ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿರದೆ ಪ್ರಾಮಾಣಿಕ ಕೆಲಸ ಮಾಡುವ ಭರವಸೆ : ಪಠಾಣ
ಶಿಗ್ಗಾವಿ 01: ಜನಸೇವೆ ಮಾಡಲು ಅವಕಾಶ ಕೊಟ್ಟ ಈ ಜನತೆಯ ನಂಬಿಕೆ ಉಳಿಸಿಕೊಂಡು, ಜನರ ಬೇಡಿಕೆಗೆ ತಕ್ಕಂತೆ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿರದೆ ಪ್ರಾಮಾಣಿಕ ಕೆಲಸ ಮಾಡುವದಾಗಿ ಶಾಸಕ ಯಾಸೀರಖಾನ್ ಪಠಾಣ ಹೇಳಿದರು. ತಾಲೂಕಿನ ಹೋತನಹಳ್ಳಿ, ಗುಡ್ಡದಚನ್ನಾಪುರ, ಕುಂದೂರು ಗ್ರಾಮದಲ್ಲಿನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ, ಜನಸೇವೆ, ಗ್ರಾಮಗಳ ಅಭಿವೃದ್ಧಿ ವಿಷಯಗಳಲ್ಲಿ ಯಾವುದೇ ರಾಜಕೀಯ ಬೆರೆಸುವುದು ಬೇಡ. ಈ ಕ್ಷೇತ್ರದ ಜನತೆ ಭರವಸೆ ಇಟ್ಟು ನನ್ನನ್ನು ಆಯ್ಕೆ ಮಾಡಿದ್ದು ಅವರ ಭರವಸೆಗೆ ತಕ್ಕಂತೆ ಪ್ರಾಮಾಣಿಕವಾಗಿ ಜನಸೇವೆ ಮಾಡುತ್ತೇನೆ ಎಂದರು.ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನತೆ ಸ್ವಾವಲಂಬಿಯಾಗಿ ಬದುಕು ನಡೆಸುವಂತಾಗಿದೆ. ಆದರೆ ಕೆಲವರು ಅನ್ನಭಾಗ್ಯ ಯೋಜನೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬರುತ್ತಿದೆ. ಸಾರ್ವಜನಿಕರು ಸಹ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಮಾರಾಟ ಮಾಡದೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಜಿಲ್ಲಾ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ತಾಲೂಕಾಧ್ಯಕ್ಷ ಶೇಖಪ್ಪ ಮಣಕಟ್ಟಿ, ಎಮ್ ಎನ್ ಕೆಮ್ಮಣಕೇರಿ, ಶಂಭಣ್ಣ ಅಜೂರ, ಅಣ್ಣಪ್ಪ ಲಮಾಣಿ ಸೇರಿದಂತೆ ಇತರರಿದ್ದರು.