ಖಾಸಗಿ ಚಾನಲ್ಗಳಿಂದ ಜನರ ನೆಮ್ಮದಿ ಕದಡುವ ಕೆಲಸವಾಗಬಾರದು: ಜಿಲ್ಲಾಧಿಕಾರಿ ಹಿರೇಮಠ

ಗದಗ 25: ಖಾಸಗಿ ಟಿವಿಗಳಲ್ಲಿ ಪ್ರಸಾರವಾಗುವ ಸುದ್ದಿ ಅಥವಾ ಜಾಹೀರಾತು ಜನರ, ಕುಟುಂಬದ, ಸಮಾಜದ ಶಾಂತಿಯನ್ನು ಕದಡುವಂತಿರಬಾರದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನುಡಿದರು. 

ಗದಗ ಜಿಲ್ಲಾ ಮಟ್ಟದ ಕೇಬಲ್ ಟಿವಿ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಾವುದೇ ವರ್ಗದ ಭಾಷಿಕರ, ಧರ್ಮಗಳ, ಜನರ ನೆಮ್ಮದಿ ಕದಡುವ ಕಾರ್ಯಕ್ರಮಗಳನ್ನು ಕೇಬಲ್ ಅಥವಾ ಖಾಸಗಿ ಟಿವಿಗಳು ಬಿತ್ತರಿಸುವುದನ್ನು ಕೇಬಲ್ ಟಿವಿ ನಿರ್ವಹಣಾ ಕಾಯ್ದೆ 1995ರ ರೀತ್ಯ ನಿಷೇದಿಸಲಾಗಿದೆ. ಚಾನಲ್ದಲ್ಲಿ ಬರುವ ಸುದ್ದಿಗಳು ಪ್ರಚೋದನಕಾರಿಯಾಗಬಾರದು. ಗ್ರಾಹಕರು ಅಥವಾ ಸಾರ್ವಜನಿಕರು ಕೇಬಲ್ ಟಿ.ವಿ. ಸೇವೆಗೆ ಸಂಬಂಧಿಸಿದ ದೂರುಗಳನ್ನು ಲಿಖಿತವಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ದೂರು ಸಲ್ಲಿಸಬಹುದಾಗಿದೆ. ಜಿಲ್ಲಾ ಮಟ್ಟದ ಕೇಬಲ್ ಟಿ.ವಿ ನಿರ್ವಹಣಾ ಸಮಿತಿ ರಚನೆ ಹಾಗೂ ಕುಂದುಕೊರತೆ ದಾಖಲಿಸುವ ಕುರಿತು ನಿಗದಿತವಾಗಿ ಕ್ರಮ ಕೈಗೊಳ್ಳಲಾಗುವುದು. ಪೋಲಿಸ್ ಇಲಾಖೆ ಹಾಗೂ ಗ್ರಾಮ ಪಂಚಾಯತ ಮಟ್ಟದಲ್ಲಿ ಮಾಹಿತಿ ನೀಡಲು ಅಗತ್ಯದ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಗದಗ ಜಿಲ್ಲಾ ಮಟ್ಟದ ಕೇಬಲ್ ಟಿವಿ ನಿರ್ವಹಣಾ ಸಮಿತಿ ಸಭೆಯಲ್ಲಿ ಗದಗ ಟೀನ್ ಪೋಲಿಸ್ ಸಿಪಿಐ ಆರ್.ಎಫ್. ದೇಸಾಯಿ, ಬಾಲಾಜಿ ಖಾದಿ ಗ್ರಾಮೊದ್ಯೋಗ ಕೈಗಾರಿಕಾ ಸಂಘದ ಅಧೀಕ್ಷಕ ಎಚ್.ಜಿ.ಹಿರೇಗೌಡರ, ಸೇವಾ ಭಾರತಿ ಟ್ರಸ್ಟ್ ವಿಕಲಚೇತನರ ವಿಶೇಷ ಶಾಲೆಯ ಸಿ.ಬಿ. ಚನ್ನಪ್ಪನವರ, ಶಿಕ್ಷಣ ಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಸುರೇಶ ಎಚ್.ಎಸ್,  ಪ್ರಧಾನ ಅಂಚೆ ಕಚೇರಿ ಪಾಲಕರಾದ ಸುಭಾಸ ಜಿ.ಎಮ್, ಸಮಿತಿ ಸದಸ್ಯರು ಇದ್ದರು.