ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ: ಭಾರತದ ಪ್ರಥ್ವಿ ಶಾಗೆ ಗಾಯ

ಸಿಡ್ನಿ, ನ.30 - ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಭಾರತಕ್ಕೆ ಆಘಾತಕಾರಿಯಾಗುವ ಘಟನೆ ನಡೆದಿದೆ. ಆಸಿಸ್ ವಿರುದ್ದದ ಅಭ್ಯಾಸ ಪಂದ್ಯದ ವೇಳೆ ಭಾರತದ ಭರವಸೆಯ ಆರಂಭಿಕ ಆಟಗಾರ ಪ್ರಥ್ವಿ ಶಾ ಗಾಯಗೊಂಡಿದ್ದಾರೆ. ಹೀಗಾಗಿ ಅವರು ಮೊದಲ ಟೆಸ್ಟ್ಗೆ ಅಲಭ್ಯವಾಗಲಿದ್ದು, ಕೊಹ್ಲಿ ಪಡೆಗೆ ಹಿನ್ನಡೆಯಾಗಿದೆ. 

ಪಂದ್ಯದ ವೇಳೆ ಕ್ಯಾಚ್ ಹಿಡಿಯುವಾಗ ಪೃಥ್ವಿ ಕಾಲಿಗೆ ಗಾಯವಾಗಿದೆ. ಅವರ ಎಡಗಾಲಿನ ಹಿಮ್ಮಡಿಗೆ ಪೆಟ್ಟಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಹೇಳಿದೆ. 

ಅಡಿಲೆಡ್ನಲ್ಲಿ ಡಿ.6ರಿಂದ ಆರಂಭವಾಗುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ 19 ವರ್ಷದ ಪೃಥ್ವಿ ಒಪನಿಂಗ್ ಬ್ಯಾಟ್ಸ್ಮ್ಯಾನ್ ಆಗಿ ಮೈದಾನಕ್ಕೆ ಇಳಿಯುವವರಿದ್ದರು. ಆದರೆ ತೀವ್ರ ಗಾಯಗೊಂಡಿರುವುದರಿಂದ ಅವರು ಪಂದ್ಯದಲ್ಲಿ ಆಡುತ್ತಿಲ್ಲ. 

ಆಸ್ಟ್ರೇಲಿಯಾದ ಇಲವೆನ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಬ್ಯಾಕ್ಸ್ ಬ್ರಾಂಟ್ ಸಿಡಿಸಿದ ಚೆಂಡನ್ನು ಪೃಥ್ವಿ ಬೌಂಡರಿ ಗೆರೆ ಬಳಿ ಹಿಡಿಯಲು ಹಾರಿದರು ಈ ಸಂದರ್ಭದಲ್ಲಿ ಅವರು ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರೂ ಅವರ ಎಡಗಾಲಿನ ಹಿಮ್ಮಡಿಗೆ ಬಲವಾದ ಗಾಯವಾಯಿತು. 

ತೀವ್ರ ಗಾಯದಿಂದಾಗಿ ಎದ್ದು ನಿಲ್ಲುವುದಕ್ಕೂ ಸಾಧ್ಯವಾಗದೇ ಅವರು ನೋವು ಅನುಭವಿಸಿದರು. ತಕ್ಷಣ ಮೈದಾನಕ್ಕೆ ಆಗಮಿಸಿದ ಫಿಸಿಯೋಥೆರಪಿಸ್ಟ್ಗಳು ಅವರನ್ನು ಎತ್ತಿಕೊಂಡು ಪ್ರಥಮ ಚಿಕಿತ್ಸೆ ನೀಡಿದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಕಾಲಿಗೆ ಸ್ಕ್ಯಾನಿಂಗ್ ಮಾಡಲಾಗಿದೆ. 

ಅತಿಥೇಯ ತಂಡದ ವಿರುದ್ಧ ಪ್ರವಾಸಿ ಭಾರತ ಒಟ್ಟು ನಾಲ್ಕು ಟೆಸ್ಟ್ ಸರಣಿಗಳಲ್ಲಿ ಸೆಣಸಲಿದೆ.