ವಿವಿಧ ಬೇಡಿಕೆ ಈಡೇರಿಸುವಂತೆ ಹಡಪದ ಸಮಾಜದಿಂದ ಪ್ರತಿಭಟನೆ

Protest by Hadapad community to fulfill various demands

ಬೆಳಗಾವಿ 17: ಹಡಪದ ಅಭಿವೃದ್ಧಿ ನಿಗಮವನ್ನು ಸಂಪೂರ್ಣವಾಗಿ ಜಾರಿಗೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. 

ಕ್ಷೌರಿಕ ಜನಾಂಗಕ್ಕೆ ಕರೆಯುವ ಮೂಲ ನಾಯಿಂದ ಪದವನ್ನು ಪುನರ್ ಸ್ಥಾಪಿಸಬೇಕು. ವಿದ್ಯಾರ್ಥಿಗಳ ಶಾಲಾ ದಾಖಲಾತಿಗಳಲ್ಲಿ ಜಾತಿ ಹೆಸರು ತಪ್ಪಾಗಿದ್ದರೆ ತಿದ್ದುಪಡಿ ಮಾಡಲು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಕ್ಷೌರಿಕರಿಗೆ  ನಿಷೇದಿತ ಪದ ಬಳಸುವವರಿಗೆ ಜಾತಿ ನಿಂದನೆ ಕಾನೂನು ಕೂಡಲೇ ಜಾರಿಗೆ ತರಬೇಕು. ನಮ್ಮಲ್ಲಿ ಒಬ್ಬ ಪ್ರಮುಖರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.  

ಹಡಪದ ಅಪ್ಪಣ್ಣನವರ ಜನ್ಮಸ್ಥಳ ಮಸಬಿನಾಳ ಹಾಗೂ ಶಿವಶರಣೆ ಲಿಂಗಮ್ಮನವರ ಜನ್ಮಸ್ಥಳ ಅಭಿವೃದ್ಧಿಪಡಿಸಲು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇರಿಸಬೇಕು. ಅದೇ ರೀತಿ ಬಸವಕಲ್ಯಾಣದಲ್ಲಿ ಬಸವಣ್ಣನವರ ಅರಿವಿನ ಗುಹೆಯ ಪಕ್ಕದಲ್ಲಿರುವ ಹಡಪದ ಅಪ್ಪಣ್ಣನವರ ಗುಹೆಯನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇರಿಸಬೇಕು.  

ಶ್ರೀ ಕ್ಷೇತ್ರ ತಂಗಡಗಿಯ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಅಭಿವೃದ್ಧಿಗಾಗಿ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು. ನಮ್ಮ ಹಡಪದ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಬೇಕು. ಶ್ರೀ ಕಾಂತರಾಜು ಜಾತಿಗಣತಿ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು. ನಮ್ಮ ಹಡಪದ ಸಮಾಜದ ಬಡಮಕ್ಕಳಿಗೆ ಶಾಲಾ ಕಾಲೇಜು, ಹಾಸ್ಟೇಲ್ ತೆರೆಯಲು ಬೆಂಗಳೂರು ಕೇಂದ್ರ ಸ್ಥಾನದಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಮತ್ತು ತಾಲೂಕಾ ಕೇಂದ್ರಗಳಲ್ಲಿ ಭೂಮಿ ನೀಡಬೇಕು.  

ಕಾರ್ಮಿಕ ಇಲಾಖೆಯಿಂದ ಕ್ಷೌರಿಕರಿಗೆ ಸಿಗಬಹುದಾದ ಸೌಲಭ್ಯಗಳನ್ನು ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಯಿತು. ಈ ವೇಳೆ ಹಡಪದ ಸಮಾಜದ ಮುಖಂಡ ಸಿದ್ದಪ್ಪ ಹಡಪದ, ಸಂತೋಷ ಹಡಪದ, ನಾಗರಾಜ, ಬಸವರಾಜ ಹಡಪದ, ಬಾ. ಹಚ್‌. ಡಿ.ವೈದ್ಯ ಸೇರಿದಂತೆ ಇತರು ಭಾಗಿಯಾಗಿದ್ದರು.