ಬೆಂಗಳೂರು, ಜೂ.4,ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣ ಮೀರಿ ಹರಡುತ್ತಿದೆ. ನೆರೆ ರಾಜ್ಯಗಳಿಂದ ಕಳ್ಳದಾರಿಯಲ್ಲಿ ಬಂದಿರುವುದರಿಂದ ಸೋಂಕು ಕೂಡ ಹರಡುವ ಭಯ ಆವರಿಸಿರುವ ಈ ಸಮಯದಲ್ಲೆ ಶಾಲೆಗಳನ್ನು ತೆರೆಯುವಂತಹ ಮೂರ್ಖ ನಿರ್ಧಾರ ತೆಗೆದುಕೊಳ್ಳಲು ಹೊರಟಿರುವ ಸರ್ಕಾರದ ನಿರ್ಧಾರ ಸೂಕ್ತವಲ್ಲ ಎಂದು ಆಪ್ ಟೀಕಿಸಿದೆ.ಬೆಂಗಳೂರು ನಗರ ಘಟಕ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಕನಿಷ್ಠ ಇನ್ನೆರಡು ತಿಂಗಳು ಶಾಲೆಗಳನ್ನು ಪ್ರಾರಂಭಿಸುವುದು ಒಳ್ಳೆಯದಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವರು ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದು ಅವಸರದ ತೀರ್ಮಾನ ಮಾಡಬಾರದು. ಯಾರದೋ ಲಾಭಕ್ಕೆ ಮುಗ್ಧ ಮಕ್ಕಳ ಭವಿಷ್ಯವನ್ನು ಹಾಳು ಮಾಡಬಾರದು.
ಜುಲೈ ತಿಂಗಳ ಹೊತ್ತಿಗೆ ಶಾಲೆಗಳನ್ನು ಪುನರಾರಂಭಿಸುವ ಪ್ರಸ್ತಾಪವನ್ನು ಮುಂದಿಟ್ಟಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕೇವಲ ಪ್ರಚಾರದ ಆಸೆಯಿಂದ ತಮ್ಮ ಅಜ್ಞಾನ ಪ್ರದರ್ಶಿಸಿದ್ದಾರೆ. ಈ ಪೊಳ್ಳು ಹೇಳಿಕೆಯಿಂದ ಪೋಷಕರು ಆತಂಕಕ್ಕೀಡಾಗಿದ್ದು, ಇದನ್ನು ವಿರೋಧಿಸಿ ಸಾವಿರಾರು ಪೋಷಕರು ಆನ್‌ಲೈನ್ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಆದ ಕಾರಣ ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾಲೆಗಳ ಪುನರಾರಂಭಕ್ಕೆ ಒಪ್ಪಿಗೆ ನೀಡಬಾರದು ಎಂದರು.ಒಂದುವೇಳೆ ಶಾಲೆಗಳನ್ನು ಈಗ ಪ್ರಾರಂಭಿಸಿದರೆ ಪಕ್ಷದ ವತಿಯಿಂದ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು. ಎರಡು ತಿಂಗಳ ಪರಿಸ್ಥಿತಿಯನ್ನು ಸೂಕ್ತವಾಗಿ ಅಧ್ಯಯನ ಮಾಡಿ ಶಾಲೆಗಳ ಪುನರಾರಂಭದ ಬಗ್ಗೆ ತಜ್ಞರ ಸಮಿತಿ ರಚಿಸಿ ಅವರ ಅಭಿಪ್ರಾಯ ಪಡೆದು ಹೆಜ್ಜೆ ಇಡುವುದು ಸೂಕ್ತ ನಿರ್ಧಾರ.ಶೈಕ್ಷಣಿಕ ವರ್ಷವನ್ನು ಕಡಿಮೆ ಮಾಡಿ ಹಾಗೂ ಈಗಲೇ ಪಠ್ಯ ಪುಸ್ತಕಗಳನ್ನು ಮುದ್ರಿಸಿ ಹಂಚಬೇಕು. ಶಾಲೆಗಳ ನವೀಕರಣ ಹಾಗೂ ದುರಸ್ತಿಗಾಗಿ ಆದಷ್ಟು ಆದ್ಯತೆ ನೀಡಿ ಉತ್ತಮ ವಾತಾವರಣದಲ್ಲಿ ಮಕ್ಕಳು ಕಲಿಯುವಂತಹ ವಾತಾವರಣವನ್ನು ಸೃಷ್ಟಿಸಬೇಕು ಎಂದು ಆಗ್ರಹಿಸಿದರು.