ನವದೆಹಲಿ, ಆ 30 ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ "ಮನೋರಮಾ ನ್ಯೂಸ್ ಕನ್ಕ್ಲೇವ್-2019" ಅನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. ಕೊಚ್ಚಿಯಲ್ಲಿ ನಡೆಯುವ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. ಈ ಸಮಾವೇಶವನ್ನು ಮಲಯಾಳ ಮನೋರಮಾ ಕಂಪನಿ ಲಿಮಿಟೆಡ್ ಆಯೋಜಿಸಿದೆ. 2019ರ ಆವೃತ್ತಿಯು ಕೇರಳದ ಮೊದಲ ಮತ್ತು ಏಕೈಕ ಸುದ್ದಿ ಸಮಾವೇಶವಾಗಿದ್ದು, 'ನವ ಭಾರತ, ನವ ಸರ್ಕಾರ, ಹೊಸ ಆಕಾಂಕ್ಷೆಗಳು; ಹೊಸ ಸವಾಲುಗಳು; ಹೊಸ ಗಡಿಗಳು ಮತ್ತು ಹೊಸ ಮಾರ್ಗಗಳು' ಕುರಿತ ಅತ್ಯಂತ ಸಮಕಾಲೀನ ಧ್ಯೇಯವನ್ನು ಹೊಂದಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ನವ ಭಾರತ ಕುರಿತ ತಮ್ಮ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತಾರೆ. ಸಮಾವೇಶದಲ್ಲಿ ಬಿಜೆಪಿ ಮುಖಂಡ ಆರ್.ಬಾಲಶಂಕರ್, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ಮುರಳೀಧರರಾವ್, ಸಿಪಿಐ ಮುಖಂಡ ಡಿ ರಾಜಾ, ತಿರುವನಂತಪುರಂ ಲೋಕಸಭಾ ಕ್ಷೇತ್ರದ ಸಂಸದ ಡಾ.ಶಶಿ ತರೂರ್, ಬಿಜೆಪಿ ರಾಷ್ಟ್ರೀಯ ವಕ್ತಾರರಾದ ಮೀನಾಕ್ಷಿ ಲೇಖಿ ಮತ್ತು ಇತರರು ಮಾತನಾಡಲಿದ್ದಾರೆ.