ಬೆಳಗಾವಿ 17: ಇಲ್ಲಿನ ಸುವರ್ಣ ವಿಧಾನಸೌಧ ಬಳಿಯ ಸುವರ್ಣ ಗಾರ್ಡನ್ ಟೆಂಟ್‌ನಲ್ಲಿ ಕರ್ನಾಟಕ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಕಿವುಡರು ಪ್ರತಿಭಟನೆ ನಡೆಸಿದರು.
ಸರ್ಕಾರದಲ್ಲಿ ಗ್ರೂಪ್-ಸಿ ಗ್ರೂಪ್-ಡಿ ವರ್ಗಗಳ ಅಡಿಯಲ್ಲಿ ಕಿವುಡರಿಗೆ (190ಡಿಪಿ ಮತ್ತು ಅದಕ್ಕಿಂತ ಹೆಚ್ಚಿನ) ಉದ್ಯೋಗಾವಕಾಶ ಒದಗಿಸಬೇಕು. ಪರೀಕ್ಷೆಗಳ ಬದಲಾಗಿ ಸಂದರ್ಶನ ನಡೆಸಬೇಕು. ಕಿವುಡರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು 100 ಕಿಮೀ ಮಿತಿಯನ್ನು ಮೀರಿ ವಿಸ್ತರಿಸ ಅವಕಾಶ ಕಲ್ಪಿಸಬೇಕು. ಕಿವುಡರಿಗೆ ಮಾಸಿಕ ಪಿಂಚಣಿಯನ್ನು 5 ಸಾವಿರ ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಕಿವುಡ ಮಕ್ಕಳಿಗೆ ಸಂಕೇತ ಭಾಷೆ ಮತ್ತು ಲಿಪ್ರೆಡಿಂಗ್ ಕಲಿಸಲು ಶಾಲಾ ಶಿಕ್ಷಕರಿಗೆ ತರಬೇತಿ ಜಾರಿಗೊಳಿಸಬೇಕು. ಕಿವುಡ ಜನರಿಗೆ ಕ್ರೀಡಾ ಅನುದಾನ ಮೀಸಲಿಡಬೇಕು. ಕಿವುಡ ದಂಪತಿಗಳಿಗೆ ಕಲ್ಯಾಣ ಅನುದಾನ ಒದಗಿಸಬೇಕು. ಜಿಲ್ಲಾಸ್ಪತ್ರೆಗಳಲ್ಲಿ ಬೆರಾ ಯಂತ್ರಗಳನ್ನು ಒದಗಿಸಬೇಕು. ಕರ್ನಾಟಕದಲ್ಲಿ ಕಿವುಡರಿಗಾಗಿ ವೃದ್ಧಾಶ್ರಮಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಚೇರಮನ್ ಕೆ.ಎಚ್. ಶಂಕರ, ಅಧ್ಯಕ್ಷ ಉಮಾಶಂಕರ ಕೆ.ಎಸ್. ಸೇರಿದಂತೆ ಇತರರು ಇದ್ದರು.