ಪಿಂಚಣಿ ವಂಚಿತ ಶಿಕ್ಷಕರಿಂದ ಪ್ರತಿಭಟನೆ

ಬೆಂಗಳೂರು, ಜ.10 ,ಪಿಂಚಣಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜು ಪಿಂಚಣಿ ವಂಚಿತ ಶಿಕ್ಷಕರ ಸಂಘದ ಸದಸ್ಯರು ಪುರಭವನದ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.ರಾಜ್ಯದ ಮೂಲೆ ಮೂಲೆಗಳಿಂದ ಶಿಕ್ಷಕರು ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.ಪ್ರತಿಭಟನಕಾರರನ್ನು ಉದ್ದೇಶಿಸಿ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ ಮಾತನಾಡಿ, ರಾಜ್ಯದ ಬೀದರ್ನಿಂದ  ಚಾಮರಾಜನಗರ ಜಿಲ್ಲೆಯವರೆಗೆ ಎಲ್ಲಾ ಜಿಲ್ಲೆಗಳಿಂದ ಪಿಂಚಣಿ ವಂಚಿತ 10 ಸಾವಿರ ಶಿಕ್ಷಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಪ್ರಾಥಮಿಕ ಶಾಲೆಯಿಂದ ಹಿಡಿದು ಪದವಿವರೆಗಿನ ಎಲ್ಲಾ ಶಿಕ್ಷಕರು ಭಾಗಿಯಾಗಿದ್ದಾರೆ.  ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಇರುವ ಪಿಂಚಣಿ ಮಾದರಿಯಲ್ಲೇ ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರಿಗೂ ಪಿಂಚಣೆ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ದೇಶಾದ್ಯಂತ ಎನ್ಪಿಎಸ್ ಪಿಂಚಣಿ ಜಾರಿಯಲ್ಲಿದೆ. ಅದೇ ರೀತಿ ಕರ್ನಾಟಕದಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರಿಗೆ ಕೇವಲ ತಿಂಗಳ ವೇತನ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.ದೇಶದ ಎಲ್ಲಾ ರಾಜ್ಯಗಳಲ್ಲಿ ಅನುದಾನಿತ ಶಾಲೆ, ಕಾಲೇಜುಗಳ ಶಿಕ್ಷಕರಿಗೆ ಪಿಂಚಣಿಯನ್ನು ಆಯಾ ರಾಜ್ಯ ಸರ್ಕಾರವೇ ಕೊಡುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಶಾಲಾ ಆಡಳಿತ ಮಂಡಳಿ ಕೊಡುವಂತೆ ಸೂಚಿಸಲಾಗಿದೆ. ಆದರೆ ಶಾಲಾ ಆಡಳಿತ ಮಂಡಳಿ ಕೇವಲ ವೇತನ ಕೊಡುತ್ತಿದೆ. ಇದರಿಂದ ರಾಜ್ಯದ ಅನುದಾನಿತ ಶಾಲೆಗಳ ಶಿಕ್ಷಕರಿಗೆ ತೊಂದರೆಯಾಗುತ್ತಿದೆ. ಈ ಅನ್ಯಾಯವನ್ನು ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.ಇದೇ ಬೇಡಿಕೆಯನ್ನು ಮುಂದಿಟ್ಟು  ಕಳೆದ ವರ್ಷವೂ 11 ದಿನಗಳ ಕಾಲ ಧರಣಿ ನಡೆಸಲಾಗಿತ್ತು. ಆದರೆ ಬೇಡಿಕೆ ಈಡೇರಿಸಿಲ್ಲ. ಆದರೆ ಈ ಬಾರಿ ಬೇಡಿಕೆ ಈಡೇರದ ಹೊರತು ಧರಣಿ ಕೈಬಿಡುವುದಿಲ್ಲ. ಪಿಂಚಣಿ ಸಿಗುವವರೆಗೂ ಇಲ್ಲಿಂದ ಕದಡುವುದಿಲ್ಲ ಎಂದು ಎಚ್ಚರಿಸಿದರು. ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಎಸ್.ಉಮೇಶ್ ಮಾತನಾಡಿ,  ಅನುದಾನಿತ ಶಾಲಾ ಕಾಲೇಜುಗಳಲ್ಲಿ 2006ರ ನಂತರ ನೇಮಕ ಹೊಂದಿದ ಯಾವ ನೌಕರರಿಗೂ ಹಳೆಯ ನಿಶ್ಚಿತ ಪಿಂಚಣಿ (ಒಪಿಎಸ್) ಅಥವಾ ವಂತಿಗೆ ಆಧಾರಿತ ನೂತನ ಪಿಂಚಣಿ ಯೋಜನೆ (ಎನ್ಪಿಎಸ್) ಸೌಲಭ್ಯಗಳು ದೊರೆಯುತ್ತಿಲ್ಲ. ಬೇರೆ ರಾಜ್ಯಗಳಲ್ಲಿ ಸರ್ಕಾರಿ ಹಾಗೂ ಅನುದಾನಿತ ನೌಕರರ ಈ ರೀತಿಯ ತಾರತಮ್ಯ ಇಲ್ಲ. ‘ಈ ಬಗ್ಗೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ, ಭರವಸೆ ಈಡೇರಿಲ್ಲ. ಸರ್ಕಾರದ ಈ ಹಠಮಾರಿ ಧೋರಣೆಗೆ ಬೇಸತ್ತು ಪ್ರತಿಭಟನೆ ಕೈಗೊಂಡಿದ್ದೇವೆ ಎಂದು ತಿಳಿಸಿದರು.‘ಬಿ.ಎಸ್.ಯಡಿಯೂರಪ್ಪ ಅವರು ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಪಿಂಚಣಿ ಪ್ರತಿಯೊಬ್ಬ ನೌಕರನ ಹಕ್ಕು ಎಂದು ದನಿ ಎತ್ತಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಪಿಂಚಣಿ ವಂಚಿತರ ಬೇಡಿಕೆಯನ್ನು ಅವರು ಈಡೇರಿಸಬೇಕು’ ಎಂದು ಮನವಿ ಮಾಡಿದರು.