ದುಬೈ, ಮೇ 12,ಮಹಾಮಾರಿ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ 2021ರ ಮಹಿಳಾ ವಿಶ್ವ ಕಪ್ ಮತ್ತು 2022ರ ಪುರುಷರ 19 ವರ್ಷದೊಳಗಿನವರ ವಿಶ್ವ ಕಪ್ ಟೂರ್ನಿಗಳ ಅರ್ಹತಾ ಟೂರ್ನಿಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಗಳವಾರ ಮುಂದೂಡಿದೆ.ಆತಿಥೇಯ ಶ್ರೀಲಂಕಾ, ಬಾಂಗ್ಲಾದೇಶ, ಐರ್ಲೆಂಡ್, ನೆದರ್ಲೆಂಡ್ಸ್, ಪಾಕಿಸ್ತಾನ, ಪಪುವಾ ನ್ಯೂ ಗಿನಿ, ಥಾಯ್ಲೆಂಡ್, ಅಮೆರಿಕ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಒಳಗೊಂಡ ಹತ್ತು ತಂಡಗಳು ಶ್ರೀಲಂಕಾದಲ್ಲಿ ಜುಲೈ 3ರಿಂದ 19ರವರೆಗೆ ನಿಗದಿಯಾಗಿದ್ದ ಅರ್ಹತಾ ಮಹಿಳಾ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿತ್ತು.ಅರ್ಹತಾ ಟೂರ್ನಿಯ ಅಗ್ರ ಮೂರು ತಂಡಗಳು ಮುಂದಿನ ವರ್ಷ ನ್ಯೂಜಿಲೆಂಡ್ ನಲ್ಲಿ ನಡೆಯಲಿರುವ ಟೂರ್ನಿಗೆ ಅರ್ಹತೆ ಹೊಂದಲಿವೆ.
" ಸದಸ್ಯರ ಜತೆ ಮತ್ತು ಸಂಬಂಧಿತ ಸರ್ಕಾರ ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ಬಳಿಕ, 2021ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಗೆ ಅರ್ಹತಾ ಟೂರ್ನಿಯನ್ನು ಮುಂದೂಡಲು ಮತ್ತು 2022ರ ಐಸಿಸಿ 19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್ ಗೆ ಅರ್ಹತಾ ಹಾದಿಯನ್ನು ಪ್ರಾರಂಭಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ," ಎಂದು ಐಸಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.2022ರ ಐಸಿಸಿ 19ರ ವಯೋಮಿತಿಯೊಳಗಿನ ಕ್ರಿಕೆಟ್ ವಿಶ್ವಕಪ್ ನ ಅರ್ಹತಾ ಟೂರ್ನಿ ಜುಲೈ 24ರಿಂದ 30ರ ನಡುವೆ ಡೆನ್ಮಾರ್ಕ್‌ನಲ್ಲಿ ಯುರೋಪಿಯನ್ ಪ್ರಾದೇಶಿಕ ಅರ್ಹತಾ ಪಂದ್ಯದೊಂದಿಗೆ ಪ್ರಾರಂಭವಾಗಬೇಕಿತ್ತು.ಐಸಿಸಿ ಟೂರ್ನಿಗಳ ಮುಖ್ಯಸ್ಥ ಕ್ರಿಸ್ ಟೆಟ್ಲಿ, "ನಿರಂತರ ಪ್ರಯಾಣ ನಿರ್ಬಂಧಗಳು, ಜಾಗತಿಕ ಆರೋಗ್ಯ ಕಾಳಜಿ ಮತ್ತು ಸರ್ಕಾರ ಮತ್ತು ಸಾರ್ವಜನಿಕ ಆರೋಗ್ಯ ಪ್ರಾಧಿಕಾರದ ಸಲಹೆಯ ಮೇರೆಗೆ ನಾವು ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಮುಂಬರುವ ಎರಡು ಅರ್ಹತಾ ಘಟನೆಗಳನ್ನು ಮುಂದೂಡಲು ನಿರ್ಧರಿಸಿದ್ದೇವೆ,'' ಎಂದಿದ್ದಾರೆ.