ನವದೆಹಲಿ, ಮಾ 28, ದೇಶದಲ್ಲಿ ಕಲ್ಲಿದ್ದಲು ಸರಬರಾಜನ್ನು ಅತ್ಯಗತ್ಯ ಸೇವೆ ಎಂದು ಘೋಷಿಸಲಾಗಿದ್ದು, ಲಾಕ್ ಡೌನ್ ಅವಧಿಯಲ್ಲಿ ನಿರ್ಣಾಯಕ ಕಲ್ಲಿದ್ದಲು ಪೂರೈಕೆಯನ್ನು ಖಾತರಿ ಪಡಿಸಲು ಅಹರ್ನಿಶಿ ಶ್ರಮಿಸುವಂತೆ ಸಚಿವಾಲಯದ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ್ ಜೋಶಿ ಅವರು ಶನಿವಾರ ನಿರ್ದೇಶನ ನೀಡಿದ್ದಾರೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಇಂಧನ ಹಾಗೂ ಇನ್ನಿತರ ನಿರ್ಣಾಯಕ ವಲಯಗಳು ಅಬಾಧಿತವಾಗಿ ಮುಂದುವರಿಯುವುದನ್ನು ಖಾತರಿಪಡಿಸಲು ಕಲ್ಲಿದ್ದಲು ಸಚಿವಾಲಯದಿಂದ ಯಾವುದೇ ಅನುಮತಿ,ಅನುಮೋದನೆ ಪಡೆದುಕೊಳ್ಳುವ ಅಗತ್ಯವಿಲ್ಲ ಎಂದು ಸಚಿವ ಜೋಷಿ ಸ್ಪಷ್ಟಪಡಿಸಿದ್ದಾರೆ
ಪ್ರಸ್ತುತ 24 ದಿನಗಳಿಗೆ ಸಾಕಾಗುವಷ್ಟು 41.8 ಮೆಟ್ರಿಕ್ ಟನ್ ಕಲ್ಲಿದ್ದಲು ಉಷ್ಣ ವಿದ್ಯುತ್ ಸ್ಥಾವರಗಳ ಬಳಿ ದಾಸ್ತಾನು ಇದೆ. ಕಲ್ಲಿದ್ದಲು ಅವಲಂಭಿತ ಕೈಗಾರಿಕೆ ಹಾಗೂ ಇಂಧನ ಉತ್ಪಾದನಾ ಘಟಕಗಳಿಗೆ ಸುಗಮವಾಗಿ ಹೆಚ್ಚುವರಿ ಕಲ್ಲಿದ್ದಲು ಲಭ್ಯವಾಗುವುದನ್ನು ಖಾತರಿಪಡಿಸಲು ವಿವಿಧ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಹ್ಲಾದ್ ಜೋಷಿ ವಿವರಿಸಿದ್ದಾರೆ.ಕಲ್ಲಿದ್ದಲು ಉತ್ಪಾದನೆ, ಸರಬರಾಜು ಹಾಗೂ ರವಾನೆಯ ಬಗ್ಗೆ ಸಚಿವಾಲಯದ ಎಲ್ಲ ಹಿರಿಯ ಅಧಿಕಾರಿಗಳು ನಿತ್ಯ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಕಲ್ಲಿದ್ದಲು ಸಚಿವಾಲಯ ಸಂಪೂರ್ಣ ಕಾಗದ ರಹಿತ ಕಚೇರಿಯಾಗಿದ್ದು, ಇಡೀ ಸಿಬ್ಬಂದಿ ಸಚಿವಾಲಯ ಅಥವಾ ಮನೆಗಳಿಂದ ದೈನಂದಿನ ಪಾಳಿಗಳ ಮೇಲೆ ಇ- ಅಫೀಸ್ ವೇದಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಕಷ್ಟದ ಈ ಸಮಯದಲ್ಲಿ ಕಲ್ಲಿದ್ದಲು ಉತ್ಪಾದನೆ ಹಾಗೂ ಸರಬರಾಜಿನಲ್ಲಿ ಯಾವುದೇ ವ್ಯತ್ಯವಾಗದಂತೆ ಸುಸೂತ್ರವಾಗಿ ಸಾಗಲು ಶ್ರಮಿಸುತ್ತಿರುವ ಭಾರತ ಕಲ್ಲಿದ್ದಲು ಸಂಸ್ಥೆಯ ಎಲ್ಲಾ ಅಧಿಕಾರಿಗಳು ಹಾಗೂ ಕಾರ್ಮಿಕರ ಕಾರ್ಯವನ್ನು ಸಚಿವ ಪ್ರಹ್ಲಾದ್ ಜೋಷಿ ಶ್ಲಾಘಿಸಿದ್ದಾರೆ.