ನವದೆಹಲಿ, ಜ. 30 ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುಣ್ಯತಿಥಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಗಾಂಧೀಜಿಯವರಿಗೆ ಗೌರವ ಸಲ್ಲಿಸಿದರು."ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ನಾನು ಅವರಿಗೆ ನಮಸ್ಕರಿಸುತ್ತೇನೆ. ಬಾಪು ಅವರ ವ್ಯಕ್ತಿತ್ವ, ಸಿದ್ಧಾಂತ ಮತ್ತು ತತ್ವಗಳು ಯಾವಾಗಲೂ ಶ್ರೀಮಂತ ಭಾರತದ ಅಭ್ಯದಯಕ್ಕಾಗಿ ಪ್ರಯತ್ನಿಸಲು ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ" ಎಂದು ಪ್ರಧಾನಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
1869, ಅಕ್ಟೋಬರ್ 2ರಂದು ಜನಿಸಿದ್ದ ಗಾಂಧೀಜಿಯವರನ್ನು 1948, ಜನವರಿ 30ರಂದು ದೆಹಲಿಯಲ್ಲಿ ನಾಥೂರಾಮ್ ಗೋಡ್ಸೆ ಎಂಬಾತ ಗುಂಡಿಕ್ಕಿ ಹತ್ಯೆ ಮಾಡಿದ್ದ.ಮಹಾತ್ಮ ಗಾಂಧಿಯವರು ತಮ್ಮ ವಿಶಿಷ್ಟ ರೀತಿಯ ಅಹಿಂಸಾತ್ಮಕ ಪ್ರತಿರೋಧದ ಮೂಲಕ ಭಾರತೀಯ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದರು. ವಿಶ್ವದಾದ್ಯಂತ ನಾಗರಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯ ಚಳುವಳಿಗಳಿಗೆ ಅಹಿಂಸಾ ಹೋರಾಟ ಪ್ರೇರಣೆ ನೀಡಿದೆ.ಮತ್ತೊಂದು ಟ್ವೀಟ್‌ನಲ್ಲಿ ಪ್ರಧಾನಿ ಮೋದಿ ಅವರು ಬಸಂತ್ ಪಂಚಮಿಯ ಅಂಗವಾಗಿ ಜನರಿಗೆ ಶುಭ ಹಾರೈಸಿದ್ದು, ಸರಸ್ವತಿ ದೇವಿಯು ಜನರಿಗೆ ಜ್ಞಾನವನ್ನು ನೀಡಲಿ ಎಂದು ಹಾರೈಸಿದ್ದಾರೆ. ಪ್ರಧಾನಿ ಅವರು ಮತ್ತೊಂದು ಟ್ವೀಟ್ ಮೂಲಕ ಬಿಜೆಪಿ ನಾಯಕ ಮತ್ತು ಮಂತ್ರಿಮಂಡಲದ ಸಹೋದ್ಯೋಗಿ ಪ್ರಕಾಶ್ ಜಾವಡೇಕರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. " ಅವರು ಸೌಹಾರ್ದಯುತ ಸ್ವಭಾವಕ್ಕಾಗಿ ವ್ಯಾಪಕವಾಗಿ ಮೆಚ್ಚುಗೆ ಪಡೆದಿದ್ದಾರೆ. ಅದು ಪಕ್ಷದ ಸಂಘಟನೆಯಲ್ಲಿರಲಿ ಅಥವಾ ಕೇಂದ್ರ ಸಚಿವರಾಗಿ ಇರಲಿ (ಜಾವಡೇಕರ್ ), ಅವರಿಗೆ ನಿಯೋಜಿಸಲಾದ ಯಾವುದೇ ಜವಾಬ್ದಾರಿಯನ್ನು ಸಮರ್ಪಣೆಯೊಂದಿಗೆ ವಹಿಸಿಕೊಳ್ಳುತ್ತಾರೆ. ಅವರಿಗೆ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಶುಭಕೋರಿದ್ದಾರೆ.