ಲೋಕದರ್ಶನ ವರದಿ
ಅಥಣಿ 16: ಸರಕಾರಿ ಇಲಾಖೆಗಳ ಪೂರ್ಣಪ್ರಮಾಣದ ಮಾಹಿತಿಯನ್ನು ಇಲಾಖಾ ಮುಖ್ಯಸ್ಥರೇ ಜಿಲ್ಲಾ ಪಂಚಾಯತ ಸದಸ್ಯರಿಗೆ ಸಭೆಯಲ್ಲಿ ಒದಗಿಸಬೇಕು ಎಂದು ಇಲ್ಲದಿದ್ದಲ್ಲಿ ಅನಿವಾರ್ಯವಾಗಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಜಿ.ಪಂ ಅಧ್ಯಕ್ಷೆ ಆಶಾ ಐಹೊಳೆ ಎಚ್ಚರಿಸಿದರು. ಅವರು ಸ್ಥಳೀಯ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಜಿಲ್ಲಾ ಪಂಚಾಯತ ಅಡಿ ಆಯೋಜಿಸಲಾಗಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ಸಾಕಷ್ಟು ಮುಂಚಿತವಾಗಿ ಜಿಲ್ಲಾ ಪಂಚಾಯತನ ನೋಡಲ್ ಅಧಿಕಾರಿ ತಾಲೂಕಿನ ಎಲ್ಲ ಇಲಾಖಾ ಮುಖ್ಯಸ್ಥರಿಗೆ ಸಭೆಯ ವಿವರ ನೀಡಿದ್ದರೂ ಕೂಡ ಅನೇಕ ಇಲಾಖೆಯ ಮುಖ್ಯಸ್ಥರು ಗೈರಾಗಿದ್ದಾರೆ ಅಲ್ಲದೆ ಅನೇಕರು ತಮ್ಮ ತಮ್ಮ ಇಲಾಖೆಗಳ ಮಾಹಿತಿಯನ್ನು ಅಪೂರ್ಣವಾಗಿ ಮಂಡಿಸಿದ್ದಾರೆ ಈ ಎಲ್ಲ ಅಧಿಕಾರಿಗಳಿಗೆ ನೊಟೀಸ್ ಕೊಡಬೇಕು ಎಂದು ಆದೇಶಿಸಿದರು. ಜಿ.ಪಂನ ಸಭೆಯಲ್ಲಿ ಎಲ್ಲ ತಾಲೂಕುಗಳ ಇಲಾಖಾವಾರು ಪ್ರಗತಿಯ ಬಗೆಗೆ ಚರ್ಚಿಸಲು ಸಾಧ್ಯವಿಲ್ಲ ಹೀಗಾಗಿ ಪ್ರತಿ ತಾಲೂಕಿನಲ್ಲಿ ತಾಲೂಕಾ ಮಟ್ಟದ ಸಭೆ ಆಯೋಜಿಸಿ ಪ್ರಗತಿ ಪರಿಶೀಲಿಸಲಾಗುವುದು ಇದಕ್ಕಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ವಿನಂತಿಸಿದರು.
ತೆಲಸಂಗ ಜಿಲ್ಲಾ ಪಂಚಾಯತ ಕ್ಷೇತ್ರದ ತೆಲಸಂಗ ಗ್ರಾಮದಲ್ಲಿ ಕೆಲ ತಿಂಗಳ ಹಿಂದೆ ವಾಲ್ಮೀಕಿ ಸಮುದಾಯ ಭವನ ಕಾಮಗಾರಿ ಶಂಕುಸ್ಥಾಪನಾ ಕಾರ್ಯಕ್ರಮದ ಮಾಹಿತಿಯನ್ನು ಸಮಾಜ ಕಲ್ಯಾಣ ಇಲಾಖೆ ಅಥವಾ ಕೆಆರ್ಡಿಲ್ ಅಧಿಕಾರಿಗಳಾಗಲಿ ಆ ಭಾಗದ ಯಾವುದೇ ಜನಪ್ರತಿನಿಧಿಗಳಿಗೆ ಯಾಕೆ ನೀಡಿಲ್ಲ ಎಂದು ತೆಲಸಂಗ ಜಿ.ಪಂ ಸದಸ್ಯ ಗುರು ದಾಶ್ಯಾಳ ಸಂಬಂಧಪಟ್ಟ ಅಧಿಕಾರಿಗೆ ಪ್ರಶ್ನಿಸಿದಾಗ ಕೆಆರ್ಡಿಎಲ್ ಅಧಿಕಾರಿ ಇದು ವಿಧಾನ ಪರಿಷತ್ ಸದಸ್ಯರಾದ ವಿವೇಕರಾವ ಪಾಟೀಲ ಇವರ ಅನುದಾನದಲ್ಲಿ ಮಂಜೂರಾಗಿದ್ದು, ಆ ಕಾಮಗಾರಿಯನ್ನು ಅವರ ಆಪ್ತ ಸಹಾಯಕ ಬಂದು ನಿರ್ವಹಿಸಿದ್ದಾರೆ ಎಂದು ಉತ್ತರಿಸಿದಾಗ ವೇದಿಕೆಯಲ್ಲಿದ್ದ ಎಲ್ಲ ಒಕ್ಕೂರಲಿನಿಂದ ಸದಸ್ಯರು ಪ್ರೋಟೊಕಾಲ್ಗೆ ಮಹತ್ವ ನೀಡದ ಅಧಿಕಾರಿ ಮೇಲೆ ಕ್ರಮ ಜರುಗಿಸಿ ಎಂದು ನೊಡೆಲ್ ಅಧಿಕಾರಿಗೆ ಸೂಚಿಸಿದರು.
ಹೆಸ್ಕಾಂ ವಿಭಾಗದ ಶೇಖರ ಬಹುರುಪಿ ಮಾತನಾಡಿ, ಮಹಾಪೂರದಿಂದ ಹೆಸ್ಕಾಂ ಇಲಾಖೆಗೆ 24 ಕೋಟಿ 64 ಲಕ್ಷ ರೂ.ಗಳಷ್ಟು ಹಾನಿ ಸಂಭವಿಸಿದೆ. 2163 ಪೊಲಗಳಿಗೆ ಹಾನಿಯಾಗಿದ್ದು ಈ ಪೈಕಿ 1943 ಪೋಲಗಳನ್ನು ಮರು ಸ್ಥಾಪಿಸಲಾಗಿದೆ ಇನ್ನುಳಿದ ಪೋಲಗಳನ್ನು ಸಹ ಕೆಲವೇ ದಿನಗಳಲ್ಲಿ ಅಳವಡಿಸುತ್ತೇವೆ ಎಂದು ಹೇಳಿದ ಅವರು 2097ಬ ಟಿಸಿಗಳಿಗೆ ಹಾನಿ ಸಂಭವಿಸಿದ್ದು, ಈ ಪೈಕಿ 1650 ಟಿಸಿಗಳ ಅಳವಡಿಕೆ ಕಾರ್ಯ ಪೂರ್ಣಗೊಳಿಸಲಾಗಿದೆ ಇನ್ನುಳಿದ 447 ಟಿಸಿಗಳನ್ನು ಕೆಲವೇ ದಿನಗಳಲ್ಲಿ ಪುನರ್ ಅಳವಡಿಸುತ್ತೇವೆ ಎಂದು ಹೇಳಿದರು.
ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಬಸವರಾಜ ಯಾದವಾಡ, ಪ್ರಶಾಂತ ಗೌರಾಣಿ, ಜಿ.ಡಿ.ಗುಂಡ್ಲೂರ, ಬಾಹುಬಲಿ ಐಗಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ತಾ.ಪಂ ಅಧಿಕಾರಿ ರವೀಂದ್ರ ಬಂಗಾರಪ್ಪ ಸರ್ವರನ್ನು ಸ್ವಾಗತಿಸಿ ವಂದಿಸಿದರು.