ಏಷಿಯನ್ ಗೇಮ್ಸ್‌ಗೆ ತಯಾರಿ: ಬಡ ಕ್ರೀಡಾಪಟುವಿಗೆ ನೆರವು

Preparation for the Asian Games: Assistance to a poor athlete

ಲೋಕದರ್ಶನ ವರದಿ 

ಏಷಿಯನ್ ಗೇಮ್ಸ್‌ಗೆ ತಯಾರಿ: ಬಡ ಕ್ರೀಡಾಪಟುವಿಗೆ ನೆರವು 

ವಿಜಯಪುರ 17: ಏಷಿಯನ್ ಗೇಮ್ಸ್‌- 2026ಕ್ಕೆ ತಯಾರಿ ನಡೆಸುತ್ತಿರುವ ಬಡ ಪ್ರತಿಭಾವಂತ ಕ್ರೀಡಾಪಟುವಿಗೆ ಹೆಚ್ಚಿನ ತರಬೇತಿಗಾಗಿ ಬಿ.ಎಲ್‌.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ ಅವರು ಆರ್ಥಿಕ ನೆರವು ನೀಡುವ ಮೂಲಕ ಓಟಗಾರರ ಕನಸು ನನಸಾಗಲು ಸಹಾಯ ಹಸ್ತ ಚಾಚಿದ್ಧಾರೆ.  

ಸಂಸ್ಥೆಯ ಅಧ್ಯಕ್ಷರ ಆಶಯದಂತೆ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರು ಇಂದು ಗುರುವಾರ ನಗರದಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ತಿಕೋಟಾ ತಾಲೂಕಿನ ಬಾಬಾನಗರದ ಯುವ ಕ್ರೀಡಾಪಟು ಎಂ. ಡಿ. ಪೈಗಂಬರ್ ಗೌಂಡಿ ಅವರಿಗೆ ಆರ್ಥಿಕ ನೆರವಿನ ಚಕ್ ವಿತರಿಸಿದರು.  

ಈ ಕ್ರೀಡಾಪಟು ಏಷಿಯನ್ ಗೇಮ್ಸ್‌ಗೆ ತಯಾರಿ ನಡೆಸುತ್ತಿದ್ದು, ಹೆಚ್ಚಿನ ತರಬೇತಿಗಾಗಿ ಕೇರಳದಲ್ಲಿರುವ ಅಂತಾರಾಷ್ಟ್ರೀಯ ಸಲೀಂ ಶೇಕ ಅಕಾಡೆಮಿ ತರಬೇತಿಗೆ ಸೇರಿದ್ದಾರೆ. ಇವರಿಗೆ ಅಥ್ಲೇಟಿಕ್ ತರಬೇತಿಗೆ ಅಗತ್ಯವಾಗಿರುವ ಕ್ರೀಡಾ ಸಲಕರಣೆ, ವಸತಿ ಮತ್ತೀತರ ಶುಲ್ಕಕ್ಕೆ ಒಟ್ಟು ರೂ. 4.60 ಲಕ್ಷ ಅಗತ್ಯವಿದ್ದು, ಇದರ ಮೊದಲ ಕಂತಾದ ರೂ. 2.30 ಲಕ್ಷ ಚೆಕ್‌ನ್ನು ಶಾಸಕರು ವಿತರಿಸಿದರು. 

ಸುನೀಲಗೌಡ ಪಾಟೀಲ ಮಾತನಾಡಿ ನಿಮ್ಮ ಕನಸು ನನಸಾಗಲಿ.  ಏಷಿಯನ್ ಗೇಮ್ಸ್‌- 2026ನಲ್ಲಿ ಉತ್ತಮ ಸಾಧನೆ ಮಾಡಿ ಬಸವ ನಾಡು ವಿಜಯಪುರ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರುವಂತೆ ಶುಭ ಹಾರೈಸಿದರು.  

ಯುವ ಕ್ರೀಡಾಪಟು ಎಂ. ಡಿ. ಪೈಗಂಬರ್ ಗೌಂಡಿ ಮಾತನಾಡಿ ಬಡ ಕ್ರೀಡಾಪಟುಗಳ ಕನಸು ನನಸಾಗಲು ಸಚಿವ ಎಂ. ಬಿ. ಪಾಟೀಲ ಮತ್ತು ಶಾಸಕ ಸುನೀಲಗೌಡ ಪಾಟೀಲ ಅವರು ನೆರವಾಗಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ರಾಜ್ಯ ಮಟ್ಟದ 100 ಮತ್ತು 200 ಮಿಟರ್ ಓಟದಲ್ಲಿ ಮೂರನೇ ಸ್ಥಾನ ಪಡೆದಿದ್ದೇನೆ. ಮೈಸೂರು ದಸರಾ ಕ್ರೀಡಾಕೂಟದಲ್ಲಿ 2017 ರಿಂದ 2025ರ ವರೆಗೆ ಸತತವಾಗಿ ಪಾಲ್ಗೊಂಡು ಜಯಗಳಿಸಿದ್ದೇನೆ. ಅಷ್ಟೇ ಅಲ್ಲ, ರಾಷ್ಟ್ರೀಯ ಮಟ್ಟದಲ್ಲಿ ಏಳು ಸಲ ನಾನಾ ಅತ್ಲೆಟಿಕ್ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿದ್ದೇನೆ ಎಂದು ತಿಳಿಸಿದರು. ಅಲ್ಲದೇ, ಇನ್ನು ಮುಂದೆ ಮತ್ತಷ್ಟು ಕಷ್ಟಪಟ್ಟು ತಯಾರಿ ನಡೆಸಿ ಮುಂಬರುವ ಏಷಿಯನ್ಸ್‌ ಗೇಮ್‌ನಲ್ಲಿ 100 ಮತ್ತು 200 ಮೀಟರ್ ಓಟದಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿ ಪದಕ ಗೆಲ್ಲಲು ಶ್ರಮಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.  

ಬಿ.ಎಲ್‌.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಡೀಮ್ಡ್‌ ವಿವಿ ಕುಲಸಚಿವ ಡಾ. ಆರ್‌. ವಿ. ಕುಲಕರ್ಣಿ, ಕ್ರೀಡಾಪಟುವಿನ ತಾಯಿ ಸಾಹೇಬಿ, ಬಿ.ಎಲ್‌.ಡಿ.ಇ ಸಂಸ್ಥೆಯ ಅಕೌಂಟ್ಸ್‌ ಸುಪರಿಂಟೆಂಡ್‌ಂಟ್ ಎಸ್‌. ಎಸ್‌. ಪಾಟೀಲ, ಬಾಬಾನಗರದ ಮುಖಂಡರಾದ ಸಂಜುಕುಮಾರ ಆಯತವಾಡ, ಹರೀಶ ಬಿರಾದಾರ, ವಿದ್ಯಾನಂದ ನಂದಗಾಂವ, ಶಂಕರ ಹೊನವಾಡ, ಮುತ್ತಪ್ಪ ನಾವಿ, ಗುರುಗೌಡ ಬಿರಾದಾರ, ಚಂದ್ರಶೇಖರ ರುದ್ರಗೌಡರ ಮುಂತಾದವರು ಉಪಸ್ಥಿತರಿದ್ದರು.