ಶಿಕ್ಷಕರ ಅರ್ಹತಾ ಪರೀಕ್ಷೆ ಕುರಿತು ಪೂರ್ವಸಿದ್ಧತಾ ಸಭೆ

ಶಿಕ್ಷಕರ ಅರ್ಹತಾ ಪರೀಕ್ಷೆ ಕುರಿತು ಪೂರ್ವಸಿದ್ಧತಾ ಸಭೆ Preparatory meeting on the Teacher Eligibility Test

  ಗದಗ    03  : ಜಿಲ್ಲೆಯಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ( ಟಿ.ಇ.ಟಿ) ಡಿಸೆಂಬರ್ 7 ರಂದು ಪಾರದರ್ಶಕವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಸಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್ ತಿಳಿಸಿದರು.  ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಟಿ.ಇ.ಟಿ. ಪರೀಕ್ಷೆ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರೀಕ್ಷೆಗಳಲ್ಲಿ ಯಾವುದೇ ಅಕ್ರಮ  ಅವ್ಯವಹಾರಗಳು ನಡೆಯದಂತೆ ನೋಡಿಕೊಳ್ಳಬೇಕು.  ಜಿಲ್ಲೆಯ ಗದಗ ಶಹರದ 27 ಪರೀಕ್ಷಾ ಕೇಂದ್ರಗಳಲ್ಲಿ  ಟಿ.ಇ.ಟಿ. ಪರೀಕ್ಷೆಗಳು ನಡೆಯಲಿದ್ದು  ಅಲ್ಲಿ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು. ಪರೀಕ್ಷಾ ಅವಧಿಯಲ್ಲಿ  ಶಾಂತಿ ಸುವ್ಯವಸ್ಥೆ ಕಾಪಾಡಲು ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ  ಜಾರಿಗೊಳಿಸಿ ಪರೀಕ್ಷಾ ಅವಧಿಯಲ್ಲಿ ಯಾವುದೇ ಲೋಪದೋಷಗಳಾಗದಂತೆ ಕ್ರಮ ವಹಿಸಬೇಕು. ಒಟ್ಟಾರೆಯಾಗಿ ಟಿ.ಇ.ಟಿ. ಪರೀಕ್ಷೆಗಳನ್ನು  ವ್ಯವಸ್ಥಿತವಾಗಿ ನಡೆಸಲು ಕ್ರಮ ವಹಿಸಬೇಕೆಂದು  ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್ ತಿಳಿಸಿದರು.  

ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್‌. ಮಾತನಾಡಿ ಪರೀಕ್ಷೆಯಲ್ಲಿ  ಸಮಯ ಪರಿಪಾಲನೆ ಅತ್ಯವಶ್ಯಕವಾಗಿದ್ದು ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಗೋಡೆ ಗಡಿಯಾರಗಳು ಇರುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ತುರ್ತು ವೈದ್ಯಕೀಯ ಸೇವೆ ಅಗತ್ಯವಿದ್ದಲ್ಲಿ ಆರೋಗ್ಯ ಇಲಾಖೆಯವರು ಈ ಕುರಿತು ಕ್ರಮ ವಹಿಸಬೇಕು. ಮಾರ್ಗಾಧಿಕಾರಿಗಳು, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು ಸಮರ​‍್ಕವಾಗಿ ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದರು.     ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್‌.ಎಸ್‌.ಬುರುಡಿ ಅವರು ಮಾತನಾಡಿ ಟಿ.ಇ.ಟಿ. ಪರೀಕ್ಷೆಗಳು ಡಿಸೆಂಬರ್ 7 ರಂದು ಗದಗ ಶಹರ ವಲಯದಲ್ಲಿ ಒಟ್ಟು 27 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿವೆ.  ಪರೀಕ್ಷಾ ಕೇಂದ್ರಗಳಿಗೆ 12 ಮಾರ್ಗಗಳನ್ನು ರಚಿಸಲಾಗಿದೆ.  ಪ್ರಥಮ ಅಧಿವೇಶನ ಪರೀಕ್ಷೆ ಬೆಳಿಗ್ಗೆ 9.30 ಗಂಟೆಯಿಂದ ಮ. 12 ಗಂಟೆಯವರೆಗೆ, ದ್ವಿತೀಯ ಅಧಿವೇಶನ ಪರೀಕ್ಷೆ ಮಧ್ಯಾಹ್ನ 2 ಗಂಟೆಯಿಂದ ಮ 4.30 ಗಂಟೆಯವರೆಗೆ ಜರುಗಲಿವೆ.  ಪ್ರಥಮ ಅಧಿವೇಶನ ಪರೀಕ್ಷೆ  2159 ಅಭ್ಯರ್ಥಿಗಳು ಹಾಗೂ ದ್ವಿತೀಯ ಅಧಿವೇಶನ ಪರೀಕ್ಷೆಯನ್ನು 6391 ಅಭ್ಯರ್ಥಿಗಳು ಒಟ್ಟಾರೆ ಟಿ.ಇ.ಟಿ. ಪರೀಕ್ಷೆಯನ್ನು 8550 ಅಭ್ಯರ್ಥಿಗಳು ಬರೆಯಲಿದ್ದಾರೆ. ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ಹಾಗೂ ಶಾಂತಿಯುತವಾಗಿ ಜರುಗಿಸಲು ಕ್ರಮ ವಹಿಸಲಾಗಿದೆ  ಎಂದು ಸಭೆಗೆ ವಿವರಿಸಿದರು.