ಕಲಬುರಗಿ,
ಮಾ.29, ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸೂಕ್ತ ಪ್ರತಿಬಂಧಕ ಕ್ರಮಗಳನ್ನು
ಕೈಗೊಳ್ಳುವ ಉದ್ದೇಶದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಾಂಗ್ರೆಸ್ ಶಾಸಕ
ಪ್ರಿಯಾಂಕ್ ಖರ್ಗೆ ಅವರು ತಮ್ಮ ಎರಡು ತಿಂಗಳ ವೇತನ ನೀಡಿದ್ದಾರೆ.ಪ್ರಿಯಂಕ್ ಖರ್ಗೆ ಅವರು 2 ಲಕ್ಷ ರೂ ಚೆಕ್ ಅನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ರವಿವಾರ ಹಸ್ತಾಂತರಿಸಿದರು.
ಕಾಂಗ್ರೆಸ್ ನ ಎಲ್ಲಾ ಶಾಸಕರು ಒಂದು ಲಕ್ಷ ರೂ ವೇತನ ನೀಡಲು ತೀರ್ಮಾನಿಸಿದ್ದು, ಪ್ರಿಯಾಂಕ್ ಖರ್ಗೆ ಮಾತ್ರ ದುಪ್ಪಟ್ಟು ಹಣ ನೀಡಿದ್ದಾರೆ.ಈ
ಮಧ್ಯೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ಹೊರ ರಾಜ್ಯಗಳಲ್ಲಿರುವ ಕಲ್ಯಾಣ
ಕರ್ನಾಟಕದ ಕೂಲಿ ಕಾರ್ಮಿಕರನ್ನು ವಾಪಸ್ಸು ಕರೆಸಿಕೊಳ್ಳಲು ಬಸ್ ವ್ಯವಸ್ಥೆ ಕಲ್ಪಿಸುವಂತೆ
ಆಗ್ರಹಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಶಾಸಕ ಪ್ರಿಯಾಂಕ್ ಖರ್ಗೆ ಪತ್ರ
ಬರೆದಿದ್ದಾರೆ.ಬರ ಪೀಡಿತ ಕಲ್ಯಾಣ ಕರ್ನಾಟಕದ ಜನರು ಬೆಂಗಳೂರು, ಮಹಾರಾಷ್ಟ್ರ,
ಗೋವಾ, ಆಂಧ್ರಪ್ರದೇಶ, ಹೈದರಾಬಾದ್ ಮುಂತಾದ ಕಡೆ ಕೆಲಸ ಅರಸಿ ಗುಳೆ ಹೋಗಿದ್ದು ಪ್ರಸ್ತುತ
ಕೊರೊನಾ ಸೋಂಕು ಹಬ್ಬುವ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದ್ದರಿಂದ ಕೂಲಿ
ಕಾರ್ಮಿಕರು ತಾವಿರುವ ಜಾಗಗಳಲ್ಲಿ ಅನ್ನ ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಹೀಗಾಗಿ
ತಕ್ಷಣವೇ ಅವರನ್ನು ತಮ್ಮ ಸ್ವಂತ ಊರುಗಳಿಗೆ ಕರೆಸಿಕೊಳ್ಳಲು ಸಾರಿಗೆ ವ್ಯವಸ್ಥೆ
ಕಲ್ಪಿಸಿ ಎಂದಿದ್ದಾರೆ.
ಇಲ್ಲಿಗೆ ಬಂದ ನಂತರ ಸೂಕ್ತ ವೈದ್ಯಕೀಯ ತಪಾಸಣೆ ನಡೆಸಿ ಆ
ನಂತರ ಸರಕಾರಿ ಶಾಲೆ ಕಲ್ಯಾಣಮಂಟಪ ಮುಂತಾದ ಕಡೆ ಹದಿನಾಲ್ಕು ದಿನಗಳ ಕಾಲ ಸೂಕ್ತ
ವ್ಯವಸ್ಥೆ ಕಲ್ಪಿಸಬೇಕು. ಆದ್ದರಿಂದ ಈ ನಿಟ್ಟಿನಲ್ಲಿ ಈ ಕೂಡಲೇ ಅಗತ್ಯ ಕ್ರಮ
ಕೈಗೊಳ್ಳುವಂತೆ ಅವರು ತಮ್ಮ ಪತ್ರದಲ್ಲಿ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.ಇನ್ನು,
ಕೂಲಿ ಕಾರ್ಮಿಕರು ಸಿಕ್ಕ ಸಿಕ್ಕ ಖಾಸಗಿ ವಾಹನದಲ್ಲಿ ತಮ್ಮ ತಮ್ಮ ಊರುಗಳಿಗೆ
ತಂಡೋಪತಂಡವಾಗಿ ಬರುತ್ತಿದ್ದು ಅವರನ್ನು ಸೋಂಕು ತಪಾಸಣೆಗೆ ಒಳಪಡಿಸುತ್ತಿಲ್ಲ. ರಾಜ್ಯ
ಈಗಾಗಲೇ ಮೂರನೆಯ ಹಂತ ತಲುಪುವ ಭೀತಿ ಎದುರಿಸುತ್ತಿದ್ದು .ಇದರಿಂದಾಗಿಯೂ ಕೂಡಾ ಸೋಂಕು
ಹಬ್ಬುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕ್ರಮ ಅಗತ್ಯವಾಗಿದೆ ಎಂದು
ಆಗ್ರಹಿಸಿದ್ದಾರೆ.ವಿದೇಶದಲ್ಲಿರುವ ಭಾರತೀಯರನ್ನು ವಿಶೇಷ ವಿಮಾನದ ಮೂಲಕ
ತಾಯ್ನಾಡಿಗೆ ಕರೆತರಲಾಗಿದೆ. ಆದರೆ ನಮ್ಮ ದೇಶದ ಬೇರೆ ಬೇರೆ ಭಾಗಗಳಲ್ಲಿ ವಾಸಿಸುತ್ತಿರುವ
ಕೂಲಿಕಾರ್ಮಿಕರನ್ನು ಸುರಕ್ಷಿತವಾಗಿ ಅವರ ಊರುಗಳಿಗೆ ವಾಪಸ್ ಕರೆತಂದು ವೈದ್ಯಕೀಯ
ತಪಾಸಣೆ ನಡೆಸುತ್ತಿಲ್ಲ ಎಂದು ಶಾಸಕರು ವಿಷಾದಿಸಿದ್ದಾರೆ.