ನವದೆಹಲಿ 4: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ದೇಶದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎರಡನೇ ಬಾರಿಯ ಸರ್ಕಾರದ ಮೊದಲ ಬಜೆಟ್ ಮಂಡನೆಗೆ ವೇದಿಕೆ ಸಿದ್ಧಗೊಂಡಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಲೋಕಸಭೆಯಲ್ಲಿ 2019-20ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಗುರುವಾರ ಸಂಸತ್ನಲ್ಲಿ 2018-19ನೇ ಸಾಲಿನ ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ. ಉಭಯ ಸದನಗಳಲ್ಲೂ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ. ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಬಜೆಟ್ ಮಂಡಿಸುವ ಮೊದಲ ದಿನ ಮಂಡಿಸಲಾಗುತ್ತದೆ.
ಇದು ದೇಶದ ವಾರ್ಷಿಕ ಆರ್ಥಿಕ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ ಆರ್ಥಿಕ ಸಮೀಕ್ಷೆಯು ಸರ್ಕಾರದ ನೀತಿ ಉಪಕ್ರಮಗಳು ಮತ್ತು ಆರ್ಥಿಕತೆಯನ್ನು ಮತ್ತಷ್ಟು ಹೆಚ್ಚಿಸಲು ಒಂದು ಮಾರ್ಗಸೂಚಿಯಾಗಿದೆ. ಇದು ವಲಯದ ಅವಲೋಕನಗಳನ್ನು ಮತ್ತು ಅಗತ್ಯವಿರುವ ಸುಧಾರಣಾ ಕ್ರಮಗಳ ಕುರಿತು ಅಭಿಪ್ರಾಯಗಳನ್ನು ಹೊಂದಿರುತ್ತದೆ.
ಹಲವಾರು ರಾಜ್ಯಗಳಲ್ಲಿನ ರೈತರ ಸಂಕಷ್ಟ ಮತ್ತು ಪ್ರತಿಭಟನೆಯ ದೃಷ್ಟಿಯಿಂದ, ಈ ವರ್ಷದ ಆರ್ಥಿಕ ಸಮೀಕ್ಷೆಯು ತಂತ್ರಜ್ಞಾನವನ್ನು ಹೇಗೆ ಬಳಸುವುದು ಮತ್ತು ಮಾರುಕಟ್ಟೆಗಳನ್ನು ರೈತರಿಗೆ ಹತ್ತಿರ ತರಲು ಇರುವ ಅಡೆಗಡೆಗಳನ್ನು ಕಡಿಮೆ ಮಾಡುವುದು ಹೇಗೆ ಎಂಬ ಕಾರ್ಯತಂತ್ರಗಳನ್ನು ಶಿಫಾರಸು ಮಾಡುವ ನಿರೀಕ್ಷೆಯಿದೆ.
ನಿರ್ಮಲಾ ಸೀತಾರಾಮನ್ ಅವರು, ಸಂಸತ್ನಲ್ಲಿ ಬಜೆಟ್ ಮಂಡಿಸುತ್ತಿರುವ ಎರಡನೇ ಮಹಿಳೆಯಾಗಿದ್ದಾರೆ. 1970-71ರಲ್ಲಿ ಇಂದಿರಾ ಗಾಂಧಿ ಅವರು ಬಜೆಟ್ ಮಂಡಿಸಿದ ಏಕೈಕ ಮಹಿಳೆಯಾಗಿದ್ದಾರೆ. ಹಣಕಾಸು ಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಪ್ರಧಾನಿ ಇಂದಿರಾಗಾಂಧಿ ಅವರು ಹಣಕಾಸು ಖಾತೆಯನ್ನು ವಹಿಸಿಕೊಂಡು ಬಜೆಟ್ ಮಂಡಿಸಿದ್ದರು.