ನವದೆಹಲಿ, ಡಿ 18 ಸುಪ್ರಸಿದ್ಧ
ನಟ, ರಂಗಕರ್ಮಿ ಡಾ. ಶ್ರೀರಾಮ್ ಲಾಗೂ ಅವರ
ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ತೀವ್ರ
ಸಂತಾಪ ಸೂಚಿಸಿದ್ದಾರೆ.ಡಾ. ಶ್ರೀರಾಮ್ ಲಾಗೂ ಅವರೊಬ್ಬ
ಬಹುಮುಖ ಪ್ರತಿಭಾವಂತ ಮತ್ತು ಅದ್ಭುತ ವ್ಯಕ್ತಿಯಾಗಿದ್ದರು. ತಮ್ಮ ಅಸಾಧಾರಣ ನಟನೆಯಿಂದ ಹಲವು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ್ದರು. ರಂಗಭೂಮಿ ಹಾಗೂ ಸಿನಿಮಾ ರಂಗಕ್ಕೆ ಅವರು ನೀಡಿರುವ ಕೊಡುಗೆಯನ್ನು ದೇಶ ಸದಾ ನೆನಪಿಟ್ಟುಕೊಳ್ಳಲಿದೆ. ಅವರ ನಿಧನದಿಂದ ತಮಗೆ ತೀವ್ರ ದುಃಖವಾಗಿದೆ ಎಂದು ಪ್ರಧಾನಿ
ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.ಸುಪ್ರಸಿದ್ದ
ರಂಗಕರ್ಮಿ, ಚಲನ ಚಿತ್ರ ನಟ ಶ್ರೀರಾಂ ಲಾಗೂ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಮಂಗಳವಾರ ರಾತ್ರಿ ಪುಣೆಯ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.ವೃತ್ತಿಯಲ್ಲಿ ಇಎನ್ ಟಿ
ಸರ್ಜನ್ ಆಗಿದ್ದ ಶ್ರೀರಾಂ ಲಾಗೂ, ಸ್ವಾತಂತ್ರನಂತರ ಮಹಾರಾಷ್ಟದಲ್ಲಿ ರಂಗಭೂಮಿ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದರು. ಮರಾಠಿ ನಾಟಕಗಳಲ್ಲಿನ ಅವರ ನಟನೆ, ಅಭಿನಯದಿಂದ ಭಾರಿ ಜನಪ್ರಿಯಗೊಂಡಿದ್ದರು.ಬಹಳಷ್ಟು
ಹಿಂದಿ ಸಿನಿಮಾಗಳಲ್ಲೂ ನಟಿಸಿ ಜನಪ್ರಿಯರಾಗಿದ್ದರು. ಏಕ್ ದಿನ್ ಅಚಾನಕ್, ಘರೊಂಡ ಹಾಗೂ
ಲಾವರೀಸ್ ಚಿತ್ರಗಳಲ್ಲಿನ ಅವರ ಅಭಿನಯ ಚಿತ್ರರಸಿಕರ ಮನಸ್ಸಿನಲ್ಲಿ ಈಗಲೂ ಅಚ್ಚಳಿಯದೆ ಉಳಿದಿದೆ.ರಂಗಭೂಮಿ
ವಲಯದಲ್ಲಿ "ಡಾಕ್ಟರ್" ಎಂದೇ ಹೆಸರಾಗಿದ್ದ, ಈ ಹಿರಿಯ ಕಲಾವಿದ, ಪ್ರಗತಿಪರ ಹಾಗೂ
ರಾಷ್ಟ್ರೀಯವಾದ ವಿಚಾರಗಳಿಗೆ ಹೆಸರುವಾಸಿಯಾಗಿದ್ದು,
ನಿರ್ಭೀಡೆಯಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು.