ವಿಜಯಾ ಇಂಟರ್ನ್ಯಾಷನಲ್ ಶಾಲೆಯ ವಾರ್ಷಿಕ ಶುಲ್ಕ ಹೆಚ್ಚಳ ವಿರುದ್ಧ ಪ್ರತಿಭಟನೆ
ಬೆಳಗಾವಿ 15: ನಗರದ ಹೊರ ವಲಯದಲ್ಲಿರುವ ಭೂತರಾಮನಹಟ್ಟಿಯ ವಿಜಯಾ ಇಂಟರ್ನ್ಯಾಷನಲ್ ಶಾಲೆಯ ವಾರ್ಷಿಕ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಮಂಗಳವಾರ ಶಾಲಾ ಆವರಣದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ವಿಜಯಾ ಇಂಟರ್ನ್ಯಾಷನಲ್ ಶಾಲೆಯವರು ನಮ್ಮಲ್ಲಿ ಸಿಬಿಎಸ್‌ಸಿ ಇದೆ ಎಂದು ಸುಳ್ಳು ಹೇಳಿ ವಿದ್ಯಾರ್ಥಿಗಳಿಗೆ ಸಿಬಿಎಸ್‌ಸಿ ಪಾಠ ಮಾಡುತ್ತಿಲಿಲ್ಲ. ಪ್ರವೇಶದ ಸಮಯದಲ್ಲಿ ನೀಡಿದ ಶುಲ್ಕಕ್ಕಿಂತ ಈ ವರ್ಷ ಏಕಾಏಕಿ ದರ ಏರಿಕೆ ಮಾಡಿದ್ದಕ್ಕೆ ಪೋಷಕರು ಆಡಳಿತ ಮಂಡಳಿಯ ವಿರುದ್ಧ ಹರಿಹಾಯ್ದರು.
ವಿಜಯಾ ಇಂಟರ್ನ್ಯಾಷನಲ್ ಶಾಲೆಯಲ್ಲಿ ಮೇಲಿಂದ ಮೇಲೆ ಶಿಕ್ಷಕರ ಬದಲಾವಣೆಯಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬಿರುತ್ತಿದೆ. ಪ್ರತಿ ವರ್ಷ ಹೆಣ್ಣು ಮಕ್ಕಳಿಗೆ ಶಿಷ್ಯ ವೇತನ ಮಂಜೂರು ಮಾಡುತ್ತೇವೆ ಎಂದು ಹೇಳಿ ಇಲ್ಲಿಯವರೆಗೂ ನೀಡಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಕೆಲವೊಂದು ವಿದ್ಯಾರ್ಥಿಗಳಿಗೆ ಶಾಲೆಯ ಸಮವಸ್ತ್ರ ಕೊಟ್ಟಿಲ್ಲ. ಇದರ ಶುಲ್ಕವನ್ನು ಪಡೆದಿದ್ದಾರೆ. ನೀವು ಕೊಟ್ಟ ರಸೀದಿಯೂ ನಮ್ಮ ಬಳಿ ಇದೆ. ಶಾಲೆಯ ಆಡಳಿತ ಮಂಡಳಿಯ ಸಿಬ್ಬಂದಿಗಳು ಪೋಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ದೂರಿದ್ದಾರೆ.