ಪ್ರಭಾಸ್ ಅಭಿನಯದ ‘ಫೌಜಿ’ ಡಿಸೆಂಬರ್ 3ರಂದು ವಿಶ್ವಾದ್ಯಂತ ಬಿಡುಗಡೆ

ಪ್ರಭಾಸ್ ಅಭಿನಯದ ‘ಫೌಜಿ’ ಡಿಸೆಂಬರ್ 3ರಂದು ವಿಶ್ವಾದ್ಯಂತ ಬಿಡುಗಡೆ Prabhas-starrer ‘Fauzi’ set for worldwide release on Dec 3

ಮುಂಬೈ, ಜುಲೈ 16 : ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಐತಿಹಾಸಿಕ ಚಿತ್ರ ‘ಫೌಜಿ’ 2026ರ ಡಿಸೆಂಬರ್ 3ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ಚಿತ್ರದ ಬಿಡುಗಡೆ ದಿನಾಂಕದ ಕುರಿತ ಹಲವು ತಿಂಗಳ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಹಾಗೂ ಟಿ-ಸಿರೀಸ್ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರ ಆರಂಭದಿಂದಲೇ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಬಿಡುಗಡೆ ದಿನಾಂಕದ ಘೋಷಣೆಯೊಂದಿಗೆ ಪ್ರಭಾಸ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಅವರು ರಕ್ತದ ಮಡುವಿನ ಮಧ್ಯೆ ಬಂಡೆಯೊಂದರ ಮೇಲೆ ಕುಳಿತಿರುವ ದೃಶ್ಯವಿದ್ದು, ಸುತ್ತಮುತ್ತ ಮೃತದೇಹಗಳು ಬಿದ್ದಿವೆ. ಅವರ ಕೈಯಲ್ಲಿ ಬಂದೂಕು ಕಾಣಿಸಿಕೊಂಡಿದ್ದು, ಪೋಸ್ಟರ್ ಮೇಲೆ “ಒಂಟಿಯಾಗಿ ಹೋರಾಡುವ ಒಂದು ಬೆಟಾಲಿಯನ್” ಎಂಬ ಅಡಿಬರಹವಿದೆ.

ಪೋಸ್ಟರ್ ಹಂಚಿಕೊಂಡಿರುವ ಪ್ರಭಾಸ್, “ಕಾಯುವಿಕೆ ಅಂತ್ಯಗೊಂಡಿದೆ. ಬಂಡಾಯ ಆರಂಭವಾಗಿದೆ. #Fauzi ಡಿಸೆಂಬರ್ 3, 2026ರಂದು ವಿಶ್ವಾದ್ಯಂತ ಭವ್ಯ ಬಿಡುಗಡೆಯಾಗಲಿದೆ” ಎಂದು ಬರೆದುಕೊಂಡಿದ್ದಾರೆ.

ಹನು ರಾಘವಪುಡಿ ನಿರ್ದೇಶನದ ‘ಫೌಜಿ’ ಚಿತ್ರದ ಮೂಲಕ, ‘ಬಾಹುಬಲಿ’ ಸರಣಿಯ ನಂತರ ಪ್ರಭಾಸ್ ಮತ್ತೊಮ್ಮೆ ಐತಿಹಾಸಿಕ ಕಥಾಹಂದರದ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನವೀನ್ ಎರ್ನೇನಿ, ವೈ. ರವಿ ಶಂಕರ್ ಹಾಗೂ ಭೂಷಣ್ ಕುಮಾರ್ ನಿರ್ಮಿಸಿರುವ ಈ ಚಿತ್ರ, ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.