ಬೆಂಗಳೂರು, ಅ 16: ಆದಿತ್ಯ ಕೌಶಿಕ್ (75 ರನ್) ಅವರ ಅರ್ಧ ಶತಕದ ಹೊರತಾಗಿಯೂ ಕರ್ನಾಟಕ ಬೌಲರ್ ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ನಲುಗಿದ ಕೇರಳ ತಂಡ ವಿಜಯ್ ಹಜಾರೆ ಟ್ರೋಫಿಯ ಪಂದ್ಯದಲ್ಲಿ ಸಾಧಾರಣ ಮೊತ್ತಕ್ಕೆ ಕುಸಿದಿದೆ.
ನಗರದ ಹೊರವಲಯದ ಆಲೂರು ಮೂರನೇ ಅಂಗಳದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೇರಳ ತಂಡ 47.5 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 171 ರನ್ ಗಳಿಸಿತು. ಕರ್ನಾಟಕಕ್ಕೆ 172 ರನ್ ಸಾಧಾರಣ ಗುರಿ ನೀಡಿದೆ.
ಟಾಸ್ ಮೊದಲು ಕೇರಳ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ ನಾಯಕ ಮನೀಶ್ ಪಾಂಡೆ ನಿರ್ಧಾರಕ್ಕೆ ಕರ್ನಾಟಕ ಬೌಲರ್ ಗಳು ಸಾಥ್ ನೀಡಿದರು. ಕೇರಳದ ಆದಿತ್ಯ ಕೌಶಿಕ್ (75 ರನ್) ಹಾಗೂ ದರ್ಶನ್ ಮಿಸಲ್( ಅಜೇಯ 33) ಅವರನ್ನು ಹೊರತು ಪಡಿಸಿ ಇನ್ನುಳಿದ ಬ್ಯಾಟ್ಸ್ ಮನ್ ಗಳು ಕರ್ನಾಟಕ ಬೌಲಿಂಗ್ ದಾಳಿಯನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾದರು.
ಕೇರಳ ತಂಡದಲ್ಲಿ ಆಡುತ್ತಿರುವ ಅಮಿತ್ ವರ್ಮಾ (10) ಹಾಗೂ ಸಿ.ಎಂ ಗೌತಮ್ ಅವರ ಮೇಲಡೆ ಸಾಕಷ್ಟು ನಿರೀಕ್ಷೆ ಇಡಲಾಗಿತ್ತು. ಆದರೆ, ಅವರು ಬೇಗ ಔಟ್ ಆಗುವ ಮೂಲಕ ಕೈ ಕೊಟ್ಟರು.
ಆದಿತ್ಯ ಕೌಶಿಕ್ ಏಕಾಂಗಿ ಹೋರಾಟ:
ಆರಂಭಿಕನಾಗಿ ಕ್ರೀಸ್ಗೆ ಬಂದ ಆದಿತ್ಯ ಕೌಶಿಕ್ ಅವರು ಒಂದು ತುದಿಯಲ್ಲಿ ಗಟ್ಟಿಯಾಗಿ ನೆಲೆ ನಿಂತರು. ಮತ್ತೊಂದು ತುದಿಯಲ್ಲಿ ವಿಕೆಟ್ ಉರುಳುತ್ತಿದ್ದರೂ ತಲೆ ಕೆಡಿಸಿಕೊಳ್ಳದೆ ಬ್ಯಾಟಿಂಗ್ ಮಾಡಿದ ಕೌಶಿಕ್ ಕರ್ನಾಟಕ ಬೌಲರ್ ಗಳನ್ನು ಸಮರ್ಥವಾಗಿ ದಂಡಿಸಿದರು. 86 ಎಸೆತಗಳನ್ನು ಎದುರಿಸಿದ ಅವರು ನಾಲ್ಕು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಯೊಂದಿಗೆ 75 ರನ್ ಗಳಿಸಿ ತಂಡದ ಮೊತ್ತವನ್ನು 100 ರ ಗಡಿ ದಾಟಿಸಿದರು. ಕೊನೆಯ ಹಂತದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ದರ್ಶನ್ ಮಿಸಲ್ 76 ಎಸೆತಗಳಲ್ಲಿ ಅಜೇಯ 33 ರನ್ ಗಳಿಸಿದರು.
ಕರ್ನಾಟಕದ ಪರ ಉತ್ತಮ ಬೌಲಿಂಗ್ ಮಾಡಿದ ಪ್ರವೀಣ್ ದುಬೆ ಮೂರು ಹಾಗೂ ಅಭಿಮನ್ಯು ಮಿಥುನ್ ಮತ್ತು ಜೆ.ಸುಚಿತ್ ತಲಾ ಎರಡು ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರ್
ಕೇರಳ: 47.5 ಓವರ್ ಗಳಲ್ಲಿ 171/10 (ಆದಿತ್ಯ ಕೌಶಿಕ್ 75, ದರ್ಶನ್ ಮಿಸಲ್ ಅಜೇಯ 33; ಪ್ರವೀಣ್ ದುಬೆ 29 ಕ್ಕೆ 3, ಅಭಿಮನ್ಯು ಮಿಥುನ್ 26 ಕ್ಕೆ 2, ಜೆ.ಸುಚಿತ್ 28 ಕ್ಕೆ 2)