ನವದೆಹಲಿ, ಫೆ ೪ ,ಸಂಸತ್ ಭವನದ ಗ್ರಂಥಾಲಯ ಸಭಾಂಗಣದಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆ ಮಂಗಳವಾರ ನಡೆಯಿತು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ಕೇಂದ್ರ ಸಚಿವರು ಮತ್ತು ಬಿಜೆಪಿ ಸಂಸದರು ಸಭೆಯಲ್ಲಿ ಪಾಲ್ಗೊಂಡಿದ್ದರು.ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಕಳೆದ ಶನಿವಾರ ಮಂಡಿಸಿರುವ ೨೦೨೦-೨೧ನೇ ಸಾಲಿನ ಕೇಂದ್ರ ಮುಂಗಡ ಪತ್ರವನ್ನು ಪ್ರಧಾನಿ ಮೋದಿ ಸಭೆಯಲ್ಲಿ ಶ್ಲಾಘಿಸಿದರು. "ಇದು ತುಂಬಾ ಒಳ್ಳೆಯ ಬಜೆಟ್, ದೇಶದ ಜನರು ಮುಂಗಡಪತ್ರದ ಉದ್ದೇಶಗಳನ್ನು ಅರ್ಥಮಾಡಿಕೊಳ್ಳುತ್ತಾರೆ" ಎಂದು ಮೋದಿ ಹೇಳಿದರು. ಈ ಸಂದರ್ಭದಲ್ಲಿ ಬೋಡೋ ಸಮುದಾಯದೊಂದಿಗೆ ಕೇಂದ್ರ ಸರ್ಕಾರ ಸಹಿ ಹಾಕಿರುವ ತ್ರಿಪಕ್ಷೀಯ ಒಪ್ಪಂದ ಕುರಿತು ಅವರು ವಿವರಿಸಿದರು. ಅಸ್ಸಾಂನಲ್ಲಿ ನೆಲೆಸಿದ ಬ್ರೂ ಬುಡಕಟ್ಟು ಜನಾಂಗಕ್ಕೆ ಇದು ಮಹತ್ವದ ನಿರ್ಧಾರ ಎಂದು ವಿವರಿಸಿದರು.
ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪಕ್ಷದ ಎಲ್ಲ ಮುಖಂಡರು ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ. ಸಂಸದರು ಚುನಾವಣೆಗೆ ದೆಹಲಿಯ ಕೊಳೆಗೇರಿಗಳಲ್ಲಿ ವಿಶೇಷವಾಗಿ ಪಕ್ಷದ ಪರವಾಗಿ ಪ್ರಚಾರ ನಡೆಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.ಈ ನಡುವೆ ಮಹಾತ್ಮ ಗಾಂಧಿ ಅವರ ಬಗ್ಗೆ ಕರ್ನಾಟಕದ ಬಿಜೆಪಿ ಸಂಸದ ಅನಂತ ಕುಮಾರ ಹೆಗಡೆ ನೀಡಿರುವ ಆಕ್ಷೇಪಾರ್ಹ ಹೇಳಿಕೆ ವಿರೋಧಿಸಿ ಲೋಕಸಭೆಯಲ್ಲಿ ಮಂಗಳವಾರ ಪ್ರತಿಪಕ್ಷಗಳ ಸದಸ್ಯರು ತೀವ್ರ ಗದ್ದಲ ಹಾಗೂ ಕೋಲಾಹಲ ಉಂಟು ಮಾಡಿದ್ದರಿಂದ ಕಲಾಪವನ್ನು ಮೊದಲು ಅಪರಾಹ್ನ ೧೨ ಗಂಟೆಯವರೆಗೆ ಮುಂದೂಡಲಾಯಿತು.
.ಮಹಾತ್ಮ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ದೇಶದ ಸ್ವಾತಂತ್ರ್ಯ ಹೋರಾಟದ ಪ್ರಾಮಾಣಿಕತೆಯನ್ನು ಪ್ರಶ್ನಿಸಿದ್ದ ಅನಂತಕುಮಾರ್ ಹೆಗಡೆ, ಬಿಟೀಷ್ ರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಹೋರಾಟ ಎಂಬ ಅವರ ಹೇಳಿಕೆಗೆ ಪ್ರತಿಪಕ್ಷಗಳ ಸದಸ್ಯರು ತೀವ್ರ ಆಕ್ರೋಶವ್ಯಕ್ತಪಡಿಸಿದರು.ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ ಸ್ಪೀಕರ್ ಸಂತಾಪ ನಿರ್ಣಯ ಓದಿ ಮುಗಿಸುತ್ತಿದ್ದಂತೆಯೇ. ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷಗಳ ಸದಸ್ಯರು ಹೆಗಡೆ ಹೇಳಿಕೆಗೆ ಕುಪಿತಗೊಂಡು ತೀವ್ರ ಗದ್ದಲ ಸೃಷ್ಟಿಸಿದರು. ಇದರಿಂದಾಗಿ ಕಲಾಪವನ್ನು ಸ್ಪೀಕರ್ ಓಂ ಬಿರ್ಲಾ ಅಪರಾಹ್ನ ೧೨ ಗಂಟೆಗೆ ಮುಂದೂಡಿದರುಸೋಮವಾರ ಸಹ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಪ್ರಶ್ನೋತ್ತರ ಅವಧಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಹಾಗೂ ಎನ್ ಆರ್ ಸಿ ವಿಷಯ ಪ್ರಸ್ತಾಪಿ ಕಲಾಪ ಅಡ್ಡಿಪಡಿಸಿದ್ದವು.