ಗಂಗೊಳ್ಳಿ ಕರಾವಳಿಯಲ್ಲಿ ಆರು ಮಂದಿ ಮೀನುಗಾರರ ರಕ್ಷಣೆ

ಉಡುಪಿ, ಜ.17, ಜಿಲ್ಲೆಯ ಗಂಗೊಳ್ಳಿ ಕರಾವಳಿಯಲ್ಲಿ ಮುಳುಗಿದ್ದ ದೋಣಿಯಲ್ಲಿದ್ದ ಆರು ಮಂದಿ ಮೀನುಗಾರರನ್ನು ಮತ್ತೊಂದು ಮೀನುಗಾರಿಕಾ ದೋಣಿಯ ಸದಸ್ಯರು ರಕ್ಷಿಸಿದ್ದಾರೆ.  ಕೋಡಿ  ಕನ್ಯಾಣದ ಜಯಲಕ್ಷ್ಮಿ ಎಂಬವರಿಗೆ ಸೇರಿದ ಮೀನುಗಾರಿಕಾ ದೋಣಿ ಜನವರಿ 12 ರ ರಾತ್ರಿ ಮಲ್ಪೆಯಿಂದ  ಗಂಗೊಳ್ಳಿ ಕಡೆಗೆ ಪ್ರಯಾಣ ಬೆಳೆಸಿತ್ತು, ಬುಧವಾರ (ಜನವರಿ 15) ದೋಣಿಯ ತಳಭಾಗದಲ್ಲಿ ಒಳಗೆ ನೀರು ಬರಲಾರಂಭಿಸಿತು ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.  ತಕ್ಷಣ ದೋಣಿ ಕ್ಯಾಪ್ಟನ್  ವೆಂಕಟೇಶ್ ಹರಿಕಾಂತ್ ಅವರು ವಯರ್‌ಲೆಸ್‌ ಸಾಧನ ಮೂಲಕ ಸಹಾಯಕ್ಕಾಗಿ ನೆರೆಯ ಮೀನುಗಾರಿಕೆ  ದೋಣಿಗಳನ್ನು ಸಂಪರ್ಕಿಸಿದರು. ಮತ್ತೊಂದು ದೋಣಿ ಸ್ಥಳಕ್ಕೆ ಧಾವಿಸಿ ಸಂಕಷ್ಟದಲ್ಲಿದ್ದ ವೆಂಕಟೇಶ್ ಹರಿಕಾಂತ್, ನಂದೀಶ್ ಖಾರ್ವಿ, ಸಂತೋಷ್,  ಹುಲಿಯಪ್ಪ, ದುರ್ಗಪ್ಪ ಹರಿಕಾಂತ್ ಮತ್ತು ಅನ್ನಪ್ಪ ಹರಿಕಾಂತ್ ಅವರನ್ನು ರಕ್ಷಿಸಿದೆ. ಅವರೆಲ್ಲರೂ ಕುಮಟಾ ಮತ್ತು  ಉತ್ತರ ಕನ್ನಡ ಜಿಲ್ಲೆಗಳ ಹೊನ್ನಾವರ ತಾಲ್ಲೂಕು ನಿವಾಸಿಗಳು ಎಂದು ತಿಳಿದುಬಂದಿದೆ.ದೋಣಿ ಭಾಗಶಃ ಮುಳುಗಿದ ಸ್ಥಿತಿಯಲ್ಲಿತ್ತು. ದೋಣಿಯನ್ನು ದಡಕ್ಕೆ ಎಳೆಯುವ ಪ್ರಯತ್ನಗಳು ವ್ಯರ್ಥವಾಯಿತು.  ಅಂದಾಜು 10 ಲಕ್ಷ ರೂ. ಮೌಲ್ಯದ ದೋಣಿ ಎಂದು ತಿಳಿದುಬಂದಿದೆ.ಕರಾವಳಿ ಭದ್ರತಾ ಪೊಲೀಸ್‌ನ ಗಂಗೊಳ್ಳಿ ಇನ್ಸ್‌ಪೆಕ್ಟರ್ ಸಂದೀಪ್ ಜಿ. ಎಸ್ ಮತ್ತು ಇತರರು ಮೀನುಗಾರರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಿದರು.