ನವದೆಹಲಿ, ಏಪ್ರಿಲ್ ೧೧ ದೇಶಾದ್ಯಂತ ಜಾರಿಗೊಳಿಸಿರುವ ಲಾಕ್ ಡೌನ್ ದಿಗ್ಬಂಧನವನ್ನು ಒಂದೊಮ್ಮೆ ಈ ತಿಂಗಳ ಅಂತ್ಯದವರೆಗೆ ವಿಸ್ತರಿಸಿದರೆ, ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆರಂಭಿಸುವ ಏಪ್ರಿಲ್ ೨ (ರಾಮನವಮಿ) ಅಥವಾ ಏಪ್ರಿಲ್ ೨೬( ಅಕ್ಷಯ ತೃತೀಯ) ದಿನವನ್ನುಮುಂದೂಡುವ ಸಾಧ್ಯತೆಗಳಿವೆ ಇದೆ ಎಂದು ಮೂಲಗಳು ಹೇಳಿವೆ.
ಏಪ್ರಿಲ್ ೧೪ರ ನಂತರವೂ ಲಾಕ್ ಡೌನ್ ಮುಂದೂಡಬೇಕೆ ? ಎಂಬ ಬಗ್ಗೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಭೆ ನಡೆಸಿದ್ದು, ನಂತರ ಲಾಕ್ ಡೌನ್ ವಿಸ್ತರಣೆಯನ್ನು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಯಿದೆ.ಲಾಕ್ ಡೌನ್ ದಿಗ್ಬಂಧನ ಮತ್ತಷ್ಟು ದಿನಗಳ ಕಾಲ ವಿಸ್ತರಿಸಿದರೆ, ರಾಮ ಮಂದಿರ ನಿರ್ಮಾಣವನ್ನು ಯಾವಾಗ ಆರಂಭಿಸಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರವನ್ನು ಏಪ್ರಿಲ್ ೧೪ ನಂತರ ಪ್ರಕಟಿಸಲಾಗುವುದು ಎಂದು ಮೂಲಗಳು ಹೇಳಿವೆ
ಈನಡುವೆ, ಈ ಹಂತದಲ್ಲಿ ಲಾಕ್ ಡೌನ್ ನಂತಹ ದಿಗ್ಬಂಧನಗಳನ್ನು ಭಾರತದಲ್ಲಿ ಸಡಿಲಗೊಳಿಸಿದರೆ ಪರಿಸ್ಥಿತಿ ಮತ್ತಷ್ಟು ವಿಷಮಿಸುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.ರಾಮನವಮಿ ಅಥವಾ ಅಕ್ಷಯ ತೃತೀಯ ಪವಿತ್ರ ದಿನಗಳ ಪೈಕಿ ಯಾವುದಾದರೂ ಒಂದು ದಿನದಂದು ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಆರಂಭಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಮೊದಲು ಪ್ರಕಟಿಸಿತ್ತು.
೨೦೧೯ರ ನವಂಬರ್ ೧೯ರಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನ ಮೂಲಕ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಅವಕಾಶ ಕಲ್ಪಿಸಿತ್ತು.
ಫೆಬ್ರವರಿ ೧೯ರಂದು ಹಿರಿಯ ವಕೀಲ ಕೆ.ಪರಾಶರನ್ ಅವರ ಕಚೇರಿಯಲ್ಲಿ ನಡೆದ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಮೊದಲ ಸಭೆಯಲ್ಲಿ ಮಂದಿರ ನಿರ್ಮಾಣ ಆರಂಭಿಸುವ ಪ್ರಸ್ತಾವನೆಯನ್ನು ಅನುಮೋದಿಸಲಾಗಿತ್ತು. ಈ ಸಭೆಯಲ್ಲಿ ಟ್ರಸ್ಟ್ ಗೆ ನಾಮಕರಣಗೊಂಡ ಸದಸ್ಯರು ಸೇರಿದಂತೆ ಏಳು ಪಧಾದಿಕಾರಿಗಳು ಪಾಲ್ಗೊಂಡಿದ್ದರು.ಪ್ರಧಾನಿ ನರೇಂದ್ರ ಮೋದಿ ಕಳೆದ ಫೆಬ್ರವರಿ ೫ ರಂದು ಏಳು ಸದಸ್ಯರು, ಮೂವರು ಟ್ರಸ್ಟಿಗಳು ಹಾಗೂ ಐವರು ನಾಮಕರಣ ಸದಸ್ಯರನ್ನು ಒಳಗೊಂಡ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚನೆಯನ್ನು ಸಂಸತ್ತಿನಲ್ಲಿ ಪ್ರಕಟಿಸಿದ್ದರು. ರಾಮಜನ್ಮಭೂಮಿ- ಬಾಬ್ರಿಮಸೀದಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಮೂರು ತಿಂಗಳೊಳಗೆ ಟ್ರಸ್ಟ್ ರಚಿಸುವಂತೆ ಸರ್ಕಾರಕ್ಕೆ ಆದೇಶ ನೀಡಿತ್ತು.
ಮೂರು ತಿಂಗಳೊಳಗೆ ಟ್ರಸ್ಟ್ ರಚಿಸಬೇಕು ಎಂದು ಸುಪ್ರೀಂ ಕೋರ್ಟ್ ವಿಧಿಸಿದ್ದ ಗಡುವು ಮುಗಿಯಲು ನಾಲ್ಕು ದಿನಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಟ್ರಸ್ಟ್ ರಚನೆಯನ್ನು ಸಂಸತ್ತಿನಲ್ಲಿ ಪ್ರಕಟಿಸಿದ್ದರು.