ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಚರ್ಚೆ: ಕೊರೊನ ಹರಡುವಿಕೆ ತಡೆಗೆ ಕ್ರಮಗಳನ್ನು ಮುಂದುವರೆಸುವಂತೆ ಸೂಚನೆ

ನವದೆಹಲಿ, ಮೇ 11, ಪ್ರಧಾನಿ ನರೇಂದ್ರಮೋದಿ ಸೋಮವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚರ್ಚೆ ನಡೆಸಿ, ಕೊರೊನವೈರಸ್‍ ಸೋಂಕು ತಡೆಗೆ ಕ್ರಮಗಳನ್ನು ಮುಂದುವರೆಸುವಂತೆ ಪ್ರತಿಪಾದಿಸಿದ್ದಾರೆ. ಲಾಕ್‍ಡೌನ್‍ ನಂತರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನಡೆಸಿರುವ ಐದನೇ ಸಭೆ ಇದಾಗಿದ್ದು, ಕೊರೊನವೈರಸ್‍ ಸೋಂಕು ಹರಡುವಿಕೆ ತಡೆಯ ಕ್ರಮಗಳಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ.
ಸೋಂಕು ವಿರುದ್ಧದ ಹೋರಾಟದಲ್ಲಿ ಭಾರತ ತುಂಬಾ ಯಶಸ್ಸು ಕಂಡಿದ್ದು, ಸಾಮಾಜಿಕ ಅಂತರದಂತಹ ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾದೀತು ಎಂದು ಪ್ರಧಾನಿ ಎಚ್ಚರಿಸಿರುವುದಾಗಿ ಮೂಲಗಳು ತಿಳಿಸಿವೆ. ದೇಶದಲ್ಲಿ ಆರ್ಥಿಕ ಚಟುವಟಿಕೆಯನ್ನು ಹೇಗೆ ಮರು ಆರಂಭಿಸಬೇಕು ಎಂಬುದು ಇಂದಿನ ಸಭೆಯ ಪ್ರಮುಖ ಕಾರ್ಯಸೂಚಿಯಾಗಿತ್ತು ಎಂದು ಮೂಲಗಳು ತಿಳಿಸಿವೆ.ಲಾಕ್‍ಡೌನ್‍ ನಿಂದ ಸ್ಥಗಿತಗೊಂಡಿದ್ದ ಅನೇಕ ಉತ್ಪಾದನಾ ಚಟುವಟಿಕೆಗಳ ಮರು ಆರಂಭಕ್ಕೆ ಕೇಂದ್ರ ಗೃಹಸಚಿವಾಲಯ ಈಗಾಗಲೇ ಅನುಮತಿಸಿದೆ.ಕಂಟೈನ್‍ಮೆಂಟ್ ವಲಯಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಲಾಕ್‍ಡೌನ್‍ ಅನ್ನು ಹಂತ-ಹಂತವಾಗಿ ಸಡಿಲಿಸುವುದಾಗಿ ಸರ್ಕಾರ ಹೇಳಿದೆ. ಕಳೆದ ಕೆಲ ವಾರಗಳಲ್ಲಿ ಅನೇಕ ರಾಜ್ಯಗಳು ಹಸಿರು ಮತ್ತು ಕಿತ್ತಲೆ ವಲಯಗಳಲ್ಲಿ ಕೃಷಿ, ಕಟ್ಟಡ ಕಾಮಗಾರಿ ಚಟುವಟಿಕೆಗಳು ಮತ್ತು ಮನ್ರೇಗಾ ಕಾಮಗಾರಿಗಳಿಗೆ ನಿರ್ಬಂಧಗಳನ್ನು ಸಡಿಲಿಸಿವೆ.