ಮಳೆಗಾಲದಲ್ಲಿ ಗ್ರಾಮ-ನಗರ ಸ್ವಚ್ಛತೆಗೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಮಲ್ಲಿಕಾರ್ಜುನ

ಮಳೆಗಾಲದಲ್ಲಿ ಗ್ರಾಮ-ನಗರ ಸ್ವಚ್ಛತೆಗೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಮಲ್ಲಿಕಾರ್ಜುನ  Prioritize cleanliness in villages and cities during the monsoon: Deputy Commissioner Mallikarjun

ಶಿಗ್ಗಾಂವಿ, ಜು.6: ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟಲು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪರಿಸರ ಸ್ವಚ್ಛತೆ, ನೀರಿನ ನಿಲುವು ನಿವಾರಣೆ ಮತ್ತು ಆರೋಗ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕು ಎಂದು ಹಾವೇರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಮಲ್ಲಿಕಾರ್ಜುನ ಅಧಿಕಾರಿಗಳಿಗೆ ಸೂಚಿಸಿದರು.  ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆಗಾಲದಲ್ಲಿ ಸ್ವಚ್ಛತೆಯ ಕೊರತೆಯಿಂದ ಸಾಂಕ್ರಾಮಿಕ ರೋಗಗಳ ಅಪಾಯ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಂಬಂಧಿತ ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.  

ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ್ ಅವರು ಮಾಹಿತಿ ನೀಡಿ, ಪ್ರಸ್ತುತ ತಾಲೂಕಿನಲ್ಲಿ ಮೂರು ಚಿಕನ್ಗುನಿಯಾ ಪ್ರಕರಣಗಳು ವರದಿಯಾಗಿವೆ. ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಕೆಲವೆಡೆ ನೀರು ನಿಂತಿರುವ ಪರಿಸ್ಥಿತಿ ಕಂಡುಬಂದಿದ್ದು, ಸೊಳ್ಳೆಗಳ ಲಾರ್ವಾ ನಿರ್ಮೂಲನೆ, ಸ್ವಚ್ಛತಾ ಕಾರ್ಯ ಹಾಗೂ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.  

ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅಗತ್ಯವಿರುವ ಪಠ್ಯಪುಸ್ತಕಗಳ ಶೇ.95ರಷ್ಟು ವಿತರಣೆ ಪೂರ್ಣಗೊಂಡಿದೆ. ಉಳಿದ ಪುಸ್ತಕಗಳನ್ನೂ ಶೀಘ್ರದಲ್ಲೇ ವಿತರಿಸಲಾಗುವುದು ಎಂದು ತಿಳಿಸಿದರು. ಅಲ್ಲದೆ, ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಜಿಲ್ಲೆಯು ರಾಜ್ಯ ಮಟ್ಟದಲ್ಲಿಯೂ ಉತ್ತಮ ಸ್ಥಾನ ಪಡೆದಿರುವುದು ಸಂತಸದ ಸಂಗತಿ ಎಂದು ಹೇಳಿದರು.  ಸಭೆಯಲ್ಲಿ ಸಮಾಜ ಕಲ್ಯಾಣ, ತೋಟಗಾರಿಕೆ, ಬಿಸಿಎಂ, ಪಶುಸಂಗೋಪನೆ, ಸಾಮಾಜಿಕ ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ತಮ್ಮ ಇಲಾಖೆಗಳ ಪ್ರಗತಿ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.