ಪ್ರಪ್ರಥಮ ಜಾನುವಾರ ಜಾತ್ರೆಗೆ ಭರದ ಸಿದ್ಧತೆ: ಮುಖಂಡರಿಂದ ವೀಕ್ಷಣೆ

ಬೈಲಹೊಂಗಲ 26: ಐತಿಹಾಸಿಕ ಪ್ರಸಿದ್ಧ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಇದೇ 28ರಿಂದ 30ರವರೆಗೆ ನಡೆಯಲಿರುವ ಜಾನುವಾರ ಜಾತ್ರೆಗೆ ಸಕಲ ಸಿದ್ಧತೆಗಳು ನಡೆದಿದ್ದು, ಜಾತ್ರೆಗೆ ಬರುವ ಜಾನುವಾರಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವದು ಎಂದು ಜಾನುವಾರ ಜಾತ್ರೆ ಕಮೀಟಿ ಅಧ್ಯಕ್ಷ ಶಿವರಂಜನ ಬೋಳನ್ನವರ ಹೇಳಿದರು.

    ಅವರು ಪಟ್ಟಣದ ಆನಿಗೋಳ ರಸ್ತೆಯಲ್ಲಿರುವ ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಜಾನುವಾರ ಮಾರುಕಟ್ಟೆ ಆವರಣದಲ್ಲಿ ನಡೆಯಲಿರುವ ಇದೇ ಪ್ರಪ್ರಥಮ ಜಾನುವಾರ ಜಾತ್ರೆಯ ಸಿದ್ಧತೆಗಳನ್ನು ಭಾನುವಾರ ವೀಕ್ಷಿಸಿ ಮಾತನಾಡಿ,  ಎಪಿಎಂಸಿಯ 11 ಎಕರೆ ವಿಸ್ತೀರ್ಣ ಹೊಂದಿರುವ ವಿಶಾಲವಾದ ಪ್ರದೇಶದಲ್ಲಿ ಜಾನುವಾರು ಜಾತ್ರೆ ನಡೆಯಲಿದೆ. ಜಾತ್ರೆಗೆ ಬರುವ ರೈತರಿಗೆ, ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದರು. 

  ಮುಖಂಡ ಮಡಿವಾಳಪ್ಪ ಹೋಟಿ ಮಾತನಾಡಿ, ಜಾತ್ರೆ ಸಲುವಾಗಿ ಮೂರು ಪ್ರತ್ಯೇಕ ವಿಭಾಗಗಳನ್ನು ರಚಿಸಲಾಗಿದೆ. ಆಯಾ ವಿಭಾಗಗಳಿಗೆ ಉಸ್ತುವಾರಿ ನೇಮಕ ಮಾಡಿ ಯಾವುದೇ ತೊಂದರೆಯುಂಟಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಜಾತ್ರೆಯ ದಿನದಂದು ತಜ್ಞ ವೈಧ್ಯರ, ಪ್ರಗತಿಪರ ರೈತರ ಸಮ್ಮುಖದಲ್ಲಿ ಪ್ರದರ್ಶನದಲ್ಲಿ ಭಾಗವಹಿಸಿದ ಜಾನುವಾರುಗಳಿಗೆ ಬಹುಮಾನ ವಿತರಿಸಲಾಗುವದು. ಬೈಲಹೊಂಗಲ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಇದೊಂದು ಮಾದರಿ ಜಾನುವಾರು ಜಾತ್ರೆಯಾಗಲಿದೆ ಎಂದರು. 

ಎಪಿಎಂಸಿ ಮೇಲ್ವಿಚಾರಕ ಸುನೀಲ ಗೋಡಬೋಲೆ ಮಾತನಾಡಿ, 2004 ರಲ್ಲಿ ಸುಮಾರು 10 ಎಕರೆ 30 ಗುಂಟೆ ಜಮೀನದಲ್ಲಿ ಪ್ರತಿ ಶುಕ್ರವಾರ ಜಾಣುವಾರುಗಳ ಮಾರಾಟ ನಡೆಯುತ್ತಿತ್ತು. ಅಕ್ಕಪಕ್ಕದ ಗ್ರಾಮಗಳಲ್ಲಿ ಸಂತೆ ನಡೆಯುತ್ತಿರುವದರಿಂದ ಹಾಗೂ ದನಕರುಗಳ ಇಳಿಮುಖವಾಗಿರುವದರಿಂದ ಕಳೆದ ಎರಡು ವರ್ಷಗಳಿಂದ  ಜಾನುವಾರುಗಳ ಸಂತೆ ನಡೆದಿಲ್ಲ.  ಜಾತ್ರಾ ಕಮೀಟಿಯವರು ಮನವಿ ಸಲ್ಲಿದ್ದರಿಂದ ಮರಡಿ ಬಸವೇಶ್ವರ ಜಾತ್ರೆ ಅಂಗವಾಗಿ ಹೊಸ ಜಾನುವಾರು ಪೇಟೆಯನ್ನು ಅಭಿವೃದ್ದಿಪಡಿಸಿ ಅಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಜಾತ್ರೆ ಯಶಸ್ವಿಗೆ ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಎಪಿಎಂಸಿ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳ ಸಹಕಾರದೊಂದಿಗೆ ಇನ್ನೂ ಹೆಚ್ಚಿನ ಅನೂಕೂಲಗಳನ್ನು ಮಾಡಿಕೊಡಲು ಸಿದ್ಧರಿದ್ದೇವೆ ಎಂದರು. 

  ಪುರಸಭೆ ಮಾಜಿ ಸದಸ್ಯ ಮಹಾಂತೇಶ ತುರಮರಿ, ಮಹೇಶ ಹರಕುಣಿ, ರುದ್ರಪ್ಪ ಹೊಸಮನಿ, ಅಣ್ಣಪ್ಪ ಗುಮತಿ, ಉಳವಪ್ಪ ಶಟಗಾರ, ಶಂಕರ ಸುಣಗಾರ, ಬಾಬುಗೌಡ ಪಾಟೀಲ, ಶ್ರೀಶೈಲ ಹೋಟಿ, ವಿಠ್ಠಲ ಯಾಸನ್ನವರ, ಮುರಿಗೆಪ್ಪ ಗುಂಡ್ಲೂರ, ಅಶೋಕ ಮತ್ತಿಕೊಪ್ಪ, ಬಾಬುಸಾಬ ಸುತಗಟ್ಟಿ, ಗಂಗಪ್ಪ ಚಪಳಿ, ಪುಂಡಲೀಕ ಭಜಂತ್ರಿ, ಪುಂಡಲೀಕ ಪಟ್ಟಿಹಾಳ, ಶಿವಾನಂದ ಇಂಚಲ, ನಾಗಪ್ಪ ಕೋಟಗಿ ಇದ್ದರು.