ನವದೆಹಲಿ 28: ಕೇರಳದ ವಯನಾಡ್‌ನಿಂದ ನಡೆದ ಉಪಚುನಾವಣೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಮತಗಳ ದಾಖಲೆ ಅಂತರದಿಂದ ಗೆಲುವು ಸಾಧಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗುರುವಾರ ಲೋಕಸಭೆಯ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ಪ್ರಿಯಾಂಕಾ ಅವರು ಪ್ರಮಾಣವಚನ ಸ್ವೀಕಾರ ಮಾಡಿದ್ದು, ಪ್ರಿಯಾಂಕಾ ಅವರಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರಮಾಣ ವಚನ ಬೋಧಿಸಿದರು.
ಇದೇ ವೇಳೆ ನಾಂದೇಡ್ ಉಪಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೆಸ್‌ನ ರವೀಂದ್ರ ಚವಾಣ್ ಕೂಡ ದೇವರ ಹೆಸರಿನಲ್ಲಿ ಮರಾಠಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಿಯಾಂಕಾ ಗಾಂಧಿ 2019 ರಲ್ಲಿ ಸಕ್ರಿಯ ರಾಜಕೀಯಕ್ಕೆ ಧುಮುಕಿದರು ಮತ್ತು ನಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಐದು ವರ್ಷಗಳ ನಂತರ, ಪ್ರಿಯಾಂಕಾ ಗಾಂಧಿ ಅವರು ಚುನಾಯಿತ ಜನಪ್ರತಿನಿಧಿಯಾಗಿ ರಾಜಕೀಯ ಭವಿಷ್ಯವನ್ನು ಪ್ರಾರಂಭಿಸಿದ್ದಾರೆ.
ಪ್ರಮಾಣವಚನ ಸ್ವೀಕಾರದ ವೇಳೆ ಪ್ರಿಯಾಂಕಾ ಅವರು ಕೇರಳದ ಬ್ರೋಕೆಡ್ ಸೀರೆಯನ್ನು ಧರಿಸಿದ್ದರು. ತನ್ನ ತಾಯಿ ಸೋನಿಯಾ ಗಾಂಧಿ, ಸಹೋದರ ರಾಹುಲ್ ಗಾಂಧಿ ಮತ್ತು ಪತಿ ರಾಬರ್ಟ್ ವಾದ್ರಾ ಅವರೊಂದಿಗೆ ಸಂಸತ್ ಭವನಕ್ಕೆ ಆಗಮಿಸಿದ್ದರು. ಅಲ್ಲದೆ, ಪ್ರಿಯಾಂಕಾ ಅವರ ಮಕ್ಕಳಿಬ್ಬರೂ ಸಂಸತ್ಗೆ ಆಗಮಿಸಿದ್ದರು.