ಕೊಪ್ಪಳ 18: ರಾಜ್ಯ ಸರ್ಕಾರ ಜಾರಿಗೆ ತಂದಿರುವ 05 ಗ್ಯಾರಂಟಿಗಳು ಸಮರ್ಕವಾಗಿ ಅನುಷ್ಠಾನಿಸುವ ಕುರಿತಂತೆ ಕೊಪ್ಪಳ ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಬಾಲಚಂದ್ರನ್ ಎಸ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಕೊಪ್ಪಳ ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಪ್ರಗತಿ ಪರೀಶೀಲನಾ ಸಭೆಯ ಜರುಗಿತು.
ಗೃಹಲಕ್ಷ್ಮೀ ಯೋಜನೆಯ ಕುರಿತು ಸಭೆಯಲ್ಲಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಮಾತನಾಡಿ ನವೆಂಬರ್, ಡಿಸೆಂಬರ್-2024ರ ಗೃಹಲಕ್ಷ್ಮೀ ಹಣ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಜಮೆಯಾಗಲಿದೆ. ಜನೇವರಿ, ಫೆಬ್ರುವರಿ-2025ರ ಹಣ ಬಿಡುಗಡೆಯಾಗಿರುವದಿಲ್ಲ. ಬಿಡುಗಡೆಯಾದ ತಕ್ಷಣವೇ ಪಾವತಿಗೆ ಕ್ರಮವಹಿಸಲಾಗುವದು ಎಂದು ಮಾಹಿತಿ ನೀಡಿದರು.
ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲಿ ಆಹಾರ ಸಂಗ್ರಹಣೆ, ವಿತರಣೆ ಮತ್ತು ಆಹಾರ ಧಾನ್ಯ ಉಳಿದಿರುವ ಮಾಹಿತಿಯುಳ್ಳ ನಾಮಫಲಕಗಳನ್ನು ಅಳವಡಿಸಿರುವದಿಲ್ಲವೆಂದು ಸದಸ್ಯರು ಸಭೆಯಲ್ಲಿ ತಿಳಿಸಿದಾಗ, ನಾಮಫಲಕಗಳನ್ನು ಕೂಡಲೇ ಅಳವಡಿಸಲು ಕ್ರಮವಹಿಸಬೇಕೆಂದು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
ಗೃಹಜ್ಯೋತಿ, ಶಕ್ತಿ ಯೋಜನೆ, ಯುವ ನಿಧಿ ಬರುವ ದಿನಗಳಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಜರುಗಲಿದ್ದು, ಇಲಾಖೆಯ ಅಧಿಕಾರಿಗಳು ತಮ್ಮ ಫಲಾನುಭವಿಗಳನ್ನು ಗ್ರಾಮವಾರು ಸಮಾವೇಶಕ್ಕೆ ಕರೆತರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
5 ಗ್ಯಾರಂಟಿ ಯೋಜನೆಗಳ ಪ್ರತಿ ಫಲಾನುಭವಿಗೆ ತಲುಪುವಂತೆ ಹಾಜರಿದ್ದ ಎಲ್ಲಾ ಸದಸ್ಯರು, ಅನುಷ್ಠಾನ ಅಧಿಕಾರಿಗಳಿಗೆ ಸಭೆಯ ಅಧ್ಯಕ್ಷರು ಸೂಚಿಸಿದರು.
ಸಭೆಯಲ್ಲಿ ಕೊಪ್ಪಳ ತಹಶೀಲ್ದಾರ ವಿಠ್ಠಲ್ ಚೌಗಲಾ, ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸರ್ವ ಸದಸ್ಯರು, 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು.