ಕರ್ನಾಟಕದ ಗಡಿಭಾಗದ ಬೆಳಗಾವಿಯಲ್ಲಿ ಕನ್ನಡದ ಸ್ಪೂರ್ತಿಯ ಸೆಲೆಯಾಗಿ ನಿಂತು ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನ ಮೂಡಿಸಿದವರು ಪ್ರೊ. ಎಂ. ಎಸ್. ಇಂಚಲರು. ಅವರು ಮೂರು ದಶಕಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಶ್ರೇಷ್ಠ ಪ್ರಾಧ್ಯಾಪಕರಾಗಿ ಪ್ರಸಿದ್ಧಿ ಪಡೆದವರು. ಅವರು ನಡುಗನ್ನಡ ಹಳಗನ್ನಡಗಳನ್ನು ನಿರರ್ಗಳವಾಗಿ ಬೋಧಿಸಬಲ್ಲವರು. ಅವರು ಕವಿತೆ, ಪ್ರಬಂಧ, ಸಂಗೀತ ರೂಪಕಗಳನ್ನು ರಚಿಸಿದ್ದಾರೆ. ತಮ್ಮ ಉದಾತ್ತ ಬದುಕಿನಿಂದ ಶಿಕ್ಷಕ ವೃತ್ತಿಯ ಘನತೆ ಗೌರವಗಳನ್ನು ಹೆಚ್ಚಿಸಿದ್ದಾರೆ.
ಪ್ರೊ. ಮಲ್ಲಿಕಾರ್ಜನ ಇಂಚಲ ಅವರು ಬೆಳಗಾವಿಯಲ್ಲಿ 1946ರ ಜನೇವರಿ 23ರಂದು ಜನಿಸಿದರು. ತಂದೆ ಖ್ಯಾತ ಕವಿ ಎಸ್. ಡಿ. ಇಂಚಲರು, ತಾಯಿ ಕಮಲಾದೇವಿ. ತಂದೆ ಹೈಸ್ಕೂಲ ಮತ್ತು ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರು. ಅವರ ಅಜ್ಜ ದೇಮಪ್ಪ ಪ್ರಾಥಮಿಕ ಶಾಲಾ ಶಿಕ್ಷಕರು. ಹೀಗೆ ಮೂರು ತಲೆಮಾರುಗಳ ಶಿಕ್ಷಣದ ಪರಿಸರದಲ್ಲಿಯೇ ಬೆಳೆದ ಮಲ್ಲಿಕಾರ್ಜುನರು ಬೆಳಗಾವಿ ಕೆ.ಎಲ್.ಇ. ಸಂಸ್ಥೆಯ ಜಿ.ಎ. ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣವನ್ನು ಪೂರೈಸಿ, 1967ರಲ್ಲಿ ಲಿಂಗರಾಜು ಕಾಲೇಜುದಿಂದ ಬಿ.ಎ. ಪದವಿಯನ್ನು ಕನ್ನಡ ವಿಷಯದಲ್ಲಿ ಪಡೆದರು. ನಂತರ 1969ರಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ಕನ್ನಡದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಮುಗಿಸಿದರು.
ಪ್ರೊ. ಮಲ್ಲಿಕಾರ್ಜುನ ಇಂಚಲ ಅವರು 1969ರಲ್ಲಿ ಶೇಡಬಾಳದ ಕಾಲೇಜ ಆಫ್ ಕಾಮರ್ಸನಲ್ಲಿ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದರು. ಅವರು ಹುಬ್ಬಳ್ಳಿ, ಅಥಣಿಗಳಲ್ಲಿ ಸೇವೆಸಲ್ಲಿಸಿ, ಪದೋನ್ನತಿ ಹೊಂದಿ 2001ರಲ್ಲಿ ಲಿಂಗರಾಜ ಕಾಲೇಜು ಪ್ರಾಚಾರ್ಯರಾಗಿ ಮತ್ತು 2002 ರಿಂದ 2004ರವರೆಗೆ ನಿಪ್ಪಾಣಿಯ ಜಿ.ಆಯ್.ಬಾಗೇವಾಡಿ ಕಾಲೇಜು ಪ್ರಾಚಾರ್ಯರಾಗಿ ಅನುಪಮ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದರು. ಅವರು ವಿದ್ಯಾರ್ಥಿಗಳಿಗೆ ಅತ್ಯಂತ ಆತ್ಮೀಯರಾಗಿ ಬದ್ಧತೆಯಿಂದ ಪಾಠ ಮಾಡಿ ಮಾದರಿಯಾಗಿದ್ದರು. ಪ್ರೊ. ಇಂಚಲರು ವಿದ್ಯಾರ್ಥಿಗಳಲ್ಲಿ ಧೈರ್ಯ, ಉತ್ಸಾಹವನ್ನು ತುಂಬುತ್ತಿದ್ದರು. ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸಿಕೊಂಡ ಅವರು ವಿದ್ಯಾರ್ಥಿಗಳ ನೆಚ್ಚಿನ, ಹೆಮ್ಮೆಯ ಪ್ರಾಧ್ಯಾಪಕರು. ಸರಳ ನಡೆ-ನುಡಿ, ಯಾರ ಮನಸ್ಸನ್ನು ನೋಯಿಸದಂತಹ ಮನೋಭಾವ ಅವರದು. ಅವರಿಂದ ಸ್ಪೂರ್ತಿ ಪಡೆದ ಅನೇಕ ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ಕಂಡುಕೊಂಡಿದ್ದಾರೆ. ಪ್ರೊ.ಇಂಚಲರವರು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಮಯದಲ್ಲಿ ಈಗಿನ ನಿಡಸೋಸಿ ಸಿದ್ಧ ಸಂಸ್ಥಾನಮಠದ ಶ್ರೀ ಮ.ನಿ.ಪ್ರ.ಡಾ.ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಗದಗ-ಡಂಬಳ ತೋಂಟದಾರ‌್ಯ ಸಂಸ್ಥಾನಮಠದ ಶ್ರೀ.ಮ.ನಿ.ಪ್ರ.ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಖ್ಯಾತ ಕವಿಗಳಾದ ಡಾ.ಸರಜೂ ಕಾಟಕರ ಮತ್ತು ಸತೀಶ ಕುಲಕರ್ಣಿಯವರು ಶಿಷ್ಯರಾಗಿದ್ದರು. ಇವರೆಲ್ಲರ ಸಾಧನೆಗೆ ಪ್ರೊ. ಎಂ.ಎಸ್.ಇಂಚಲರವರು ಪ್ರೇರಣೆಯಾಗಿದ್ದರು.
ವೃತ್ತಿಯಲ್ಲಿ ಪ್ರಾಧ್ಯಾಪಕ, ಪ್ರವೃತ್ತಿಯಲ್ಲಿ ಸಾಹಿತಿ, ಕವಿ, ಲೇಖಕರಾಗಿರುವ ಪ್ರೊ. ಎಂ.ಎಸ್.ಇಂಚಲ ಅವರು ಹಲವಾರು ರೀತಿಯ ಬರಹ, ಕೆಲಸ ಕಾರ್ಯಗಳಲ್ಲಿ, ನಿರತರಾಗಿದ್ದಾರೆ. ಬಡವರ ಬಂಧು ನೀಲಿ ರಾಚಪ್ಪನವರು, ಉರಿಲಿಂಗದೇವ, ಗದ್ಯ ಸುಗಂಧ, ಒಲವಿನ ಕೆನೆ, ಸೌಜನ್ಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಿಸಿದ್ದಾರೆ. ಅಲ್ಲದೇ ಭಾರತಿಗೆ ಅಭಿನಂದನೆ, ವಿಜಯೋತ್ಸವ, ಬೆಳಕಿನ ಹಬ್ಬ ಹಾಗೂ ಗಜವದನ, ಸಂಗೀತ ರೂಪಕಗಳನ್ನು ಪ್ರೊ. ಇಂಚಲರವರು ನೀಡಿದ್ದಾರೆ. ಆಯ್ದಕ್ಕಿ ಮಾರಯ್ಯ, ಶರಣರ ಕಾಯಕ ವೈಭವ, ಜಾನಪದ ಸಾಹಿತ್ಯದಲ್ಲಿ ಸಹೋದರ-ಸಹೋದರಿಯರು, ಮನ ಮುಟ್ಟುವ ಕಾವ್ಯ : ನಮನ, ಭಾವ ಜೀವಿ ಡಾ. ಡಿ.ಎಸ್.ಕರ್ಕಿ ಮುಂತಾದ ಲೇಖನಗಳು ನಾಡಿನ ಖ್ಯಾತ ಸಂಚಿಕೆಗಳಲ್ಲಿ ಪ್ರಕಟಗೊಂಡಿವೆ. ಧಾರವಾಡ ಆಕಾಶವಾಣಿಯಲ್ಲಿ ವಿಶ್ವಭಾರತಿಗೆ ವಂದನೆ, ನಾವು ನಿನ್ನ ಮಕ್ಕಳು ಮುಂತಾದ ಕವನಗಳು, ಜಾನಪದ ಸಾಹಿತ್ಯದಲ್ಲಿ ಕುಟುಂಬ ಜೀವನ ಹಾಗೂ ಸಮಾಜ, ಜಾನಪದ ಒಡಪುಗಳು ಮತ್ತು ಮೇಧಾವಿ ಶಿಕ್ಷಕ ಡಾ.ರಾಧಾಕೃಷ್ಣನ್ ಹೀಗೆ ಹತ್ತು ಹಲವು ವಿಷಯಗಳ ಕುರಿತ ಅವರ ಉಪನ್ಯಾಸಗಳು ಪ್ರಸಾರಗೊಂಡಿವೆ. ಅವರು ಗೋಪವ್ವನ ಹಾಡುಗಳು ಮತ್ತು ಮದುವೆಯ ಹಾಡುಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ.
ವ್ಯಕ್ತಿ ಚಿತ್ರಗಳನ್ನು ರಚಿಸುವುದು ಇಂಚಲರಿಗೆ ತುಂಬ ಪ್ರಿಯವಾದುದು. ಹರ್ಡೆಕರ ಮಂಜಪ್ಪ, ನಾಗನೂರು ಅಜ್ಜನವರು, ಕೆ.ಎಲ್.ಇ. ಸಂಸ್ಥೆಯ ಸಂಸ್ಥಾಪಕ ಸಪ್ತರ್ಷಿಗಳಲ್ಲಿ ಹಿರಿಯರಾದ ಬಿ.ಬಿ.ಮಮದಾಪುರ, ತುರಮರಿ ಮಾಮಾ, ಕೆ.ಎಲ್.ಇ. ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ, ನಮ್ಮ ರಾಚನಾಯ್ಕರ ಸರ್ ಹೀಗೆ ವಿವಿಧ ವ್ಯಕ್ತಿಗಳ ಬಗೆಗೆ ತುಂಬಾ ಆಪ್ತ ಶೈಲಿಯಲ್ಲಿ ಮಾದರಿಯೆನ್ನುವಂತೆ ನಿರೂಪಿಸಿದ್ದಾರೆ. ಒವಿನ ಕೆನೆ, ಕವನ ಸಂಕಲನದ ಕವಿತೆಗಳು ಅವರ ತಂದೆ ಖ್ಯಾತ ಕವಿ ಎಸ್.ಡಿ.ಇಂಚಲರ ಪ್ರಭಾವವನ್ನು ಒಳಗೊಂಡಿವೆ. ಸೂರ್ಯ, ನಿಸರ್ಗ, ಯುಗಾದಿ, ಹೊಸ ವರುಷ, ಸಾಲು ಬೆಳ್ಳಕ್ಕಿ ಮುಂತಾದ ಕವಿತೆಗಳಲ್ಲಿ ಇಂಚಲರ ನಿಸರ್ಗ ಪ್ರೀತಿಯನ್ನು ಕಾಣಬಹುದು. ಅಲ್ಲದೇ ಗಂಗಪ್ಪಾ ವಾಲಿ, ಪಂಡಿತಪ್ಪ ಚಿಕ್ಕೋಡಿ, ಸರದಾರ ವೀರನಗೌಡರು ಮುಂತಾದ ಗೌರವಾನ್ವಿತರ ಬಗ್ಗೆಯೂ ಸಂಕಲನದಲ್ಲಿ ಕವಿತೆಗಳಿವೆ. ಅವರ ಕಾರ್ಯವನ್ನು ಸ್ಮರಿಸುವ ಇಂಚಲರು ಕಾವ್ಯದ ಮೂಲಕ ಅವರಿಗೆ ಗೌರವನ್ನು ಸಲ್ಲಿಸುತ್ತಾರೆ. ಅಲ್ಲದೇ ಜಾನಪದ ಸಾಹಿತ್ಯಕೆ ಸಂಬಂಧಪಟ್ಟ ಲೇಖನಗಳು, ಗ್ರಾಮೀಣ ಬದುಕಿನ ವೈವಿದ್ಯಮಯ ಮುಖಗಳ ಒಳನೋಟಗಳನ್ನು ಚಿತ್ರಿಸುವಲ್ಲಿ ಯಶಸ್ವಿಯಾಗಿವೆ. ಜಾನಪದ ದಂಪತಿಗಳ ಅಪೂರ್ವ ರಸಿಕತೆಗೆ ದನಿಯಾಗಬಲ್ಲ ಒಡಪುಗಳು ಓದುಗರಲ್ಲಿ ನಗೆಬುಗ್ಗಿಯನ್ನು ಪ್ರಕಟಿಸುತ್ತವೆ. ಜಾನಪದ ರಸ ನಿಮಿಷಗಳನ್ನು ಹೇಳುವಾಗಿನ ಉತ್ಸಾಹ ಹಾಗೂ ಅಚ್ಚುಕಟ್ಟುತನ ಎದ್ದು ಕಾಣುತ್ತವೆ. ಪ್ರೊ ಇಂಚಲರು ಉದಯೋನ್ಮುಖ ಕವಿ, ಲೇಖಕರ ಕವನ ಸಂಕಲನ, ವಚನ ಸಂಕಲನ, ಅಂಕಣ ಬರಹಗಳ ಸಂಕಲನಗಳಿಗೆ ಮುನ್ನುಡಿ, ಬೆನ್ನುಡಿಗಳನ್ನು ಬರೆದು ಪ್ರೋತ್ಸಾಹಿಸಿದ್ದಾರೆ.
ಅವರು ತಂದೆಯವರ ಹೆಸರಿನಲ್ಲಿ ಕವಿ ಎಸ್.ಡಿ.ಇಂಚಲ ಸ್ಮಾರಕ ಸಮಿತಿಯನ್ನು ರಚಿಸಿದ್ದು, ಪ್ರತಿವರ್ಷ ಉಪನ್ಯಾಸ ಮತ್ತು ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತಿರುವದು ಹೆಮ್ಮೆಯ ಸಂಗತಿ. ಕವಿ ಇಂಚಲರವರ ಸಾಧನೆಯನ್ನು ಸಮಾಜಕ್ಕೆ ಪರಿಚಯಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾದುದು. ಪ್ರೊ. ಎಂ.ಎಸ್.ಇಂಚಲ ಅವರು ಬೆಳಗಾವಿಯ ಕನ್ನಡ ಸಾಹಿತ್ಯ ಭವನದ ಗೌರವ ಕಾರ್ಯದರ್ಶಿಗಳಾಗಿ, ಹರ್ಡೆಕರ ಮಂಜಪ್ಪನವರ ಗ್ರಂಥ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವರು. ಅಲ್ಲದೇ ಬೆಳಗಾವಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಬಾಳೇಕುಂದ್ರಿಯಲ್ಲಿ ನಡೆದ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವನ್ನು ಸ್ವೀಕರಿಸಿದ್ದಾರೆ. ಅವರು ವಿವಿಧ ಸಂಘ-ಸಂಸ್ಥೆಗಳ ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಿರಿಗನ್ನಡ ಸಾಹಿತ್ಯ ಪ್ರಶಸ್ತಿ, ಬಾಗಲಕೋಟ ಜಿಲ್ಲಾ ಕಸಾಪ ಘಟಕದಿಂದ ಸನ್ಮಾನ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ ಹೀಗೆ ಹತ್ತು ಹಲವು ಪ್ರಶಸ್ತಿ-ಪುರಸ್ಕಾರಗಳು ಅವರನ್ನರಸಿಕೊಂಡು ಬಂದಿವೆ.
ಪ್ರೊ. ಎಂ. ಎಸ್. ಇಂಚಲರವರು 1971ರ ಮೇ 20ರಂದು ಮಹಾನಂದಾ ಅವರನ್ನು ಮದುವೆಯಾದರು. ಅವರಿಗೆ ಮೂವರು ಮಕ್ಕಳು. ವಿನುತಾ, ಶಿವಪುತ್ರ ಹಾಗೂ ಶಿಲ್ಪಾ. ವಿನುತಾರವರು ವಿವೇಕರನ್ನು ಮತ್ತು ಶಿಲ್ಪಾರವರು ನೀರಜರನ್ನು ಮದುವೆಯಾಗಿದ್ದಾರೆ. ಮಗ ಶಿವಪುತ್ರ ಮತ್ತು ಸೊಸೆ ರಶ್ಮಿ ಈರ‌್ವರೂ ಸಾಪ್ಟವೇರ್ ಇಂಜನೀಯರರು, ಪುನಾದಲ್ಲಿ ನೆಲೆಸಿದ್ದಾರೆ. ರೋಹಿತ, ಸಚೇತನ ಮೊಮ್ಮಕ್ಕಳೊಂದಿಗೆ ಪ್ರೊ. ಇಂಚಲರು ವಿಶ್ರಾಂತ ನೆಮ್ಮಿದಿಯ ಬದುಕನ್ನು ಸಾಗಿಸುತ್ತಿದ್ದಾರೆ.
ಪ್ರೊ. ಎಂ.ಎಸ್.ಇಂಚಲ ಅವರು ನಾಡು, ನುಡಿ, ಕಲೆ, ಸಂಸ್ಕೃತಿಯ ಬಗ್ಗೆ ಅಪಾರವಾದ ಅಭಿಮಾನ ಗೌರವನ್ನು ಹೊಂದಿದವರು. ಕನ್ನಡ ಪ್ರೇಮಿಗಳಾದ ಅವರು ಕನ್ನಡದ ಏಳ್ಗೆಗಾಗಿ ಶ್ರಮಿಸಿದವರು. ಹಿರಿಯ ಕಿರಿಯರೆನ್ನುವ ಭೇದಭಾವವಿಲ್ಲದೇ ಎಲ್ಲರೊಂದಿಗೆ ಬೆರೆತುಕೊಳ್ಳುವ ಇಂಚಲರವರದು ವೈಶಿಷ್ಟಪೂರ್ಣವಾದ ವ್ಯಕ್ತಿತ್ವ. ಎಪ್ಪತ್ತೇಳು ವಯಸ್ಸಿನ ಅವರ ಅದಮ್ಯವಾದ ಜೀವನಾಸಕ್ತಿ, ಮಾನವಿಯ ಮೌಲ್ಯಗಳು ನಮಗೆಲ್ಲರಿಗೂ ಮಾರ್ಗದರ್ಶಿಯಾಗಲಿ. ಸರಳ ಸಜ್ಜನಿಕೆಗೆ ಹೆಸರಾದ ಪ್ರೊ.ಇಂಚಲರವರ ಬದುಕು ಬರಹ ನಮಗೆಲ್ಲ ಸ್ಪೂರ್ತಿದಾಯಕ. ಸಂಪರ್ಕಿಸಿರಿ: 9880734130
- * * * -