ನವದೆಹಲಿ, ಅ 15: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅ 17 ರಿಂದ ಒಂದು ವಾರ ಫಿಲಿಪ್ಪೀನ್ಸ್ ಮತ್ತು ಜಪಾನ್ ಪ್ರವಾಸ ಕೈಗೊಂಡಿದ್ದು ಜಪಾನ್ ದೊರೆ ನರುಹಿತೋ ಪಟ್ಟಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಫಿಲಿಪ್ಪೀನ್ಸ್ ಅಧ್ಯಕ್ಷ ರೋಡ್ರಿಗೋ ರೋಆ ಡುಟೆಟರ್ೆ ಆಹ್ವಾನದ ಮೇರೆಗೆ ಕೋವಿಂದ್ ಫಿಲಿಪ್ಪೀನ್ಸ್ ಗೆ ಭೇಟಿ ನೀಡಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಉಭಯ ರಾಷ್ಟ್ರಗಳ ನಡುವಣ 70 ವರ್ಷಗಳ ರಾಜತಾಂತ್ರಿಕ ಸಂಬಂಧದ ಸ್ಮರಣಾರ್ಥ ಈ ಭೇಟಿ ನಡೆಯಲಿದ್ದು ಮನಿಲಾದಲ್ಲಿ ಕೋವಿಂದ್ ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ, ಅಲ್ಲದೇ ಸಮುದಾಯ ಚಟುವಟಿಕೆಗಳಲ್ಲೂ ಭಾಗಿಯಾಗಲಿದ್ದಾರೆ. ಪ್ರವಾಸದ ಎರಡನೇ ಚರಣದಲ್ಲಿ ಅವರು ಅ 21 ರಂದು ಜಪಾನ್ ಗೆ ಭೇಟಿ ನೀಡಲಿದ್ದು ಜಪಾನ್ ದೊರೆಯ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಏರ್ಪಡಿಸಿರುವ ಔತಣ ಕೂಟದಲ್ಲೂ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಬೌದ್ಧ ದೇವಾಲಯಕ್ಕೆ ಭೇಟಿ ನೀಡಿ ಗಯಾದಲ್ಲಿನ ಪವಿತ್ರ ಬೋಧಿ ವೃಕ್ಷದ ಸಸ್ಯವನ್ನೂ ಕೂಡ ನೆಡಲಿದ್ದಾರೆ. ಈ ಮೂಲಕ ಬೌದ್ಧ ಧರ್ಮದ ನೆಲೆಯಲ್ಲಿ ಭಾರತ ಮತ್ತು ಜಪಾನ್ ನಡುವಣ ಐತಿಹಾಸಿಕ ಮತ್ತು ಸಾಂಸ್ಕೃತಿಕ ಬಂಧಗಳ ಮೇಲೆ ಬೆಳಕು ಚೆಲ್ಲಲಿದ್ದಾರೆ. ಉಭಯ ದೇಶಗಳ ನಡುವಣ ಸಾಂಪ್ರದಾಯಿಕ ಸ್ನೇಹ ಮತ್ತು ಬಾಂಧವ್ಯದ ಆಧಾರದ ಮೇಲಿನ ದ್ವಿಪಕ್ಷೀಯ ಸಹಕಾರವನ್ನು ಬಲಗೊಳಿಸುವ ಭಾರತದ ಬದ್ಧತೆಯನ್ನು ಈ ಭೇಟಿ ಪುನಃ ಎತ್ತಿ ಹಿಡಿಯಲಿದೆ.