ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆಗೆ ಆದ್ಯತೆ ನೀಡಿ: - ಜಿಲ್ಲಾಧಿಕಾರಿ
Prioritize neutering of stray dogs: - District Collector
ಲೋಕದರ್ಶನ ವರದಿ
ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆಗೆ ಆದ್ಯತೆ ನೀಡಿ:
- ಜಿಲ್ಲಾಧಿಕಾರಿ
ಧಾರವಾಡ 05: ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರಿಗೆ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸ್ಥಳೀಯ ಸಂಸ್ಥೆಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಈ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಬೀದಿ ನಾಯಿಗಳನ್ನು ನಿಯಂತ್ರಿಸಬೇಕು. ಮತ್ತು ನಾಯಿ ಕಡಿತವಾದಾಗ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲೆಯ ಪ್ರತಿ ಪಟ್ಟಣ ಹಾಗೂ ಗ್ರಾಮಗಳಲ್ಲಿ ಜನಜಾಗೃತಿ ಹಾಗೂ ತಿಳುವಳಿಕೆ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು.
ಅವರು ನಿನ್ನೆ (ಫೆ.4) ಸಂಜೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣ (ಎಬಿಸಿ ಮತ್ತು ಎಆರ್‌ವಿ) ಕಾರ್ಯಕ್ರಮದ ಜಿಲ್ಲಾ ಅನುಷ್ಠಾನ ಮತ್ತು ಮೇಲ್ವಿಚಾರಣ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಎಬಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸುವ ಸಂಪೂರ್ಣ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳದ್ದಾಗಿದ್ದು ಅವುಗಳ ವ್ಯಾಪ್ತಿಯಲ್ಲಿ ಸರ್ವೆ ಮಾಡಿಸಿ ಅಥವಾ ಜನಸಂಖ್ಯೆ (ಶೇ.2) ಆಧಾರದ ಮೇಲೆ ಬೀದಿನಾಯಿಗಳ ಸಂಖ್ಯೆಯನ್ನು ಲೆಕ್ಕಹಾಕಿ ಅದರ 50 ಪ್ರತಿಶತ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಯೋಜನೆ ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಸ್ಥಳೀಯ ಸಂಸ್ಥೆಗಳು ಶಸ್ತ್ರಚಿಕಿತ್ಸಾಹ ಕೊಠಡಿ ಹಾಗೂ ಕೆನಲ್‌ಗಳನ್ನು ಒಳಗೊಂಡ ಎಬಿಸಿ ಕೇಂದ್ರವನ್ನು ಸ್ಥಾಪಿಸಿ, ಎಬಿಸಿ ಕಾರ್ಯಕ್ರಮ ಕೈಗೊಳ್ಳಲು ಕೆಟಿಪಿಪಿ ನಿಯಮಾನುಸಾರ ಪ್ರಾಣಿ ಕಲ್ಯಾಣ ಮಂಡಳಿಯಿಂದ ಮಾನ್ಯತೆ ಪಡೆದ ಸ್ವಯಂಸೇವಾ ಸಂಸ್ಥೆಗಳನ್ನು ಗುರುತಿಸಿ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಿಂದ ಪ್ರಾಜೆಕ್ಟ್ ರಿಕಾಗ್ನಿಷನ್ ಪಡೆದು ಯೋಜನೆ ಅನುಷ್ಠಾನಗೊಳಿಸಬೇಕಾಗುತ್ತದೆ ಎಂದು ವಿವರಿಸಿದರು.
ಎನ್‌ಜಿಒಗಳು ಇಲ್ಲದಿದ್ದಲ್ಲಿ ಶಸ್ತ್ರಚಿಕಿತ್ಸೆಗಾಗಿ ಪಶುಪಾಲನ ಇಲಾಖೆಯ ಪಶು ವೈದ್ಯರನ್ನು ಉಪಯೋಗಿಸಿಕೊಂಡು ಸ್ಥಳೀಯ ಸಂಸ್ಥೆಗಳೆ ಯೋಜನೆ ಅನುಷ್ಠಾನ ಮಾಡಬೇಕಾಗುತ್ತದೆ. ಎಬಿಸಿ ಕಾರ್ಯಕ್ರಮವು ನಾಯಿಗಳನ್ನು ಬೀದಿಯಿಂದ ಹಿಡಿಯುವ, ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವ, 3-4 ದಿನ ಆರೈಕೆ ಮಾಡುವ, ಆರ್‌ವಿ ಲಸಿಕೆ ಹಾಕುವ ಹಾಗೂ ಪುನಃ ಅವುಗಳ ಮೂಲ ಸ್ಥಾನಗಳಿಗೆ ಬಿಡುವ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಹಾಗೂ ಇದಕ್ಕೆ ತಗಲುವ ವೆಚ್ಚ (ಪ್ರತಿಯೊಂದಕ್ಕೆ ರೂ. 1650) ವನ್ನು ಸ್ಥಳೀಯ ಸಂಸ್ಥೆಗಳು ತಮ್ಮ ಸ್ವಂತ ಸಂಪನ್ಮೂಲದಿಂದ ಬರಿಸತಕ್ಕದ್ದು ಎಂದು ಅವರು ತಿಳಿಸಿದರು.
ತಾಲೂಕ ಕೇಂದ್ರಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಸ್ಥಾಪಿಸಿರುವ ಎಬಿಸಿ ಕೇಂದ್ರಗಳನ್ನೇ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಉಪಯೋಗಿಸಿಕೊಂಡು ಎಬಿಸಿ ಕಾರ್ಯಕ್ರಮ ಕೈಗೊಳ್ಳಲು ಅವಕಾಶವಿದೆ. ಈಗಾಗಲೇ ಸರ್ಕಾರದಿಂದ ನಿಗದಿಪಡಿಸಿರುವ ದರದಂತೆ ಕೆಟಿಪಿಪಿ ನಿಯಮಾನುಸಾರ ಎನ್‌ಜಿಒ ಗಳನ್ನು ಗುರುತಿಸಿ, ಸದರಿ ಕೇಂದ್ರಗಳಲ್ಲಿಯೇ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಸಹ ಎಬಿಸಿ ಕಾರ್ಯಕ್ರಮ ಅನುಷ್ಠಾನ ಮಾಡಲು ಅವರು ಸೂಚಿಸಿದರು.
ನಗರ ಸ್ಥಳೀಯ ಸಂಸ್ಥೆಗಳು ಈಗಾಗಲೇ ಸ್ಥಾಪಿಸಿರುವ ಸೌಲಭ್ಯ ಹಾಗೂ ವ್ಯವಸ್ಥೆಯನ್ನು ಬಳಸಿಕೊಂಡು ಗ್ರಾಮ ಪಂಚಾಯತಗಳು, ಎಬಿಸಿ ಕಾರ್ಯಕ್ರಮ ಅನುಷ್ಠಾನ ಮಾಡಲು ಜಿಲ್ಲೆಯ ಎಲ್ಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಸಿದರು. ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿ ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಲು ಅವರು ಸೂಚಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಎಬಿಸಿ ಹೊರತುಪಡಿಸಿ ಬೇರೆ ಕಾನೂನುಬಾಹಿರ ಕ್ರಮಗಳನ್ನು ಅನುಸರಿಸಿ ಬೀದಿ ನಾಯಿಗಳ ಹಾವಳಿಯನ್ನು ತಡೆಯುವುದು ಪ್ರಾಣಿ ದೌರ್ಜನ್ಯ ನಿಗ್ರಹ ಕಾಯ್ದೆ ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ಪ್ರಭಾರ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಪ್ರತಿ ದಿನವು ನಾಯಿ ಹಾಗೂ ಇತರ ಪ್ರಾಣಿ ಕಡಿತ ಪ್ರಕರಣಗಳು ವರದಿ ಆಗುತ್ತಿವೆ. ಸ್ಥಳೀಯ ಆಡಳಿತಗಳು ಸೂಕ್ತ ನಿಯಂತ್ರಣ ಮತ್ತು ಸಾರ್ವಜನಿಕ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ 2022 ರಿಂದ 2025 ರ ವರೆಗೆ ಯಾವುದೇ ರೇಬಿಸ್ ಸಾವಿನ ಪ್ರಕರಣಗಳು ಸಂಭವಿಸಿಲ್ಲ. 2025 ರ ಡಿಸೆಂಬರ್‌ದಲ್ಲಿ ಒಂದು ಸಂಶಯಾಸ್ಪದ ರೇಬೀಸ್ ಪ್ರಕರಣವು ವರದಿಯಾಗಿದ್ದು, ಈ ಕುರಿತು ವೈದ್ಯಕೀಯ ವರದಿಯನ್ನು ನೀರೀಕ್ಷಿಸಲಾಗುತ್ತಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಅವರು ತಿಳಿಸಿದರು.
ಕಳೆದ 2025 ರಲ್ಲಿ ಜಿಲ್ಲೆಯಲ್ಲಿ ಒಟ್ಟು 13,433 ನಾಯಿ ಕಡಿತ ಪ್ರಕರಣಗಳು ಆಗಿದ್ದು, 2026 ರ ಫೆಬ್ರವರಿ 2 ರ ವರೆಗೆ 1,552 ನಾಯಿ ಕಡಿತ ಪ್ರಕರಣಗಳು ವಿವಿಧ ನಗರ, ಗ್ರಾಮಗಳಿಂದ ವರದಿ ಆಗಿವೆ. ಗಾಯಾಳುಗಳಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ಅವರು ಹೇಳಿದರು.
ನಾಯಿ ಕಡಿತ ಪ್ರಕರಣಗಳಿಗೆ ತಕ್ಷಣ ಸೂಕ್ತ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯ ಪ್ರತಿ ಆರೋಗ್ಯ ಕೇಂದ್ರ ಮತ್ತು ನಗರ ಆರೋಗ್ಯ ಕೇಂದ್ರಗಳಲ್ಲಿ 10 ಎ.ಆರ್.ವಿ ಲಸಿಕೆ ಮತ್ತು 5 ಆರ್.ಐ.ಜಿ ಲಸಿಕೆ ಮತ್ತು ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 100 ಎ.ಆರ್.ವಿ ಹಾಗೂ ಆರ್.ಐ.ಜಿ 15 ಲಸಿಕೆ, ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ 1,005 ಎ.ಆರ್.ವಿ ಹಾಗೂ 3,000 ಆರ್.ಐ.ಜಿ ಲಸಿಕೆಗಳನ್ನು ಇಡಲಾಗಿದೆ ಎಂದು ಅವರು ತಿಳಿಸಿದರು.
ಶ್ವಾನ ಪ್ರದರ್ಶನ ಆಯೋಜಿಸುವ ಮೂಲಕ ಬೀದಿ ನಾಯಿಗಳ ನಾಯಿ ಮರಿಗಳನ್ನು ಆಸಕ್ತ ನಾಗರಿಕರಿಗೆ ದತ್ತು ನೀಡಿ, ಹಸ್ತಾಂತರಿಸಬೇಕು. ಇದರಿಂದ ಮಾನವ ಮತ್ತು ನಾಯಿ ಸಂಘರ್ಷವನ್ನು ನಿಯಂತ್ರಿಸಬಹುದು. ಬೀದಿ ನಾಯಿಗಳ ನಿಯಂತ್ರಣಕ್ಕೆ ಸರ್ವೋಚ್ಛ ನ್ಯಾಯಾಲಯ ಹಾಗೂ ಉಚ್ಛ ನ್ಯಾಯಾಲಯ ಕಾಲಕಾಲಕ್ಕೆ ನೀಡಿರುವ ಸಲಹೆ, ಮಾರ್ಗದರ್ಶನ ಮತ್ತು ಕಾನೂನುಗಳನ್ನು ಅಧಿಕಾರಿಗಳು ಪಾಲಿಸಬೇಕೆಂದು ಅವರು ಹೇಳಿದರು.
ಮುಂದಿನ ಒಂದು ವಾರದಲ್ಲಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳ ಹಾಗೂ ಸಾಕು ನಾಯಿಗಳ ಸಮೀಕ್ಷೆ ಮಾಡಿ, ಪಶು ಪಾಲನಾ ಇಲಾಖೆಗೆ ವರದಿ ಸಲ್ಲಿಸಬೇಕು. ನಾಯಿ ಕಡಿತ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಅಗತ್ಯ ಚಿಕಿತ್ಸೆ ಹಾಗೂ ಓಷಧಿಗಳನ್ನು ನೀಡಬೇಕು. ಈ ಕುರಿತು ಸ್ಥಳೀಯ ಸಂಸ್ಥೆಗಳು ಹಾಗೂ ಆರೋಗ್ಯ ಇಲಾಖೆ ಸಮನ್ವಯ ಸಾಧಿಸಬೇಕೆಂದು ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಅವರು ಸೂಚಿಸಿದರು.
ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಎಸ್.ವಿ.ಸಂತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬೀದಿ ನಾಯಿಗಳ ಕಡಿತದ ಪ್ರಕರಣಗಳು ಹೆಚ್ಚುತ್ತಿರುವ ದರ ಬಗ್ಗೆ ಪ್ರಸ್ತಾಪಿಸಿ, ಜಿಲ್ಲೆಯಲ್ಲಿರುವ ಸುಮಾರು 40,000 ಬೀದಿ ನಾಯಿಗಳನ್ನು ನಿಯಂತ್ರಿಸುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ಪ್ರಾಣಿ ದೌರ್ಜನ್ಯ ನಿಯಂತ್ರಣ ಕಾಯ್ದೆ 1960 ಅಡಿಯಲ್ಲಿ, ಪ್ರಾಣಿ ಸಂತಾನ ನಿಯಂತ್ರಣ ಕಾನೂನು 2023ರ ಪ್ರಕಾರ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವುದು ಹಾಗೂ ರೇಬಿಸ್ ರೋಗದ ವಿರುದ್ಧ ಲಸಿಕೆ ಹಾಕುವುದು ಏಕೈಕ ಪ್ರಮಾಣಿಕೃತ ಮಾರ್ಗ ಎಂದು ಸಭೆಯಲ್ಲಿ ವಿವರಿಸಿದರು.
ಜಿಲ್ಲಾ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ ಅವರು ಮಾತನಾಡಿ, ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಎಬಿಸಿ ಕೇಂದ್ರಗಳನ್ನು ಸ್ಥಾಪಿಸಿ ಎಬಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಟೆಂಡರ್ ಕರೆಯಲಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 4,162 ಹಾಗೂ ಅಳ್ನಾವರ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 129 ಬೀದಿನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮತ್ತು 5,020 ಬೀದಿನಾಯಿಗಳಿಗೆ ಪಶುಪಾಲನ ಇಲಾಖೆಯ ಸಹಯೋಗದೊಂದಿಗೆ ರೇಬಿಸ್ ಲಸಿಕೆ ಹಾಕಲಾಗಿದೆ ಎಂದು ಸಭೆಯಲ್ಲಿ ವಿವರಿಸಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಅವರು ಮಾತನಾಡಿ, ಶಿವಳ್ಳಿಯಲ್ಲಿ ಹೊಸ ಎಬಿಸಿ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಮುಂದಿನ ಒಂದು ವರ್ಷದಲ್ಲಿ ಎರಡು ಕೋಟಿ ಅನುದಾನದಲ್ಲಿ ಸುಮಾರು 12,000 ಬೀದಿನಾಯಿಗಳನ್ನು ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುವುದೆಂದು ತಿಳಿಸಿದರು.
ನಾಯಿ ಕಡತಕ್ಕೆ ಪ್ರಥಮ ಚಿಕಿತ್ಸೆ: ನಾಯಿ ಕಚ್ಚಿದ ತಕ್ಷಣ ಗಾಯವನ್ನು 10 ರಿಂದ 15 ನಿಮಿಷಗಳ ಕಾಲ ಸೋಪು ಮತ್ತು ಸ್ವಚ್ಛ, ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆಯುವುದು ಅತ್ಯಂತ ಮುಖ್ಯವಾದ ಪ್ರಥಮ ಚಿಕಿತ್ಸೆಯಾಗಿದೆ. ಇದು ಲಾಲಾರಸ ಮತ್ತು ರೋಗಾಣುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಂತರ, ಬೆಟಾಡಿನ್ ದ್ರಾವಣವನ್ನು ಹಚ್ಚಿ, ಸೋಂಕು ತಡೆಗಟ್ಟಲು ಆದಷ್ಟು ಬೇಗ ವೈದ್ಯರನ್ನು ಭೇಟಿಯಾಗಿ ರೇಬೀಸ್ ಲಸಿಕೆ ಮತ್ತು ಟಿಟಿ ಇಂಜೆಕ್ಷನ್ ಪಡೆಯಬೇಕು.
ರೇಬೀಸ್: ರೇಬೀಸ್ ಒಂದು ಮಾರಕ ವೈರಸ್ ಆಗಿದ್ದು, ಸೋಂಕಿತ ಪ್ರಾಣಿಗಳ ಲಾಲಾರಸದಿಂದ ಜನರಿಗೆ ಹರಡುತ್ತದೆ. ರೇಬೀಸ್ ವೈರಸ್ ಸಾಮಾನ್ಯವಾಗಿ ಕಚ್ಚುವಿಕೆಯ ಮೂಲಕ ಹರಡುತ್ತದೆ. ಬೀದಿ ನಾಯಿಗಳು ಜನರಿಗೆ ರೇಬೀಸ್ ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ.
ಒಬ್ಬ ವ್ಯಕ್ತಿಯು ರೇಬೀ??ನ ಚಿಹ್ನೆಗಳು ಮತ್ತು ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸಿದ ನಂತರ, ರೋಗವು ಯಾವಾಗಲೂ ಸಾವಿಗೆ ಕಾರಣವಾಗುತ್ತದೆ. ಈ ಕಾರಣಕ್ಕಾಗಿ, ರೇಬೀಸ್ ಸೋಂಕಿಗೆ ಒಳಗಾಗುವ ಅಪಾಯವಿರುವ ವ್ಯಕ್ತಿಗಳು ರಕ್ಷಣೆಗಾಗಿ ರೇಬೀಸ್ ಲಸಿಕೆಗಳನ್ನು ಪಡೆಯಬೇಕು.
ರೋಗದ ಲಕ್ಷಣಗಳು: ರೇಬೀಸ್ ರೋಗವು ಮೊದಲು ಜ್ವರದ ಲಕ್ಷಣವನ್ನು ಹೋಲುತ್ತವೆ. ತಲೆನೋವು, ವಾಕರಿಕೆ, ವಾಂತಿ, ಆತಂಕ, ಗೊಂದಲ, ನುಂಗಲು ತೊಂದರೆ, ಅತಿಯಾದ ಜೊಲ್ಲು ಸುರಿಸುವುದು, ನೀರನ್ನು ನುಂಗಲು ಕಷ್ಟವಾಗುವುದರಿಂದ ದ್ರವ ಪದಾರ್ಥಗಳನ್ನು ಕುಡಿಯುವ ಪ್ರಯತ್ನದಿಂದ ಉಂಟಾಗುವ ಭಯ, ನಿದ್ರಾಹೀನತೆ, ಭಾಗಶಃ ಪಾಶ್ರ್ವವಾಯು ಆಗುವ ಸಾಧ್ಯತೆ ಇರುತ್ತದೆ.
ಸೌಲಭ್ಯಗಳು: ನಾಯಿ ಕಡಿತದ ಸೂಕ್ತ ನಿರ್ವಹಣೆಗಾಗಿ ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಗಳಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ರಾಜ್ಯ ಸರ್ಕಾರವು ನಾಯಿ ಕಡಿತಕ್ಕೆ ಉಚಿತ ತುರ್ತು ಚಿಕಿತ್ಸೆ, ಆ್ಯಂಟಿ-ರೇಬೀಸ್ ಲಸಿಕೆ ಮತ್ತು ಪ್ರಥಮ ಚಿಕಿತ್ಸೆ ನೀಡಲು ಅಗತ್ಯ ಕ್ರಮವಹಿಸಿದೆ.
ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ ಕಾಯ್ದೆ 2007 ರ ಅಡಿಯಲ್ಲಿ, ಖಾಸಗಿ ಆಸ್ಪತ್ರೆಗಳು ನಾಯಿ, ಪ್ರಾಣಿ ಮತ್ತು ಹಾವು ಕಡಿತದ ಸಂತ್ರಸ್ತರಿಗೆ ಮುಂಗಡ ಪಾವತಿಯನ್ನು ಕೋರದೆ ಪ್ರಥಮ ಚಿಕಿತ್ಸೆ ಮತ್ತು ಜೀವರಕ್ಷಕ ಚಿಕಿತ್ಸೆಯನ್ನು ನೀಡಬೇಕು. ಆಸ್ಪತ್ರೆಗಳು ಉಚಿತ ವೈದ್ಯಕೀಯ ತಪಾಸಣೆ ಮತ್ತು ಪ್ರಥಮ ಚಿಕಿತ್ಸೆಯನ್ನು ನೀಡುವುದು ಕಡ್ಡಾಯವಾಗಿದೆ ಎಂದರು.
ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಆ್ಯಂಟಿ-ರೇಬೀಸ್ ಲಸಿಕೆಗಳು ಮತ್ತು ರೇಬೀಸ್ ಇಮ್ಯುನೊಗ್ಲೋಬುಲಿನ್‌ಗಳ ಕಡ್ಡಾಯ ಸಂಗ್ರಹ ಹೊಂದಿರಬೇಕು. ಇತರೆ ಪ್ರಾಣಿಗಳು ಕಚ್ಚಿದವರಿಗೆ ಉಚಿತ ಪ್ರಾಥಮಿಕ ತಪಾಸಣೆ ಹಾಗೂ ಪ್ರಥಮ ಚಿಕಿತ್ಸೆ ಕಡ್ಡಾಯವಾಗಿ ನೀಡಬೇಕೆಂದು ಸರ್ಕಾರ ನಿರ್ದೇಶಿಸಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಡಾ. ರುದ್ರೇಶ ಘಾಳಿ, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್.ಎಮ್.ಹೊನಕೇರಿ ಉಪಸ್ಥಿತರಿದ್ದರು.
ಸಭೆಯಲ್ಲಿ ಮಹಾನಗರ ಪಾಲಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶು ಪಾಲನೆ ಮತ್ತು ಪಶು ಸಂಗೋಪನೆ ಇಲಾಖೆ, ಎಲ್ಲ ತಾಲೂಕು ಪಂಚಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಪ್ರಾಣಿ ದಯಾ ಸಂಘದ ಸದಸ್ಯರು ಹಾಗೂ ಇತರ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 