ಕೊಪ್ಪಳ: ಪ್ರಶಿಕ್ಷಣಾರ್ಥಿಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿರಬೇಕು. ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದವರಿಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಹೆಚ್ಚು ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ಕೆ.ಎಸ್.ಆರ್.ಪಿ ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಆಲೋಕ್ ಕುಮಾರ್ ಹೇಳಿದರು.
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ವತಿಯಿಂದ (ಅ.25) ಕೊಪ್ಪಳ ಜಿಲ್ಲೆಯ ಮುನಿರಾಬಾದ್ನ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಶಿಕ್ಷಣಾರ್ಥಿಗಳ ಬದುಕಿನ ಬಹು ಮುಖ್ಯ ಘಟ್ಟವಿದು. ಹೊರಾಂಗಣ ಮತ್ತು ಒಳಾಂಗಣ ತರಬೇತಿಯನ್ನು ಪಡೆದುಕೊಂಡಿದ್ದೀರಿ. ಮುಂದೆ ಒಳ್ಳೆಯ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ. ಸಾರ್ವಜನಿಕರು, ಅಧಿಕಾರಿಗಳು ಸರಿಯಾಗಿ ಮಾತನಾಡಿಸುವುದಿಲ್ಲ ಎಂದು ಮಾನಸಿಕವಾಗಿ ಕುಗ್ಗಬೇಡಿ. ಕರ್ತವ್ಯ ನಿರ್ಲಕ್ಷಿಸದೆ ನಿಮ್ಮ ಕೆಲಸವನ್ನು ನಿರ್ವಹಿಸಿ. ನಮ್ಮ ರಾಜ್ಯದಲ್ಲಿ ಎಸ್.ಟಿ.ಎಫ್. ಮತ್ತು ಎನ್.ಟಿ.ಎಫ್. ಪಡೆಗಳು ನಕ್ಸಲರ ವಿರುದ್ಧ ತರಬೇತಿಯನ್ನು ಪಡೆದು ಹೊರ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬರದಂತೆ ನೋಡಿಕೊಳ್ಳಬೇಕು. ಕೆ.ಎಸ್.ಆರ್.ಪಿ. ನಲ್ಲಿ ಬಹಳಷ್ಟು ಜನರು ಬಡತನದ ಹಿನ್ನೆಲೆಯಿಂದ ಬಂದಿರುತ್ತಾರೆ. ಕೊಪ್ಪಳದಿಂದ 17 ಜನ, ಬಳ್ಳಾರಿಯಿಂದ 17 ಜನ, ವಿಜಯಪುರದಿಂದ 73 ಜನ ಹೀಗೆ 342 ಪ್ರಶಿಕ್ಷಣಾರ್ಥಿಗಳು ಇಂದು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಸಿದ್ಧರಾಗಿದ್ದಾರೆ. 49 ಪ್ರಶಿಕ್ಷಣಾರ್ಥಿಗಳು ದಕ್ಷಿಣ ಕನ್ನಡಕ್ಕೆ, 43 ಪ್ರಶಿಕ್ಷಣಾರ್ಥಿಗಳು ಶಿಗ್ಗಾವಿ, ಬೆಳಗಾವಿ ಘಟಕಕ್ಕೆ ಹೋಗುತ್ತಿದ್ದಾರೆ ಎಂದು ವಿವರ ನೀಡಿದರು.
ನೆರೆ ಹಾವಳಿ ಬಂದಾಗ ಕೆ.ಎಸ್.ಆರ್.ಪಿ ಬಹಳ ಮುಖ್ಯ ಪಾತ್ರ ನಿರ್ವಹಿಸುತ್ತದೆ. ನಮ್ಮದು ಬರೀ ಗುಂಡು ಹಾರಿಸುವ, ಪರೇಡ ಮಾಡುವ ಕೆಲಸವಷ್ಟೇ ಅಲ್ಲ. ನೆರೆ ಹಾವಳಿ ಬಂದಾಗ ಸಾರ್ವಜನಿಕರನ್ನು ರಕ್ಷಣೆ ಮಾಡುವುದು ಕೂಡ ಕರ್ತವ್ಯವಾಗಿರುತ್ತದೆ. ತರಬೇತಿಯಲ್ಲಿ ಎಷ್ಟು ಬೆವರು ಸುರಿಸುತ್ತೀರೋ ನಿಮ್ಮ ಮುಂದಿನ ಬದುಕು ಅಷ್ಟೇ ಚೆನ್ನಾಗಿರುತ್ತದೆ. ಕೆಲಸದ ಕಡೆ ನೀಡುವಷ್ಟೇ ಗಮನವನ್ನು ನಿಮ್ಮ ಆರೋಗ್ಯದ ಕಡೆಗೂ ಹರಿಸಬೇಕು. ದಿನಕ್ಕೆ ಒಂದು ತಾಸು ಯೋಗ, ವ್ಯಾಯಾಮವನ್ನು ಮಾಡಿಕೊಂಡು ಆರೋಗ್ಯವಾಗಿರಿ. ಇಂದಿನಿಂದ ಕರ್ನಾಟಕ ಪೊಲೀಸ್ ಇಲಾಖೆಯ ನಿಯಮವನ್ನು ಪಾಲಿಸಬೇಕು. ಸಮಸ್ಯೆಗಳು ಬಂದರೆ ನಿಮ್ಮ ಕಮಾಂಡೋಗೆ ಹೇಳಿ. ಇಲ್ಲದಿದ್ದರೆ ಹೆಡ್ಕ್ವಾಟ್ರಸ್ಗೆ ಬಂದು ನಿಮ್ಮ ಸಮಸ್ಯೆಗಳನ್ನು ನಮ್ಮ ಹತ್ತಿರ ಹೇಳಬಹುದು. ಮಾನಸಿಕವಾಗಿ ಯಾವುದೇ ತೊಂದರೆಗೆ ಒಳಗಾಗಬೇಡಿ. ಯಾರಿಗೂ ಕೂಡ ಜಾತಿ, ಆದಾಯ, ಧರ್ಮದ ಆಧಾರದಲ್ಲಿ ಸಮವಸ್ತ್ರವನ್ನು ಕೊಡುವುದಿಲ್ಲ. ನಮ್ಮ ಇಲಾಖೆಗೆ ಮತ್ತು ರಾಜ್ಯಕ್ಕೆ ನಮ್ಮ ಋಣವನ್ನು ಕರ್ತವ್ಯದ ಮೂಲಕ ತೀರಿಸಬೇಕು. ನಮ್ಮ ತಂದೆ ತಾಯಿಗಳ ಶ್ರಮವನ್ನು ನೆನೆದು ಕರ್ತವ್ಯದಲ್ಲಿ ನಿರತರಾಗಬೇಕು ಎಂದು ಅವರು ಸಲಹೆ ನೀಡಿದರು.
ಕೆ.ಎಸ್.ಆರ್.ಪಿ. ಮುನಿರಾಬಾದ ತರಬೇತಿ ಶಾಲೆಯಲ್ಲಿ 21 ನೇ ತಂಡದಲ್ಲಿ 342 ಪ್ರಶಿಕ್ಷಣಾರ್ಥಿಗಳು 9 ತಿಂಗಳು ತರಬೇತಿಯನ್ನು ಪಡೆದಿದ್ದಾರೆ. ಅದರಲ್ಲಿ ಸ್ನಾತಕೋತ್ತರ ಪದವೀಧರರು 16, ಪದವೀಧರರು 122, ಪದವಿ ಪೂರ್ವ 192, ಎಸ್.ಎಸ್.ಎಲ್.ಸಿ. 12, ಇಂಜಿನೀಯರಿಂಗ್ ಪದವೀಧರರು 18, ಎಂ.ಬಿ.ಎ. ಪದವೀಧರರು 05 ಪ್ರಶಿಕ್ಷಣಾರ್ಥಿಗಳಾಗಿ ತರಬೇತಿಯನ್ನು ಪಡೆದಿದ್ದಾರೆ. ಕೆ.ಎಸ್.ಆರ್.ಪಿ ಹೆಚ್ಚುವರಿ ಪೊಲೀಸ್ ಮಹಾನಿದರ್ೇಶಕರಾದ ಅಲೋಕ್ ಕುಮಾರ್ ಅವರಿಗೆ ನಿರ್ಗಮನ ಪಥ ಸಂಚಲನ ಗೌರವ ಸಲ್ಲಿಸಿದರು. ನಂತರ ಪ್ರಶಿಕ್ಷಣಾಥರ್ಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಣೆ: ತರಬೇತಿ ಪಡೆದ ಪ್ರಶಿಕ್ಷಣಾರ್ಥಿ ಗಳಿಗೆ ಕೆ.ಎಸ್.ಆರ್.ಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಆಲೋಕ್ ಕುಮಾರ್ ಬಹುಮಾನ ವಿತರಣೆ ಮಾಡಿದರು. ಕೆ.ಎಸ್.ಆರ್.ಪಿ. ಹೊರಾಂಗಣ ವಿಷಯದಲ್ಲಿ ಅನೀಲ ಎಂ.ಬಿ. ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಚಿಕ್ಕಸ್ವಾಮಿ, ಕೆ.ಎಸ್.ಆರ್.ಪಿ. ಒಳಾಂಗಣದಲ್ಲಿ ವಿಷಯದಲ್ಲಿ ಪ್ರಥಮ ಸ್ಥಾನ ಸೋಮಶೇಖರ, ದ್ವಿತೀಯ ಸ್ಥಾನ ಮಹೇಶ. ಕೆ.ಎಸ್.ಆರ್.ಪಿ. ಗುಂಡು ಗುರಿ ವಿಷಯದಲ್ಲಿ ಪ್ರಥಮ ಸ್ಥಾನ ಚೇತನ ಲಿಗಾಡೆ. ದ್ವಿತೀಯ ಸ್ಥಾನ ರಾಜು ನಾಗಠಾಣ. ಕೆ.ಎಸ್.ಆರ್.ಪಿ. ಸರ್ವ ಶ್ರೇಷ್ಠ ಬಹುಮಾನ ವಿಜಯ ಎ.ಬಿ. ಎಲ್ಲಾ ವಿಭಾಗದಲ್ಲಿ ಅತ್ಯುತ್ತಮ ಬಹುಮಾನ ಅಮರೇಶ ಬಿ. ಅವರಿಗೆ ಬಹುಮಾನ ವಿತರಿಸಿ, ವಿಶೇಷ ಟ್ರೋಫಿಯನ್ನು ನೀಡಲಾಯಿತು. ಇದೇ ಸಂದರ್ಭ ಮುನಿರಾಬಾದ್ ತರಬೇತಿ ಶಾಲೆಯ ವಾತರ್ಾ ಪತ್ರಿಕೆಯನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮುನಿರಾಬಾದ್ ಕೆ.ಎಸ್.ಆರ್.ಪಿ. ತರಬೇತಿ ಶಾಲೆಯ ಪ್ರಾಚಾರ್ಯರಾದ ಡಾ. ರಾಮಕೃಷ್ಣ ಮುದ್ದೇಪಾಲ ಸ್ವಾಗತಿಸಿದರು. ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಬೆಂಗಳೂರಿನ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಆರಕ್ಷಕ ಮಹಾನಿರೀಕ್ಷಕ (ಐ.ಪಿಎಸ್) ಪಿ. ಹರಿಶೇಖರನ್, ಬೆಳಗಾವಿ ತರಬೇತಿ ಶಾಲೆಯ ರಮೇಶ ಬೇರಗಾವಿ, ಸೇರಿದಂತೆ ಪ್ರಶಿಕ್ಷಣಾರ್ಥಿಗಳ ಪೋಷಕರು ನಿರ್ಗಮನ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.