ತತ್ವಪದ ಗಾಯನ, ಕಾವ್ಯ, ನಾಟಕ ಇವುಗಳ ಜೊತೆಗೆ ಸಾವಯವ ಕೃಷಿ, ನಾಟಿ ಬೀಜ, ಮಳೆ ನೀರು ಸಂಗ್ರಹದ ಬಗೆಗೆ ಅತೀವ ಕಾಳಜಿಯುಳ್ಳವರು ಕೃಷ್ಣಮೂರ್ತಿ ಬಿಳಿಗೆರೆಯವರು. ಅವರು ಕವಿಯಾಗಿ, ಕಥೆಗಾರರಾಗಿ, ನಾಟಕಕಾರರಾಗಿ ನಾಡಿನಾದ್ಯಂತ ಚಿರಪರಿಚಿತರು. ಆಧುನಿಕೋತ್ತರ ಸಮಾಜ ಮರೆತಿರುವ ನಮ್ಮ ಪರಂಪರೆಯ ವಿವೇಕವನ್ನು ಮತ್ತೇ ಪುನರುತ್ಥಾನಗೊಳಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿರುವ ಅವರು ಒಳ್ಳೆಯ ಮಾತುಗಾರರು.
ತುಮಕೂರು ಜಿಲ್ಲೆಯ ತಿಪಟೂರ ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಬಿಳಿಗೆರೆಯಲ್ಲಿ ಕೃಷ್ಣಮೂರ್ತಿ ಅವರು 1963ರ ಎಪ್ರೀಲ್ 8ರಂದು ಜನಿಸಿದರು. ಕೃಷಿಕ ಕುಟುಂಬದಲ್ಲಿ ಬೆಳೆದ ಅವರು ಬಿಳಿಗೆರೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿದರು. ನಂತರ ತುಮಕೂರಿನ ಸಿದ್ಧಗಂಗಾ ಪದವಿ ಕಾಲೇಜಿನಲ್ಲಿ ಪದವಿಯನ್ನು ಪಡೆದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಅನಂತರ ಕೃಷ್ಣಮೂರ್ತಿಯವರು ಕರ್ನಾಟಕದಲ್ಲಿನ ಸಾಹಿತ್ಯ ಚಳುವಳಿ ಬಂಡಾಯ ಸಾಹಿತ್ಯ ಸಂಘಟನೆಯ ‘ಕಲೆಗಾಗಿ, ಕಲೆಯಲ್ಲಿ, ಬದುಕಿಗಾಗಿ ಕಲೆ’ ಶೋಧದಲ್ಲಿ ಪಾಲ್ಗೊಂಡರು. ಅವರು ರೈತ ಚಳುವಳಿ, ದಲಿತ ಚಳುವಳಿ ಮತ್ತು ಸಮಾಜವಾದಿ ಚಳುವಳಿಗಳನ್ನೊಳಗೊಂಡ ಅಧ್ಯಯನದಲ್ಲಿ ತೊಡಗಿಕೊಂಡರು. 1985ರಲ್ಲಿ ಕೃಷ್ಣಮೂರ್ತಿಯವರು ಸಿಂಧನೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಇತಿಹಾಸದ ಅಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದರು. ಅವರು ತುರುವೆಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿನಲ್ಲಿ ಸೇವೆ ಸಲ್ಲಿಸಿ, ಹುಳಿಯಾರು ಸರ್ಕಾರಿ ಪದವಿ ಕಾಲೆಜಿನಲ್ಲಿ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿದ ಕೃಷ್ಣಮೂರ್ತಿಯವರು ಸಧ್ಯ ಧಾರವಾಡದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ ಪದೋನ್ನತಿ ಪಡೆದು ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರೊ. ಕೃಷ್ಣಮೂರ್ತಿಯವರು ಸಿಂಧನೂರಿನಲ್ಲಿ ಪ್ರಾರಂಭಿಸಿದ ವೃತ್ತಿಯ ಐದು ವರ್ಷಗಳು ಮಹತ್ವದ ಘಟ್ಟಗಳಾಗಿ ಪರಿಣಮಿಸಿವೆ. ಅಲ್ಲಿನ ಐದು ವರ್ಷಗಳಲ್ಲಿ ಚರಿತ್ರೆಯ ಅಧ್ಯಯನದ ಪರಿಕಲ್ಪನೆಯಲ್ಲಿ ಅವರು ಗಮನಾರ್ಹ ಬದಲಾವಣೆಯನ್ನು ಕಂಡುಕೊಂಡಿದ್ದಾರೆ. ಇತಿಹಾಸ ಪ್ರಾಧ್ಯಾಪಕರಾದ ಬಿಳಿಗೆರೆಯವರು ವಿದ್ಯಾರ್ಥಿಗಳೊಂದಿಗೆ ಸದಾಕಾಲ ಸ್ನೇಹಿತರಂತೆ ಬೆರೆಯುತ್ತಾ, ಪ್ರಶ್ನೆಗಳನ್ನು ಕೇಳುವಂತೆ ಪ್ರೇರೇಪಿಸುತ್ತಿದ್ದರು. ಒಂದು ಗಂಟೆಯ ತರಗತಿಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಕನಿಷ್ಠ ಇಪ್ಪತ್ತು ನಿಮಿಷ ಅವಕಾಶ ನೀಡಬೇಕೆಂದು ಅವರ ಆಶಯವಾಗಿತ್ತು. ಶೋಧನೆ ಏಕಮುಖವಾಗಬಾರದು ಎಂದು ಅವರು ಒತ್ತಿ ಹೇಳುತ್ತಿದ್ದರು. ಕಾಲೇಜಿನ ಎನ್.ಎಸ್.ಎಸ್. ಘಟಕದ ಮೂಲಕ ಬೀಜ ಬ್ಯಾಂಕ್ ಸ್ಥಾಪನೆ, ಮಳೆನೀರು ಕೊಯ್ಲು, ಸಾವಯವ ಕಾಂಪೋಸ್ಟ್ ತೊಟ್ಟಿ, ಮರಗಳಿಗೆ ವೈಜ್ಞಾನಿಕ ಹೆಸರುಗಳ ಫಲಕಗಳ ಪ್ರದರ್ಶನ ಹೀಗೆ ಹತ್ತು ಹಲವು ವಿಶಿಷ್ಟ ಪ್ರಯೋಗಗಳನ್ನು ವಿದ್ಯಾರ್ಥಿಗಳಿಂದ ಮಾಡಿಸುತ್ತಿದ್ದರು. ಅಲ್ಲದೇ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರಗಳಲ್ಲಿ ಯೋಗ, ಧ್ಯಾನ, ಸಿರಿಧಾನ್ಯ ಮೇಳ, ಎಳನೀರು ಮೇಳ, ಹುರುಳಿ ಹಬ್ಬ, ಆರ್ಥಿಕ-ಸಾಮಾಜಿಕ ಸಮೀಕ್ಷೆ, ಕಬಡ್ಡಿ ಪಂದ್ಯಾವಳಿ, ಉಚಿತ ವೈದ್ಯಕೀಯ ಶಿಬಿರ, ಸ್ಥಳೀಯ ಕಲಾವಿದರಿಂದ ಜನಪದ ಗೀತೆಗಳ ಗಾಯನ, ಕವಿಗೋಷ್ಠಿ, ಹೀಗೆ ವೈವಿದ್ಯಮಯ ಕಾರ್ಯಕ್ರಮಗಳನ್ನು ಏರಿ್ಡಸುತ್ತಿದ್ದರು. ಕಾಲೇಜಿನ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮತ್ತು ದುಡಿಮೆಯ ಬಗ್ಗೆ ಹೆಮ್ಮೆಯ ಭಾವವನ್ನು ಮೂಡಿಸುವಲ್ಲಿ ಸದಾ ಕಾರ್ಯೋನ್ಮುಖರಾಗಿರುತ್ತಿದ್ದರು. ಅವರು ಪ್ರಾಚಾರ್ಯರಾದ ಅವಧಿಯಲ್ಲಿ ರಂಗಕರ್ಮಿ ಪ್ರಸನ್ನ, ಕುಂ.ವೀರಭದ್ರ್ಪ, ನಟರಾಜ ಹುಳಿಯಾರ್, ಆರ್.ಜಿ.ಹಳ್ಳಿ ನಾಗರಾಜ, ರಾಜಣ್ಣ, ಡಾ.ತಿಪ್ಪೇಸ್ವಾಮಿ, ಶಿವನಂಜಯ್ಯ ಬಾಳೆಕಾಯಿ, ನಾಗೇಶ್, ಅರುಣಕುಮಾರ ಶೆಟ್ಟಿಕೆರೆ, ರಂಗನಕೆರೆ ಮಹೇಶ, ಲಿಂಗದೇವರು, ರವಿಕೃಷ್ಣಾರೆಡ್ಡಿ ಮುಂತಾದ ಗಣ್ಯರನ್ನು ಕಾಲೇಜಿಗೆ ಆವ್ಹಾನಿಸಿ, ಅವರಿಂದ ವಿದ್ಯಾರ್ಥಿಗಳಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಕೊಡಿಸಿದ್ದಾರೆ. ಅವರು ಹಲವಾರು ಸೃಜನಶೀಲ ಆಸಕ್ತಿಗಳನ್ನು ತಮ್ಮ ವ್ಯಕ್ತಿತ್ವದೊಂದಿಗೆ ಬೆರೆಸಿಕೊಂಡಿರುವ ಕುತೂಹಲದ ವ್ಯಕ್ತಿ ಎಂದರೆ ತಪ್ಪಾಗಲಾರದು.
ಕೃಷ್ಣಮೂರ್ತಿ ಬಿಳಿಗೆರೆಯವರು ಕಾವ್ಯ, ಕಥೆ, ನಾಟಕ, ಕೃಷಿ ಮುಂತಾದ ಕೃತಿಗಳನ್ನು ರಚಿಸಿ ನಾಡಿನಾದ್ಯಂತ ಗುರುತಿಸಿಕೊಂಡಿದ್ದಾರೆ. ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರಿ ಮೇಲೆ ಉರಿಪಾದ, ಗಾಯಗೊಂಡಿದೆ ಗರಿಕೆ ಗಾನ, ಭೂಮಿಯೊಂದು ಮಹಾಬೀಜ ಕವನ ಸಂಕಲನಗಳು, ಜೀರಿಂಬೆ ಹಾಡು, ಗುಡು ಗುಡು ಗುಡ್ಡ, ಪದ್ಯದ ಮರ, ಢ್ರೂ ಢ್ರೂ ಢೂಟೆ, ಹಾಡೆ ಸುವ್ವಿ ಮಕ್ಕಳ ಕುರಿತು ಕವನ ಸಂಕಲನಗಳು, ಮಳೆ ಹುಚ್ಚ, ಅಗಲ ಕಿವಿಯ ಅರಿವುಗಾರ, ನವಿಲೂರಿನ ಕಥೆ, ಅಂಗಭಂಗದ ರಾಜ್ಯದಲ್ಲಿ, ಕೇಡಾಳ ಕೆಪ್ಪರ್ಕ, ಕತ್ತೆ ಹಾಡು ಮಕ್ಕಳ ನಾಟಕಗಳು, ಚಗಚೆ ಹೂವಿನ ಹುಡುಗಿ ಮಕ್ಕಳ ಕಥಾ ಸಂಕಲನ, ಮಳೆ ನೀರು ಕುಡಿ, ಇವು ಗೂಟಗಳಲ್ಲಿ ತೋಟಗಳು, ತುಮಕೂರ ಜಿಲ್ಲೆಯ ಸುಸ್ಥಿರ ತೋಟಗಳು, ಅನ್ನ ದೇವರ ಮುಂದೆ, ಬೇಸಾಯವ ಮಾಡಿ, ಮರದಡಿಯ ಮನುಷ್ಯ, ಬಿಸ್ಲು ಬಾಳೆ ಹಣ್ಣು ಮತ್ತು ಇತರ ಪ್ರಬಂಧಗಳು, ಬಿಳಿಗೆರೆ ಹಾಡುಗಳು, ಮಣ್ಣು ಕಥನ ಕೃಷಿ ಕುರಿತು ಕೃತಿಗಳು, ಛೂ ಮಂತ್ರಯ್ಯನ ಕಥೆಗಳು ಮುಂತಾದ ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಿಸಿದ್ದಾರೆ.
ಎಲ್ಲವನ್ನು ದುಡ್ಡುಕೊಟ್ಟು ಕೊಳ್ಳಬಹುದೆಂಬ ಕುರುಡುನಂಬಿಕೆಯನ್ನು ಬೆಳೆಸಿಕೊಳ್ಳುತ್ತಿರುವ ಕಾಲದಲ್ಲಿ ಹಾಡಿ ಸುವ್ವಿ ಮಕ್ಕಳ ಕವನ ಸಂಕಲನದ ಕವನಗಳು ನಗರದ ಕಾನ್ವೆಂಟ್ ಕಂದಮ್ಮಗಳಿಗೆ ಬದುಕನ್ನು ತಿಳಿಸುವ ಕವನಗಳಾಗಿವೆ. ಕವನ ಸಂಕಲನದ ನಾಯಕಿ ಸುವ್ವಿಯಂತಹ ನೂರಾರು ಸಾವಿರಾರು ಮಕ್ಕಳ ಪಾತ್ರಗಳು ಕಾವ್ಯದಲ್ಲಿ ಸೃಷ್ಟಿಯಾಗಲಿ. ಗಾಯಗೊಂಡಿದ ಗರಿಕೆ ಗಾನ ಕವನ ಸಂಕಲನದಲ್ಲಿ ಇಪ್ಪತ್ತೇರಡು ಅತ್ಯುತ್ಕೃಷ್ಟ ಕವಿತೆಗಳಿವೆ. ಯಾಕೆ ಬೇಕಿತ್ತು ಗುರುವೆ, ಮಾತು ಸೋತರೆ ನೀವು ಗೆಲ್ಲುವಿರಿ ಕವನಗಳ ವಿಡಂಬನೆ, ಶರಣಾಗುವದು ಬೇಡ ಸ್ತ್ರೀ ಪರ ಕಾಳಜಿ, ಕವಿಯ ಸಾಮಾಜಿಕ ಕಳಕಳಿಗೆ ಹಿಡಿದ ಕನ್ನಡಿಯಾಗಿದೆ. ಛೂ ಮಂತ್ರಯ್ಯನ ಕಥೆಗಳು ಕಥಾ ಸಂಕಲನದಲ್ಲಿ ಒಟ್ಟು ಇಪ್ಪತ್ನಾಲ್ಕು ಕಥೆಗಳಿವೆ. ಬಿಳಿಗೆರೆಯವರದು ಲಲಿತವಾದ, ಸರಳವಾದ ಕಥನ ಶೈಲಿ. ಪ್ರತಿ ಕಥೆಯೂ ಕೃಷಿ ಜೀವನದ ಜೀವ ಜಾಲ ವೈವಿದ್ಯದ ಬೆರಗು, ಕುತೂಹಲಗಳನ್ನು ಉಳಿಸಿಕೊಂಡೇ ಜೀವ ಪ್ರೀತಿಯ, ಸಹನೆ, ಸಹ ಬಾಳ್ವೆಯ ಸಂದೇಶವನ್ನು ನೀಡುತ್ತವೆ. ಅವರು ಕೃಷಿಯಂತಹ ಶ್ರಮದಾಯಕ ಕೆಲಸವನ್ನು ಜೀವಪ್ರೀತಿಯ ಸಂಕೇತವಾಗಿ ಮಕ್ಕಳಿಗೆ ಬಣ್ಣಿಸುವ ವಿಧವೇ ಸೊಗಸು. ಮಣ್ಣು ಕಥನ ಕೃತಿಯಲ್ಲಿ ಮೂವತ್ತಾರು ಲೇಖನಗಳಿದ್ದು, ಕನ್ನಡ ಕೃಷಿ ಸಾಹಿತ್ಯಕ್ಕೆ ಒಂದು ಅನನ್ಯ ಕೊಡುಗೆಯಾಗಿದೆ. ಇಲ್ಲಿನ ಲೇಖನಗಳು ನೀರಿನಿಂದ ಶುರುವಾಗಿ ಮಣ್ಣು, ಮಳೆಹಬ್ಬ, ಹಸಿರು ಬೆಲಿ, ಶೂನ್ಯ ವೆಚ್ಚದ ಬೇಸಾಯದವರೆಗೂ ರೆಂಬೆ ಚಾಚಿವೆ. ಅಲ್ಲದೇ ಅನಿಲ ಅಗರವಾಲ್ ಹಾಗೂ ರಾಜೇಂದ್ರ ಸಿಂಗ್ ಅವರಂಥ ಸಾಧಕರ ಪಥವನ್ನು ತೆರೆದಿಡುತ್ತವೆ. ಸುಸ್ಥಿರ ಕೃಷಿಯ ಕೈಗೊಳ್ಳುವವರಿಗೆ ಬಿಳಿಗೆರೆಯವರು ಅಪರೂಪದ ಪಾಠಗಳನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಕೃಷ್ಣಮೂರ್ತಿ ಬಿಳಿಗೆರೆಯವರು ‘ನಮ್ಮ ಪ್ರಕಾಶನ’ ದ ಮೂಲಕ ತಮ್ಮ ಕೃತಿಗಳನ್ನು ಸೆೇರಿದಂತೆ ಹಲವರ ಕೃತಿಗಳನ್ನು ಹೊರತಂದಿದ್ದಾರೆ. ಅವರು ಪ್ರಕಾಶಕರಾಗಿ ಪುಸ್ತಕಗಳನ್ನು ಮಾರುವದರಲ್ಲಿ ಸಿದ್ದ ಹಸ್ತರು. ತಮ್ಮ ಕೃತಿಗಳನ್ನು ಮಾರಲು ಅವರು ಸ್ವಲ್ಪವೂ ಹಿಂಜರಿಯದೇ ಬಸ್ ಪ್ರಯಾಣದಲ್ಲಿ, ಸಾಹಿತ್ಯಿಕ ಸಮಾವೇಶದಲ್ಲಿ ಹೀಗೆ ಯಾವ ಸ್ಥಳದಲ್ಲಿಯಾದರೂ ಸರಿ, ಪುಸ್ತಕಗಳನ್ನು ಮಾರಾಟ ಮಾಡುತ್ತಾರೆ. ಅವರು ‘ಒಡಡಾಟ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿ ಮತ್ತು ‘ಸಿರಿ ಸಮೃದ್ಧಿ’ ಕೃಷಿ ಮಾಸಿಕದ ಗೌರವ ಸಂಪಾದಕರಾಗಿ ಕೆಲ ಸನಿರ್ವಹಿಸಿದ್ದಾರೆ. ಸ್ವತ ನಟರೂ, ರಂಗಕರ್ಮಿಯೂ ಆಗಿರುವ ಬಿಳಿಗೆರೆಯವರು ಹಲವು ರಂಗ ಪ್ರಯೋಗಗಳನ್ನು ಆಯೋಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಳ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದುದು. ಅಲ್ಲದೇ ‘ಕಣ್ಮುಚ್ಚಾಲೆ ಮಕ್ಕಳ ಗುಂಪು’ ಎಂಬ ಚಿಣ್ಣರ ಸಂಘಟನೆಯನ್ನು ಕಟ್ಟಿದ್ದಾರೆ. ಮಕ್ಕಳ ಪದ್ಯಗಳನ್ನು ಹಾಡುವದು ಅವರಿಗೆ ಖುಷಿಯ ವಿಚಾರ ತಂಬೂರಿಯೊಂದಿಗೆ ತನ್ಮಯತೆಯಿಂದ ಏರುದನಿಯಲ್ಲಿ ಹಾಡುವದನ್ನು ಅವರಿಂದ ಕೇಳುವದೇ ಖುಷಿಯ ವಿಚಾರ. ಅವರು ಕೃಷಿ ಹಾಡುಗಳನ್ನು ತತ್ವಪದಗಳನ್ನು ಏಕತಾರಿ ನಾದದೊಂದಿಗೆ ಸುಶ್ರಾವ್ಯವಾಗಿ ಹಾಡಿ ಸಭಿಕರನ್ನು ಮಂತ್ರಮುಗ್ಧರನ್ನಾಗಿಸುವರು. ಗಣಿಗಾರಿಕೆಯಿಂದಾಗಿ ಪರಿಸರದ ಮೇಲೆ ಜೀವ ವೈವಿಧ್ಯದ ಮೇಲೆ ಆಗಿರುವ ಅನ್ಯಾಯ, ಅತ್ಯಾಚಾರಗಳನ್ನು ಖಂಡಿಸಿ, ಅವರು ಹಲವು ಜಾಗೃತಿ ಗೀತೆಗಳನ್ನು ರಚಿಸಿ ಸ್ವತಃ ಹಾಡಿರುವದು ವಿಶೇಷವಾದದು. ಬಿಳಿಗೆರೆಯವರು ಪ್ರಖರ ವಿಚಾರಧಾರೆಗಳಿಂದ, ಹರಿತ ಮಾತುಗಾರಿಕೆಯಿಂದ ಮತ್ತು ಭಾಷಣ ಕಲೆಯಿಂದ ತಮ್ಮ ವಿಚಾರಗಳನ್ನು ಸುಲಭವಾಗಿ ಸಭಿಕರಿಗೆ ಮುಟ್ಟಿಸುತ್ತಿರುವರು.
ಕೃಷ್ಣಮೂರ್ತಿ ಬಿಳಿಗೆರೆ ಅವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಆರ್ಯಭಟ ಸಾಹಿತ್ಯ ಪ್ರಶಸ್ತಿ, ಜಿ.ಎಸ್.ಎಸ್. ಕಾವ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನಾಟಕ ಬಾಲ ವಿಕಾಸ ಅಕಾಡೆಮಿ ಶಿಕ್ಷಣ ಸಿರಿ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಸಂದಿವೆ. ಅವರ ‘ತೀರಿ ಹೋದ ಹಳ್ಳದ ಗುಂಟ’ ಎಂಬ ಪ್ರಬಂಧ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿದೆ. ಕವಿ, ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಅವರು ನಾಡಿನಾದ್ಯಂತ ಬೌದ್ಧಿಕ, ಸಾಂಸ್ಕೃತಿಕ ಹಾಗೂ ಶ್ರಮಿಕ ವಲಯಗಳಲ್ಲಿ ಚಿರಪರಿಚಿತ ವ್ಯಕ್ತಿತ್ವವನ್ನು ಗಳಿಸಿಕೊಂಡಿದ್ದಾರೆ. ಅವರದು ತುಂಬಾ ಸರಳವಾದ ವ್ಯಕ್ತಿತ್ವ. ಸಧ್ಯ ಅವರು ಕಾಲೇಜು ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದ ಜಂಟಿ ನಿರ್ದೇಶಕರಾಗಿ ಕಳೆದ ಮೇ 2022ರಿಂದ ಸೇವೆಸಲ್ಲಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲೂ ಅವರ ಚಿಂತನೆಗಳು ಪಸರಿಸಲಿ. ಈ ಭಾಗದ ಪದವಿ ಕಾಲೆಜುಗಳಲ್ಲೂ ಹೊಸ ಚೈತನ್ಯವನ್ನು ಮೂಡಿಸಲಿ ಮತ್ತು ಕನ್ನಡ ಸಾರಸ್ವತ ಲೋಕಕ್ಕೆ ಅವರ ಸೇವೆ ನಿರಂತರವಾಗಿರಲಿ. ಸಂಪರ್ಕಿಸಿ: 9481490975.
- * * * -