ಕೇಜ್ರಿವಾಲ್ ಪದಗ್ರಹಣ ಸಮಾರಂಭಕ್ಕೆ ಪ್ರಧಾನಿ ಮೋದಿಗೆ ಆಹ್ವಾನ

ನವದೆಹಲಿ, ಫೆ 12 :     ಭಾರೀ ವಿಜಯದೊಂದಿಗೆ ರಾಜಕೀಯ ಚರಿತ್ರೆಯಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್, ಈ ತಿಂಗಳ 14 ಇಲ್ಲವೆ 16 ರಂದು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ. 

ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಉಪ ರಾಜ್ಯಪಾಲ ಅನಿಲ್ ಬೈಜಾಲ್ ನೂತನ ಮುಖ್ಯಮಂತ್ರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ವಿಶೇಷ ಆಹ್ವಾನ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿಂದು  ಆಮ್ ಆದ್ಮಿ ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು, ಸಭೆ ಇಂದು ಬೆಳಗ್ಗೆ  ೧೧.೩೦ಕ್ಕೆ ಆರಂಭವಾಗಲಿದೆ.ಸಭೆಯಲ್ಲಿ ನೂತನ ಶಾಸಕಾಂಗ ನಾಯಕನ ಆಯ್ಕೆ ಮಾಡಲಾಗುವುದು ಎಂದು ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ  ಗೋಪಾಲ್ ರೈ ಹೇಳಿದ್ದಾರೆ. ಪ್ರಮಾಣ ವಚನ ಸ್ವೀಕಾರ ಮಾಡುವ ದಿನಾಂಕ ಶೀಘ್ರದಲ್ಲೇ ನಿರ್ಧಾರವಾಗಲಿದೆ ಎಂದರು.