ಕನ್ನಡ ನಾಡಿನ ಸಾಂಸ್ಕೃತಿಕ ವಲಯದಲ್ಲಿ ಪ್ರಗತಿಪರ ಚಿಂತಕ, ವೈಚಾರಿಕ ರೂವಾರಿಗಳೆಂದು ಗುರುತಿಸಿಕೊಂಡಿರುವವರು ಡಾ. ಕೆ. ಮರುಳಸಿದ್ಧಪ್ಪ. ಕನ್ನಡ ಸಾಹಿತ್ಯ ವಲಯದಲ್ಲಿ ವಿಮರ್ಶಕರಾಗಿ, ಅನುವಾದಕಾರರಾಗಿ, ಸಂಪಾದಕರಾಗಿ, ಸಂಸ್ಕೃತಿ ಮೀಮಾಂಸಕರಾಗಿ, ರಂಗ ಸಂಘಟಕರಾಗಿ ಖ್ಯಾತರಾದವರು. ಸಮಕಾಲೀನ ರಾಜಕೀಯ, ಸಾಮಾಜಿಕ, ಧಾರ್ಮಿಕ ಆಯಾಮಗಳಿಗೆ ತಕ್ಷಣ ಪ್ರತಿಕ್ರಿಯೆ ನೀಡುವ ಚಿಕಿತ್ಸಕ ಮನೋಭಾವಿಗಳು. ಕನ್ನಡ ರಂಗಭೂಮಿಯ ಚರಿತ್ರೆಯನ್ನು ನಿರ್ದಿಷ್ಟವಾಗಿ ಕಟ್ಟಿಕೊಟ್ಟು, ಕನ್ನಡರಂಗಭೂಮಿಯ ಪರಿಧಿಯ ವಿಸ್ತಾರ, ವೈವಿಧ್ಯಮಯ ಪ್ರಯೋಗಗಳಿಗೆ ಬೆನ್ನೆಲುಬಾಗಿ ನಿಂತು ಪರೋಕ್ಷವಾಗಿ ರಂಗಭೂಮಿಯ ಅಭಿವೃದ್ಧಿಗೆ ಕಾರಣರಾಗಿದ್ದಾರೆ.
ಕೆ.ಮರುಳಸಿದ್ಧಪ್ಪರವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕಾರೇಹಳ್ಳಿಯಲ್ಲಿ 1940ರ ಜನೇವರಿ 12ರಂದು ಜನಿಸಿದರು. ತಂದೆ ಉಜ್ಜನಪ್ಪ, ತಾಯಿ ಕಾಳವ್ವ. ಅವರು ಪ್ರಾಥಮಿಕ ಶಿಕ್ಷಣವನ್ನು ಕಾರೇಹಳ್ಳಿಯಲ್ಲಿ ಪೂರೈಸಿದರು. ನಂತರ ಪ್ರೌಢಶಾಲೆ ಶಿಕ್ಷಣವು ಶಿವನಿಯಲ್ಲಿ ನಡೆಯಿತು. ಅವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು. ಆದರೂ ಎದೆಗುಂದದೆ ಶಿಕ್ಷಕರಾದ ಸತ್ಯನಾರಾಯಣರಾವ್ ಮಾರ್ಗದರ್ಶನದಲ್ಲಿ ಮತ್ತೇ ಪರೀಕ್ಷಗೆ ಹಾಜರಾಗಿ ತೇರ್ಗಡೆ ಹೊಂದಿದರು. ಅವರು ಕಾಲೇಜು ಶಿಕ್ಷಣವನ್ನು ಮೈಸೂರಿನ ಸುತ್ತೂರಮಠದ ಹಾಸ್ಟೇಲ್‌ನಲ್ಲಿದ್ದುಕೊಂಡು ಪೂರೈಸಿದರು. ಮರುಳಸಿದ್ಧಪ್ಪನವರು ಎಂ.ಎ. ಪದವಿಯನ್ನು ಮುಗಿಸಿದ ಮೇಲೆ ಬೆಂಗಳೂರಿನ ಕಾರ್ೋರೇಷನ್ ಹೈಸ್ಕೂಲ್ ಮತ್ತು ಜಯನಗರದ ಸುತ್ತೂರು ಮಠದ ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿ ವೃತ್ತಿಯನ್ನು ಆರಂಭಿಸಿದರು. ನಂತರ 1965ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆಗೆ ಸೇರಿದರು. ಅವರು 1988ರಿಂದ 1992ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ 1995ರಿಂದ 1997ರ ಅವಧಿಯಲ್ಲಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಮರುಳಸಿದ್ಧಪ್ಪ ಸೇವೆ ಸಲ್ಲಿಸಿರುವರು.
ಕೆ.ಮರುಳಸಿದ್ಧಪ್ಪನವರು ವಿದ್ಯಾರ್ಥಿಗಳನ್ನು ಮಿತ್ರರಂತೆ ಕಾಣುತ್ತಾ, ಅವರ ಅಭಿಪ್ರಾಯಗಳಿಗೆ ಮನ್ನಣೆನೀಡುತ್ತಿದ್ದರು. ತರಗತಿಯಲ್ಲಿ ಅಶಿಸ್ತನ್ನು ಎಂದೂ ಸಹಿಸಿದವರಲ್ಲ. ಅಸಭ್ಯ ವರ್ತನೆಯ ವಿದ್ಯಾರ್ಥಿಗಳಿಗೆ ತಕ್ಕ ಶಾಸ್ತಿಯನ್ನು ಮಾಡುತ್ತಿದ್ದರು. ಸೋಮಾರಿ ವಿದ್ಯಾರ್ಥಿಗಳನ್ನು ಯಾವುದೇ ಮುಲಾಜಿಲ್ಲದೇ ಟೀಕೆಗೆ ಗುರಿಪಡಿಸುತ್ತಿದ್ದರು. ಅವರು ಜಿ.ಎಸ್.ಶಿವರುದ್ರ್ಪವರ ಮಾರ್ಗದರ್ಶನದಲ್ಲಿ ‘ಆಧುನಿಕ ಕನ್ನಡ ನಾಟಕ’ ಸಂಶೋಧನಾ ಮಹಾಪ್ರಬಂಧವನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡರು. ಕೆ.ಮರುಳಸಿದ್ಧಪ್ಪನವರು ಖ್ಯಾತ ಸಾಹಿತಿ ಜಿ.ಎಸ್.ಶಿವರುದ್ರ್ಪ ಅವರ ಮಗಳು ಜಯಂತಿ ಅವರನ್ನು ಮದುವೆಯಾದರು. ದುಡಿಮೆಯನ್ನೇ ನಂಬಿಕೊಂಡು ಬದುಕನ್ನು ನಡೆಸಿದ ಜಯಂತಿಯವರು ಶ್ರಮಪ್ರಿಯರು. ಅವರಿಗೆ ಓರ್ವ ಮಗ ಚೈತನ್ಯ, ಸೊಸೆ ರಾಧಿಕಾ. ಚೈತನ್ಯ ಹೈದ್ರಾಬಾದ್‌ನ ಸೆಂಟ್ರಲ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಪೂರೈಸಿ, ತಂದೆಯಂತೆಯೇ ನಾಟಕ, ರಂಗಭೂಮಿ, ಚಲನಚಿತ್ರಗಳನ್ನು ನಿರ್ದೇಶಿಸುವ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ರಾಧಿಕಾರವರು ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆದರೂ ನೃತ್ಯ ಕಲಿತು ಕ್ರಿಯಾಶೀಲರಾಗಿದ್ದಾರೆ.
ಕೆ.ಮರುಳಸಿದ್ಧಪ್ಪ ಅವರಿಗೆ ಹೆಚ್ಚು ಪ್ರಿಯವಾದ ಕ್ಷೇತ್ರ ನಾಟಕ ಸಾಹಿತ್ಯ ಮತ್ತು ರಂಗಭೂಮಿ. ಕನ್ನಡ ನಾಟಕ ಸಾಹಿತ್ಯ ಮತ್ತು ರಂಗಭೂಮಿಯ ಬಗೆಗೆ ಹೆಚ್ಚು ಅಧಿಕೃತವಾಗಿ ಮಾತನಾಡಬಲ್ಲ, ನಮ್ಮ ನಡುವಿರುವ ಕೆಲವೇ ಕೆಲವು ಸಂಶೋಧಕರು, ವಿಮರ್ಶಕರಲ್ಲಿ ಅವರೊಬ್ಬರು. ಅವರು ‘ಆಧುನಿಕ ಕನ್ನಡ ನಾಟಕ’ ಸಂಶೋಧನಾ ಕೃತಿ, ಪಟ್ಪದಿ ಸಾಹಿತ್ಯ, ಕನ್ನಡ ನಾಟಕ ಸಮೀಕ್ಷೆ, ಒಡನಾಟ, ಪಿ.ಲಂಕೇಶ, ಸಂಗಾತಿ, ಉಲ್ಲಾಸ, ಬಿಡಿ ಲೇಖನಗಳು ಇತ್ಯಾದಿ ಎಂಬ ವಿಮರ್ಶಾ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಆಧುನಿಕ ಕನ್ನಡ ನಾಟಕ ಕೃತಿಯು ಐದು ಮುದ್ರಣಗಳನ್ನು ಕಂಡಿದೆ. ಸಂಶೋಧನಾ ಮಹಾಪ್ರಬಂಧವಾದರೂ ಅದರೊಳಗೆ ವೈಚಾರಿಕತೆ ಪ್ರಗತಿಪರ ನಿಲುವು, ಸಂಸ್ಕೃತಿಯ ಚಿಂತನೆಗಳು ಮೇಳೈಸಿವೆ. ಅವರು ಈ ಕೃತಿಯಲ್ಲಿ ಕನ್ನಡ ನಾಟಕಗಳ ಹುಟ್ಟಿನ ಹಿನ್ನೆಲೆಯಿಂದ ಆರಂಭಿಸಿ ಕನ್ನಡ ರಂಗಭೂಮಿಯ ಪ್ರಾಚೀನತೆ ಮುಖ್ಯವಾಗಿ ಜನಪದ ರಂಗಭೂಮಿ, ವೃತ್ತಿ ರಂಗಭೂಮಿಗಳ ಸ್ವರೂಪ, ವ್ಯಾಪ್ತಿಯನ್ನು ವಿವಿಧ ಆಯಾಮಗಳಿಂದ ಚರ್ಚಿಸಿ ಅವುಗಳ ಪ್ರಾಚೀನತೆ, ಅವುಗಳ ಮೇಲೆ ಉಂಟಾದ ಪ್ರಭಾವ, ಪ್ರೇರಣೆಗಳನ್ನು ಗುರುತಿಸಿದ್ದಾರೆ. ಈ ಸಂಶೋಧನಾ ಗ್ರಂಥವು ರಂಗಕರ್ಮಿಗಳ ರಂಗ ಕೈಪಿಡಿಯಾಗಿದೆ.
ಅವರ ಷಟ್ಪದಿ ಸಾಹಿತ್ಯ ಕೃತಿಯಲ್ಲಿ ಒಟ್ಟು ಒಂಭತ್ತು ಅಧ್ಯಾಯಗಳಿದ್ದು, ರಾಘವಾಂಕರನ್ನು ಒಳಗೊಂಡಂತೆ ವಿವಿಧ ಷಟ್ಪದಿಕಾರರು ಮತ್ತು ಅವರ ಕೃತಿಗಳನ್ನು ಕಥಾಸಹಿತವಾಗಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ನಿರೂಪಣಾ ಶೈಲಿ ಸರಳವಾಗಿದ್ದು ಸಾಮಾನ್ಯ ಓದುಗನಿಗೂ ಷಟ್ಪದಿ ಕಾವ್ಯಗಳ ಸೊಗಸುಗಾರಿಕೆ ತಿಳಿಯುವಂತಿದೆ. ಹದಿನಾರನೇ ಶತಮಾನದ ತರುವಾಯ ಷಟ್ಪದಿಯು ಕನ್ನಡ ಕಾವ್ಯದಿಂದ ದೂರ ಸರಿಯಿತು. ವಿಶೇಷ ಅಂದರೆ ಷಟ್ಪದಿಯಲ್ಲಿ ಅನೇಕ ಪ್ರಯೋಗಗಳೇ ಹುಟ್ಟಿಕೊಂಡವು. ಇದರಲ್ಲಿ ಸಾಲಿ ರಾಮಚಂದ್ರರಾಯರು, ದ.ರಾ.ಬೇಂದ್ರೆ, ಅಡಿಗರು, ಕಣವಿ ಮೊದಲಾದವರು ಸ್ವತಂತ್ರವಾಗಿ ಕಾವ್ಯ ರಚಿಸುವ ಮೂಲಕ ಆ ಪ್ರಕಾರಕ್ಕೆ ಮರುಜೀವವನ್ನು ತುಂಬಿದರು. ಹೀಗೆ ಷಟ್ಪದಿಯು ಒಂದು ಕಾವ್ಯ ಪ್ರಕಾರವಾಗಿ ಪ್ರಾಚೀನ ಸಾಹಿತ್ಯ ಕಾಲದಿಂದ ಆಧುನಿಕ ಸಾಹಿತ್ಯದವರೆಗೂ ಸಾಗಿತು. ಇದನ್ನೆಲ್ಲ ಲೇಖಕರು ಸ್ಪಷ್ಟವಾಗಿ ತಮ್ಮ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ‘ಕನ್ನಡ ನಾಟಕ ಸಮೀಕ್ಷೆ’ ಕೃತಿಯಲ್ಲಿ ಕನ್ನಡ ನಾಟಕ ಸಾಹಿತ್ಯ ಮತ್ತು ರಂಗಭೂಮಿಯ ಹುಟ್ಟು ಬೆಳವಣಿಗೆ ಕುರಿತ ಚರ್ಚೆಯಿದೆ. ಒಟ್ಟಿನಲ್ಲಿ ಕನ್ನಡ ನಾಟಕ ಸಮೀಕ್ಷೆ ಕನ್ನಡ ನಾಟಕಾಸಕ್ತರಿಗೆ ಒಂದು ಉಪಯುಕ್ತ ಕೃತಿ. ಒಡನಾಟ ಕೃತಿಯಲ್ಲಿ ಮೂರು ಭಾಗಗಳಿದ್ದು, ಸಾಹಿತ್ಯ, ಸಂಸ್ಕೃತಿ, ರಂಗಭೂಮಿಗೆ ಸಂಬಂಧಿಸಿದ ಲೇಖನಗಳಿವೆ. ಈ ಕೃತಿಯಲ್ಲಿ ಒಟ್ಟು 47 ಲೇಖನಗಳಿವೆ. ಕಳೆದ ಶತಮಾನದ ಕನ್ನಡ ನಾಟಕ-ಸಾಹಿತ್ಯ, ರಂಗಭೂಮಿ ಮತ್ತು ಸಂಸ್ಕೃತಿ ಕುರಿತ ಸಮಗ್ರ ಚಾರಿತ್ರಿಕ ಹಾಗೂ ವಿಮರ್ಶಾತ್ಮಕ ನೋಟಗಳನ್ನು ನೀಡುತ್ತದೆ. ಒಟ್ಟಾರೆಯಾಗಿ ಸಾಹಿತ್ಯ, ಸಂಸ್ಕೃತಿ ಮತ್ತು ರಂಗಭೂಮಿಯೊಂದಿಗೆ ಕಳೆದ ನಾಲ್ಕೈದು ದಶಕಗಳಿಂದಲೂ ಮರುಳಸಿದ್ಧಪ್ಪ ಅವರು ಹೊಂದಿದ್ದ ಒಡನಾಟ, ಪಡೆದ ಅನುಭವಗಳ ಪಡಿಯಚ್ಚಿನಂತೆ ಇಲ್ಲಿನ ಲೇಖನಗಳು ಮೂಡಿ ಬಂದಿದ್ದು ನಮ್ಮ ಕನ್ನಡ ನಾಟಕ ಸಾಹಿತ್ಯ, ರಂಗಭೂಮಿ, ಸಂಸ್ಕೃತಿಯ ಪ್ರತಿನಿಧಿಗಳಂತಿವೆ.
ಮರುಳಸಿದ್ಧಪ್ಪನವರು ಪಿ.ಲಂಕೇಶ ಕೃತಿಯಲ್ಲಿ ಅವರ ಜೀವನ ಮತ್ತು ಸಾಹಿತ್ಯ ಸಾಧನೆಗಳನ್ನು ಹತ್ತು ಅಧ್ಯಾಯಗಳ ಮೂಲಕ ಪರಿಪೂರ್ಣ ನೆಲೆಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಕನ್ನಡ ಸಾಂಸ್ಕೃತಿಕ ಲೋಕವನ್ನು ರೂಪಿಸಿ ಬೆಳೆಸಿದ, ಬೆಳೆಸುತ್ತಲೇ ಇರುವ ಲಂಕೇಶರ ಬದುಕು ಮತ್ತು ಬರಹಗಳನ್ನು ಬಹುವಿಸ್ತಾರದ ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಉಲ್ಲಾಸ ಕೃತಿಯು ಕೆ. ಮರುಳಸಿದ್ಧಪ್ಪನವರ ಬಿಡಿ ಲೇಖನಗಳ ಗುಚ್ಛ. ಈ ಗುಚ್ಛದಲ್ಲಿ ಸಾಹಿತ್ಯ, ರಂಗಭೂಮಿ, ವಿಜ್ಞಾನ, ರಾಜಕೀಯ, ಧಾರ್ಮಿಕ, ಜೀವನಚರಿತ್ರೆಗೆ ಸಂಬಂಧಿಸಿದ ಲೇಖನಗಳಿವೆ. ಇಲ್ಲಿನ ಬಹುಪಾಲು ಲೇಖನಗಳಲ್ಲಿ ಸಮಾನತೆ, ವೈಚಾರಿಕತೆ, ಪ್ರಗತಿಪರ ನಿಲುವುಗಳ ಪ್ರತಿಪಾದನೆಗೆ ಹೆಚ್ಚಿನ ಅವಕಾಶ ದೊರೆತಿದೆ. ‘ಸಂಗಾತಿ’ ಕೆ.ಮರುಳಸಿದ್ಧಪ್ಪ ಅವರ ಬಿಡಿಲೇಖನಗಳ ಸಂಕಲನ. ಈ ಸಂಕಲನದಲ್ಲಿ ರಂಗಭೂಮಿ, ಸಾಹಿತ್ಯ, ಶಿಕ್ಷಣ, ಸಮಾಜ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಶೋಧನಾ ಮತ್ತು ವಿಮರ್ಶಾ ಲೇಖನಗಳಿವೆ. ಕನ್ನಡತ್ವ: ಸಂಘರ್ಷ ಹಾಗೂ ಅನುಸಂಧಾನ, ಕನ್ನಡ ಚಳುವಳಿಯ ಸುತ್ತಮುತ್ತ: ಒಂದು ನೋಟ, ಒಕ್ಕೂಟ ವ್ಯವಸ್ಥೆ ಮತ್ತು ಪ್ರಾದೇಶಿಕ ಹಿತಾಸಕ್ತಿ, ದಣಿವರಿಯದ ಹೋರಾಟಗಾರ, ಸುಬ್ಬಣ್ಣ: ಇನ್ನು ಬರಿ ನೆನಪು, ಕಿ.ರಂ ಒಂದು ನೆನಪು, ಷೇಕ್ಸ್‌ಪಿಯರ್ ಹುಟ್ಟೂರಿನಲ್ಲಿ ಸುತ್ತಾಟ ಮುಂತಾದ ಲೇಖನಗಳನ್ನು ಅವರು ಪ್ರಕಟಿಸಿದ್ದಾರೆ. ‘ನೋಟ ನಿಲುವು’ ಪ್ರವಾಸ ಕಥನದಲ್ಲಿ ಯುರೋಪ ಪ್ರವಾಸದ ಅನುಭವಗಳನ್ನು ದಾಖಲಿಸಿದ್ದಾರೆ. ಈ ಕೃತಿಯು ಪ್ರವಾಸ ಕಥನ ಎನಿಸಿಕೊಂಡರೂ ಪ್ರೇಕ್ಷಣಿಯ ನೋಟದ ಜೊತೆಗೆ ಆಯಾ ಪ್ರದೇಶಗಳ ಚರಿತ್ರೆ, ಸಾಂಸ್ಕೃತಿಕ ಹಿನ್ನೆಲೆ, ರಂಗಭೂಮಿ, ಶಿಕ್ಷಣ, ಸಾಮಾಜಿಕ, ರಾಜಕೀಯ ವಿಚಾರಗಳನ್ನೆಲ್ಲ ಹೊಂದಿರುವುದು ವಿಶೇಷ. ಅವರು ಲಾವಣಿಗಳು, ಕನ್ನಡ ನಾಟಕ ವಿಮರ್ಶೆ, ವಚನಕಮ್ಮಟ, ಸಂಗಾತಿ, ಶತಮಾನದ ನಾಟಕ, ಗೀರೀಶ ಕಾರ್ನಾಡರ ನಾಟಕಗಳು ಮುಂತಾದ ಸಂಪಾದನಾ ಕೃತಿಗಳನ್ನು ನೀಡಿದ್ದಾರೆ. ಅವರ ಅನುವಾದ ಕೃತಿಗಳಲ್ಲಿ ಭಾರತೀಯ ಜಾನಪದ ಸಮೀಕ್ಷೆ, ಚಿಲಕಮರ್ತಿ ಲಕ್ಷ್ಮೀನರಸಿಂಹನ್, ಮೀಡಿಯ, ಎಲೆಕ್ಟ್ರ, ರಕ್ತಕಣಗಿಲೆ ಮೊದಲಾದವುಗಳು ಮುಖ್ಯವಾಗಿವೆ.
1997ರಲ್ಲಿ ಮರುಳಸಿದ್ಧಪ್ಪ ಅವರನ್ನು ಕರ್ನಾಟಕ ಸರ್ಕಾರವು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿತು. ಅವರು ಅಧ್ಯಕ್ಷರಾಗಿದ್ದ ಮೂರು ವರ್ಷಗಳ ಅವಧಿಯಲ್ಲಿ ಸಾಕಷ್ಟು ವಿಚಾರ ಸಂಕಿರಣಗಳನ್ನು ಹಾಗೂ ನಾಟಕೋತ್ಸವಗಳನ್ನು ನಡೆಸಿಕೊಟ್ಟರು. ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಅಲ್ಲಲ್ಲಿಯ ಪ್ರತಿಭೆಗಳು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುವ ವಾತಾವರಣವನ್ನು ನಿರ್ಮಿಸಿದರು. 1975ರಲ್ಲಿ ಮರುಳಸಿದ್ಧಪ್ಪನವರು ಕಿ.ರಂ.ನಾಗರಾಜ, ಪ್ರಸನ್ನ, ಕೆ.ವಿ.ನಾರಾಯಣ ಮುಂತಾದ ಸಾಹಿತ್ಯ ಚಿಂತಕರು ಸೇರಿ ಸಮುದಾಯ ರಂಗತಂಡವನ್ನು ಕಟ್ಟಿದರು. ಅವರು ಸಂಘಟನೆಯ ಅಧ್ಯಕ್ಷರಾದ ಮೇಲೆ ಕರ್ನಾಟಕದಾದ್ಯಂತ ಅದರ ಕಾರ‌್ಯವ್ಯಾಪ್ತಿ ವಿಸ್ತಾರಗೊಂಡಿತು. ನಂತರ ಅವರು ಶ್ರೀನಿವಾಸ ಜಿ.ಕಪ್ಪಣ್ಣ ಅವರ ಜೊತೆ ಸೇರಿ ನಾಟ್ಯ ಸಂಘ ಥಾಯೇಟರ್ ಕಟ್ಟಿದರು. ಮರುಳಸಿದ್ಧಪ್ಪ ಅವರ ಮನೆ ಹಲವು ಚರ್ಚಾಕೂಟಗಳಿಗೆ ಆಶ್ರಯತಾಣವಾಗಿತ್ತು. ಸದಾಕಾಲ ಅಲ್ಲಿ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಚಿಂತನೆಗಳು ನಡೆಯುತ್ತಿದ್ದವು. ಬಂಡಾಯ ಸಾಹಿತ್ಯ ಸಂಘಟನೆ, ದಲಿತ ಸಾಹಿತ್ಯ ಸಂಘಟನೆಯಲ್ಲಿ ಅವರ ಪಾತ್ರ ಸಾಕಷ್ಟಿರುವುದನ್ನು ಗುರುತಿಸಬಹುದಾಗಿದೆ. ಮರುಳಸಿದ್ಧಪ್ಪ ಅವರು ಯಾವುದೇ ಕ್ಷೇತ್ರಕ್ಕೆ ಹೋದರೂ ತಮ್ಮದೇ ಅಚ್ಚನ್ನು ಮೂಡಿಸುತ್ತಿದ್ದರು. ಅವರು ಮಾಡುತ್ತಿದ್ದ ಕೆಲಸಗಳು ಸದಾಕಾಲ ನೆನಪಿನಲ್ಲಿ ಉಳಿಯುವಂತವುಗಳಾಗಿವೆ. ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಹೃದಯರು ಮೆಚ್ಚುವಂತಹ ಕೆಲಸ ಮಾಡಿದ್ದರು.
ಡಾ.ಕೆ ಮರುಳಸಿದ್ಧಪ್ಪ ಅವರು ಕನ್ನಡ ಸಾಹಿತ್ಯ, ರಂಗಭೂಮಿ ಮತ್ತು ಸಾಹಿತ್ಯೇತರ ಕ್ಷೇತ್ರದಲ್ಲಿ ಮೂಡಿಸಿರುವ ಹೆಜ್ಜೆ ಗುರುತುಗಳು ಅನನ್ಯವಾದವು. ಸಂಶೋಧಕರಾಗಿ, ವಿಮರ್ಶಕರಾಗಿ, ಸಂಪಾದಕರಾಗಿ, ಅನುವಾದಕರಾಗಿ ಮತ್ತು ಸಂಸ್ಕೃತಿ ಮೀಮಾಂಸಕರಾಗಿ, ಕನ್ನಡ ಸಾಹಿತ್ಯ ಕ್ಷೇತ್ರದ ಸಮೃದ್ಧಿತನಕ್ಕೆ ಕಾರಣರಾಗಿದ್ದಾರೆ. ಅಷ್ಟೇ ಅಲ್ಲದೇ ರಂಗಸಂಘಟಕರಾಗಿ, ರಂಗ ಚಿಂತಕರಾಗಿ ಕನ್ನಡ ರಂಗಭೂಮಿಯ ಶ್ರೇಯೋಭಿವೃದ್ದಿಗೆ ನೆರವಾಗಿದ್ದಾರೆ. ಅವರ ಸಾಹಿತ್ಯಿಕ ಸಾಂಸ್ಕೃತಿಕ ಸೇವೆಯನ್ನು ಪರಿಗಣಿಸಿ ನಾಡಿನ ಸಂಘ-ಸಂಸ್ಥೆಗಳು, ಸರ್ಕಾರ ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಮರುಳಸಿದ್ಧಪ್ಪನವರು ಪ್ರಗತಿಪರ ಚಿಂತಕರಾಗಿ ಕೋಮುವಾದಿ, ಜಾತಿವಾದಿ ವ್ಯವಸ್ಥೆಯ ವಿರುದ್ಧ ತಮ್ಮ ಪ್ರತಿಕ್ರಿಯೆಗಳನ್ನು ನಿರಂತರವಾಗಿ ದಾಖಲಿಸುತ್ತಾ ಸಾಂಸ್ಕೃತಿಕ ವಾತಾವರಣವನ್ನು ತಿಳಿಗೊಳಿಸುವುದರೊಂದಿಗೆ ಅವುಗಳನ್ನು ರಂಗಭೂಮಿಗೂ ವಿಸ್ತರಿಸಿದ್ದು ಒಂದು ವಿಶೇಷ. ಸಾಹಿತ್ಯ, ರಂಗಭೂಮಿ, ಸಂಸ್ಕೃತಿಯ ಬಗ್ಗೆ ತಮ್ಮ ಬದುಕಿನ ಉದ್ದಕ್ಕೂ ಪ್ರಸ್ತಾಪಿಸುತ್ತಲೇ ಮುನ್ನಡೆದಿರುವವರು ಕೆ. ಮರುಳಸಿದ್ಧಪ್ಪನವರು.
- * * * -