ನವದೆಹಲಿ, ಜೂನ್ 04, ಹಿರಿಯ ಚಲನಚಿತ್ರ ನಿರ್ಮಾಪಕ ಬಸು ಚಟರ್ಜಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂತಾಪ ಸೂಚಿಸಿದ್ದಾರೆ. “ಬಸು ಚಟರ್ಜಿಯವರ ನಿಧನದ ಸುದ್ದಿ ತಿಳಿದು ದುಃಖವಾಗಿದೆ ಅವರ ನಿರ್ಮಾಣದ ಚಿತ್ರಗಳು ಅದ್ಭುತ ಮತ್ತು ಸೂಕ್ಷ್ಮವಾಗಿದ್ದು, ಜನರ ಹೃದಯವನ್ನು ಮುಟ್ಟಿವೆ. ಸರಳ ಮತ್ತು ಸಂಕೀರ್ಣ ಭಾವನೆಗಳನ್ನು, ಜನರ ಹೋರಾಟಗಳನ್ನು ಅವು ಪ್ರತಿನಿಧಿಸುತ್ತದೆ. ಅವರ ಕುಟುಂಬ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ಸಂತಾಪವಿದೆ” ಎಂದು ಸಂದೇಶದಲ್ಲಿ ತಿಳಿಸಿದ್ದಾರೆ. ಚಲನಚಿತ್ರ ನಿರ್ಮಾಪಕ-ಚಿತ್ರಕಥೆಗಾರ ಬಸು ಚಟರ್ಜಿ, ‘ಚೋಟಿ ಸಿ ಬಾತ್’, ‘ರಜನಿಗಂಧ’ ‘ಬಾತೋ ಬಾತೋ ಮೇ’, ‘ಏಕ್ ರುಕಾ ಹುವಾ ಫೈಸ್ಲಾ’ 'ಚಮೇಲಿ ಕಿ ಶಾದಿ' ಮುಂತಾದ ಚಿತ್ರಗಳನ್ನು ನಿರ್ಮಿಸಿ ಜನಪ್ರಿಯರಾಗಿದ್ದಾರೆ. ಬಸು ಚಟರ್ಜಿ ವಯೋಸಹಜ ಕಾಯಿಲೆಗಳ ಕಾರಣ ಗುರುವಾರ ಮುಂಬೈನಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.