ಮಿರ್ಜಾಪುರ: ಬೆದರಿಕೆಗಳಿಗೆ ಬಗ್ಗುವುದಿಲ್ಲ: ಪ್ರಿಯಾಂಕಾ

  ಮಿರ್ಜಾಪುರ, ಮಾ 20:  ಪ್ರಧಾನಿ ನರೇಂದ್ರ ಮೋದಿಯವರ ‘ಕುಟುಂಬ ರಾಜಕಾರಣ’ ಟೀಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ತಮ್ಮನ್ನು ಹೆದರಿಸುವ ಪ್ರಯತ್ನಗಳು ನಡೆಯುತ್ತಿವೆಯಾದರೂ ತಾವು ಹೆದರುವುದಿಲ್ಲ ಎಂದು ಹೇಳಿದ್ದಾರೆ.

  ವಾರಾಣಸಿಯಿಂದ ಮಿರ್ಜಾಪುರಕ್ಕೆ ತೆರಳುವ ಮುನ್ನ ಸುದ್ದಿಗಾರರ ಜತೆ ಅವರು ಮಾತನಾಡಿ, ಅಧಿಕಾರದಲ್ಲಿರುವ ಮಂದಿ, ತಾವು ಇತರರನ್ನು ಹೆದರಿಸಬಹುದು ಮತ್ತು ಮರುಳು ಮಾಡಬಹುದು ಎಂಬ ಎರಡು ತಪ್ಪು ಗ್ರಹಿಕೆ ಹೊಂದಿದ್ದಾರೆ ಎಂದು ವ್ಯಂಗ್ಯವಾಡಿದರು.

  ಹೋರಾಟದ ಹಾದಿ ಸುದೀರ್ಘವಾಗಿದೆ,  ತಾವು ಎಷ್ಟು ಘಾಸಿಗೊಂಡರೂ ಪರವಾಗಿಲ್ಲ.  ಜನರ ಹಿತಾಸಕ್ತಿಗಾಗಿ ಹೋರಾಟ ಮತ್ತು ಪ್ರಚಾರ ಮುಂದುವರಿಯಲಿದೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ದೇಶದ ಸಾರ್ವಜನಿಕ ಸಂಸ್ಥೆಗಳು ನಾಶಗೊಂಡಿವೆ ಎಂದರು.

  ಪ್ರಧಾನಿ ನರೇಂದ್ರ ಮೋದಿಯವರು “ಕಾಂಗ್ರೆಸ್ ಪಕ್ಷವು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಳಿಸುತ್ತಿದೆ ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಕುಂದುಂಟು ಮಾಡುತ್ತಿದೆ” ಎಂದು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದರು.  ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿಯವರು ಮೊನಚಾಗಿ ಪ್ರತಿಕ್ರಿಯಿಸಿದ್ದಾರೆ.