ಫಿಲಿಪೈನ್ಸ್, ಜಪಾನ್ ಪ್ರವಾಸಕ್ಕೆ ತೆರಳಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್: ದ್ವಿಪಕ್ಷೀಯ ಬಲವರ್ಧನೆ ನಿರೀಕ್ಷೆ

ನವದೆಹಲಿ, ಅ 17:       ರಾಷ್ಟ್ರಪತಿ ರಾಮನಾಥ್ ಕೋವಿಂದ್ ಫಿಲಿಪೈನ್ಸ್ ಹಾಗೂ ಜಪಾನ್ ಪ್ರವಾಸ ಕೈಗೊಂಡಿದ್ದಾರೆ.  ಒಂದು ವಾರಗಳ ಈ ಪ್ರವಾಸದ ಮೊದಲ ಚರಣದಲ್ಲಿ ಫಿಲಿಪೈನ್ಸ್ ಭೇಟಿಗಾಗಿ ಇಂದು ಬೆಳಗ್ಗೆ ದೆಹಲಿಯಿಂದ ತೆರಳಿದ್ದಾಗಿ ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ ಇಂದಿನಿಂದ 20ರ ವರೆಗೆ ಫಿಲಿಪೈನ್ಸ್ ಪ್ರವಾಸ ಕೈಗೊಳ್ಳುವ ರಾಮನಾಥ್ ಕೋವಿಂದ್ ಅಲ್ಲಿನ ಅಧ್ಯಕ್ಷ ರೊಡ್ರಿಗೊ ರೊವಾ ಡುಟೆಟರ್ೆ ಅವರನ್ನು ಭೇಟಿಯಾಗಲಿದ್ದಾರೆ.  ವ್ಯಾಪಾರೋದ್ಯಮಿಗಳ ಸಭೆಯಲ್ಲೂ ಪಾಲ್ಗೊಳ್ಳಲಿರುವ ಅವರು, ಭಾರತೀಯ ಸಮುದಾಯದ 1 ಲಕ್ಷದ 30 ಸಾವಿರಕ್ಕೂ ಅಧಿಕ ಜನರೊಡನೆ ಸಂವಾದ ನಡೆಸಲಿದ್ದಾರೆ. ಕಳೆದ 13 ವರ್ಷಗಳ ನಂತರ ಫಿಲಿಪೈನ್ಸ್ ಗೆ ಭಾರತದ ರಾಷ್ಟ್ರತಿಯೊಬ್ಬರು ನೀಡುತ್ತಿರುವ ಮೊದಲ ಭೇಟಿ ಇದಾಗಿದ್ದು,  ರಾಮನಾಥ್ ಕೋವಿಂದ್ ಅವರೊಂದಿಗೆ ಪತ್ನಿ ಸವಿತಾ ಕೋವಿಂದ್ ಸಹ ತೆರಳಿದ್ದಾರೆ.  ಈ ಭೇಟಿಯಿಂದ ಫಿಲಿಪೈನ್ಸ್ ಹಾಗೂ ಜಪಾನ್ ದೇಶಗಳ ಜತೆ ಭಾರತದ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಬಲವರ್ಧನೆಯಾಗುವ ನಿರೀಕ್ಷೆಯಿದೆ.  ಅಕ್ಟೋಬರ್ 21 ರಿಂದ 23 ರ ವರೆಗೆ ಜಪಾನ್ ಗೆ ಭೇಟಿ ನೀಡಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಅಲ್ಲಿನ ದೊರೆ ನರುಹಿಟೊ ಅವರ ಸಿಂಹಾಸನಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.