೇ ನೀರಾವರಿ ಸಲಹಾ ಸಮಿತಿಯಲ್ಲಿ ಏಪ್ರಿಲ್ 10 ವರೆಗೆ ನೀರು ಹರಿಸುತ್ತೇವೆ ಎಂದು ಸರ್ಕಾರ ಹಾಗೂ ಸಚಿವರಾದ ಶಿವರಾಜ ತಂಗಡಗಿ ರವರು ಹೇಳಿ, ಈಗ ರೈತರ ವಿಷಯದಲ್ಲಿ ನಿರ್ಲಕ್ಷ ತೋರುತ್ತಿದ್ದಾರೆ ಎಂದು ಶರಣೆಗೌಡ ರವರು ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಕೊಪ್ಪಳ ನಗರದ ಪತ್ರಿಕಾ ಭವನದಲ್ಲಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷ ಶರಣಗೌಡ ಕೆಸರಟ್ಟಿ ಸುದ್ದಿಗಾರರೊಂದಿಗೆ ಮಾತನಾಡಿ,ಕಲಬುರ್ಗಿಯ ವಿಭಾಗದ ಪ್ರಾದೇಶಿಕ ಆಯುಕ್ತರು ಅಧಿಕೃತವಾಗಿ ತುಂಗಭದ್ರಾ ಎಡದಂಡೆಯ ಮುಖ್ಯಕಾಲುವೆಗೆ ಕುಡಿಯುವ ನೀರು ಒಳಗೊಂಡಂತೆ ನಿಂತ ಬೆಳೆಗಳ ಸಂರಕ್ಷಣೆ ಸಲುವಾಗಿ 3800 ಕ್ಯೂಸೇಕ್ಸ್ ನೀರನ್ನು ಏಪ್ರಿಲ್ 01 ರಿಂದ ಏಪ್ರಿಲ್ 05 ರವರೆಗೆ ಹರಿಸಲಾಗುವುದು ಎಂದು ಆದೇಶ ಮಾಡಿದ್ದಾರೆ.
ಈ ಆದೇಶವು ಎಡ ದಂಡೆ ಭಾಗದ ರೈತರ ಪಾಲಿಗೆ ಮರಣಶಾಸನವಾಗಿ ಮಾರ್ದಲಿದ್ದು, ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ನೀರಿಗಾಗಿ ಹೋರಾಟ ಮಾಡುವುದು ಇಂದು ಅನಿವಾರ್ಯವಾಗಿದೆ.ರಾಜ್ಯ ಸರ್ಕಾರ ರೈತರ ಪಾಲಿಗೆ ಇದ್ದು ಇಲ್ಲದಂತಾಗಿದೆ ಏಪ್ರಿಲ್ 10ರವರೆಗೆ ನೀರು ಕೊಡುತ್ತೇವೆ ಎಂದು ಭರವಸೆಯನ್ನು ನೀಡಿದ ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳು ಕೊಟ್ಟ ಮಾತನ್ನು ತಪ್ಪಿದೆ, ಏಪ್ರಿಲ್ 20 ರವರೆಗೆ ನೀರನ್ನು ಕಡಾ ಖಂಡಿತವಾಗಿ ಬೆಳೆಗಳಿಗೆ ಹರಿಸಬೇಕು, ಎಡದಂಡೆ ಭಾಗದ ರೈತರ ಬೆಳೆಗಳು ಒಣಗಿದರೆ ಮತ್ತು ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾದರೆ ಅದಕ್ಕೆ ರಾಜ್ಯ ಸರ್ಕಾರ ಮತ್ತು ಎಡದಂಡೆ ಭಾಗದ ಜನಪ್ರತಿನಿಧಿಗಳ ನೇರ ಹೊಣೆಯಾಗಲಿದ್ದಾರೆ.ಕಲಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹೊರಡಿಸಿರುವ ಆದೇಶದಲ್ಲಿ ಅಚ್ಚರಿಯ ಅಂಶಗಳು ಬೆಳಕಿಗೆ ಬಂದಿವೆ.
ಕರ್ನಾಟಕ ನೀರಾವರಿ ನಿಗಮ ನಿಯಮಿತ ನೀರಾವರಿ ಕೇಂದ್ರ ವಲಯ ಮುನಿರಾಬಾದ್ ನ ಮುಖ್ಯ ಇಂಜಿನಿಯರ್ ಅವರುಗಳು ಸಲ್ಲಿಸಿರುವ ವರದಿಯನಾಧರಿಸಿ, ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ರಾಯಚೂರು ಜಿಲ್ಲಾಧಿಕಾರಿಗಳು ಏಪ್ರಿಲ್ 01ರಿಂದ ಏಪ್ರಿಲ್ 5ರವರೆಗೆ ಎಡದಂಡೆ ಕಾಲುವೆಗೆ ಕುಡಿಯುವ ನೀರು ಹಾಗೂ ನಿಂತ ಬೆಳೆಗಳ ಸಂರಕ್ಷಣೆಗಾಗಿ 3800 ಕ್ಯೂಸೆಕ್ಸ್ ನಂತೆ ನೀರು ಹರಿಸುವುದಾಗಿ ಆದೇಶವನ್ನು ಹೊರಡಿಸಲಾಗಿದೆ. ಈ ಆದೇಶದಲ್ಲಿ ನೀರಿನ ಲಭ್ಯತೆ ಹಂಚಿಕೆಯಲ್ಲಿ ಲೆಕ್ಕಾಚಾರ ತಪ್ಪಾಗಿ ಸೂಚಿಸಿ ರೈತರ ಬೆಳೆಗಳಿಗೆ ಸಮರ್ಕ ನೀರು ನೀಡದೆ ಪರ್ಯಾಯವಾಗಿ ನೀರನ್ನು ಎಡದಂಡೆ ಭಾಗದ ರಾಜಕಾರಣಿಗಳು ಸ್ವಾರ್ಥಕ್ಕಾಗಿ ಫ್ಯಾಕ್ಟರಿಗಳಿಗೆ ಮಾರಾಟ ಮಾಡಬಹುದು ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸರ್ಕಾರದ ಈ ಲೆಕ್ಕಾಚಾರವನ್ನು ಅಖಿಲ ಕರ್ನಾಟಕ ರಾಜ್ಯ ರೈತ ಸಂಘ ಸಂಪೂರ್ಣವಾಗಿ ವಿರೋಧಿಸುತ್ತದೆ. ಏಪ್ರಿಲ್ 08 ರಂದು ಗಂಗಾವತಿ ಮತ್ತು ಕಾರಟಗಿ ಎರಡು ತಾಲೂಕುಗಳನ್ನು ಸಂಪೂರ್ಣವಾಗಿ ಬಂದು ಮಾಡಲಾಗುತ್ತದೆ ಈ ಬಂದ್ ಕರೆಯಲ್ಲಿ ವಿವಿಧ ರೈತ ಪರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಭಾಗವಹಿಸಲಿದ್ದು ಒಕ್ಕುರುಳ ಕೂಗಿನೊಂದಿಗೆ ರೈತರ ಬೆಳೆ ಸಂರಕ್ಷಣೆಗಾಗಿ ಆಗ್ರಹಿಸಿ ಸರ್ಕಾರದ ವಿರೋಧ ನೀತಿಯನ್ನು ಖಂಡಿಸಲಾಗುತ್ತದೆ.
ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಕರೆಯಲ್ಲಿ ಭಾಗವಹಿಸಲು ಕರೆ ನೀಡಲಾಗುತ್ತದೆ, ಏಪ್ರಿಲ್ 09,2025 ರಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರ ಗೃಹ ಕಚೇರಿಗೆ ವಿವಿಧ ಸಂಘಟನೆಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ರೈತರೊಂದಿಗೆ ಮುತ್ತಿಗೆ ಹಾಕಿ ರೈತರ ಬೆಳೆ ಉಳಿಸಲು ನೀರಿಗಾಗಿ ಪ್ರತಿಭಟಿಸಲಾಗುತ್ತದೆ. ರೈತರ ವಿಷಯದಲ್ಲಿ ಸಚಿವ ಶಿವರಾಜ ತಂಗಡಗಿ ರವರ ನಿರ್ಲಕ್ಷತನ ಸರಿಯಲ್ಲ ಎಂದು ಹೇಳಿದರು.
ನಂತರ ರಾಜ್ಯ ಉಪಾಧ್ಯಕ್ಷರಾದ ಕೊತ್ವಾಲ್ ಶರಣಪ್ಪ ಮಾತನಾಡಿ, ಇಂದಿನ ಸರ್ಕಾರ ತುಂಗಭದ್ರಾ ಕಾಡಾ ಕಚೇರಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಮಾಡುತ್ತಿದ್ದರು, ಜಿಲ್ಲೆಯ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ರವರು ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಮಾಡುತ್ತಿದ್ದಾರೆ ಇದು ನಿಜಕ್ಕೂ ದುರದೃಷ್ಟಕರ. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತರು ಪಾಲ್ಗೊಳ್ಳುತ್ತಿದ್ದೆವು ಸಂಪೂರ್ಣ ಮಾಹಿತಿ ದೊರೆಯುತ್ತಿತ್ತು, ಮತ್ತೆ ಸಚಿವ ಶಿವರಾಜ ತಂಗಡಗಿ ರವರು ಹಾಗೂ ಸರ್ಕಾರವು ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯ ಕಾಡಾ ಕಚೇರಿಯಲ್ಲಿಯೇ ನೀರಾವರಿ ಸಲ ಸಮಿತಿ ಸಭೆ ನಡೆಯಬೇಕು ಎಂದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.