ಉಪ ಚುನಾವಣೆ ಗೆಲುವು: ಯಡಿಯೂರಪ್ಪಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ

ಬೆಂಗಳೂರು, ಡಿ 14  ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ 12 ರಲ್ಲಿ ಗೆದ್ದು ಅಭೂತಪೂರ್ವ ಗೆಲುವು ಸಾಧಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಪ್ರಧಾನಿ ನರೇಂದ್ರಮೋದಿ ಅಭಿನಂದಿಸಿದ್ದಾರೆ.ಇಂದು ಬೆಳಗ್ಗೆ ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಮಾಡಿದ ನರೇಂದ್ರ ಮೋದಿ, ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವುದು ಮಹತ್ವದ ಸಂಗತಿ. ಮೊದಲೇ ಕರೆ ಮಾಡಿ ಅಭಿನಂದನೆ ಹೇಳಬೇಕಿತ್ತು. ಆದರೆ ನಾನಾ ಕೆಲಸ ಕಾರ್ಯಗಳ ಒತ್ತಡಗಳಿಂದ ಸಾಧ್ಯವಾಗಲಿಲ್ಲ ಎಂದರು. ರಾಜ್ಯದ ತೆರಿಗೆ ಸಂಗ್ರಹ, ಅಭಿವೃದ್ಧಿ ಕುರಿತು ಮುಖ್ಯಮಂತ್ರಿ ಅವರಿಂದ ಮಾಹಿತಿ ಪಡೆದ ಮೋದಿ, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ  ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಆದಷ್ಟು ಬೇಗ ರಾಜ್ಯದ ಸರಕು ಮತ್ತು ಸೇವಾ ತೆರಿಗೆ ಜಿ.ಎಸ್.ಟಿ ಪಾಲು ಕೊಡುವುದಾಗಿ ನರೇಂದ್ರ ಮೋದಿ ಭರವಸೆ ನೀಡಿದರು.  ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಮಾಹಿತಿ ಪಡೆದರು. ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ಜನ ಜಾಗೃತಿ ಮೂಡಿಸಬೇಕು. ಈ ಬಗ್ಗೆ ಪ್ರತಿಪಕ್ಷಗಳು ಅಪ ಪ್ರಚಾರ ನಡೆಸುತ್ತಿದ್ದು, ಇದಕ್ಕೆ ತಕ್ಕ ಉತ್ತರ ನೀಡಬೇಕು ಎಂದು  ಸಲಹೆ ನೀಡಿದರು.   ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದ ಬಿ.ವೈ. ವಿಜಯೇಂದ್ರ ನಗರಕ್ಕೆ ಆಗಮಿಸಿ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿದರು.  ಸಂಪುಟ ವಿಸ್ತರಣೆ,  ಸುಗಮವಾಗಿ ಸರ್ಕಾರ ನಡೆಸಲು ಅಮಿತ್ ಶಾ ನೀಡಿರುವ ಸಲಹೆಗಳನ್ನು ಯಡಿಯೂರಪ್ಪ ಅವರ ಗಮನಕ್ಕೆ ತಂದರು.