ನ್ಯಾಯಮೂರ್ತಿ ಗೊಗೊಯ್ ವಿರುದ್ದ ಆರೋಪ ಮಾಡಿದ್ದ ಮಹಿಳೆಗೆ ಮತ್ತೆ ಪೋಸ್ಟಿಂಗ್ ...!

ನವದೆಹಲಿ, ಜ ೨೨ :       ಸುಪ್ರೀಂ ಕೋರ್ಟ್ ನಿವೃತ್ತ  ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್  ತಮ್ಮ  ಮೇಲೆ  ಲೈಂಗಿಕ  ದೌರ್ಜನ್ಯ  ನಡೆಸಿದ್ದರು  ಎಂದು ಕಳೆದ  ವರ್ಷ  ಸಂಚಲನಾತ್ಮಕ   ಆರೋಪ  ಮಾಡಿದ್ದ   ಮಹಿಳೆಯನ್ನು    ಸುಪ್ರೀಂ ಕೋರ್ಟ್   ಮತ್ತೆ  ಉದ್ಯೋಗಕ್ಕೆ ವಾಪಸ್ಸು  ತೆಗೆದುಕೊಂಡಿದೆ ಎಂದು ವರದಿಯಾಗಿದೆ.

ಆದರೆ,  ಕರ್ತವ್ಯಕ್ಕೆ  ಮರು ಸೇರ್ಪಡೆಗೊಂಡ ನಂತರ   ಆಕೆ ದೀರ್ಘಕಾಲದ  ರಜೆ ಮೇಲೆ ತೆರಳಿದ್ದಾರೆ ಎಂದು   ವಿಶ್ವಸನೀಯ ಮೂಲಗಳು ಹೇಳಿವೆ.

ಆಕೆಗೆ  ನೀಡಬೇಕಿದ್ದ  ವೇತನ, ಮತ್ತಿತರ  ಬಾಕಿ  ಭತ್ಯೆಗಳನ್ನು   ಸುಪ್ರೀಂ ಕೋರ್ಟ್   ಪಾವತಿಸಿದೆ  ಎಂದು  ಹೇಳಿದೆ. 

ಮೇ ೨೦೧೪ ರಲ್ಲಿ  ಸದರಿ ಮಹಿಳೆ ಸುಪ್ರೀಂ ಕೋರ್ಟ್‌ನಲ್ಲಿ  ಉದ್ಯೋಗಕ್ಕೆ  ಸೇರಿದ್ದರು.  ಆದರೆ, ಅಕ್ಟೋಬರ್  ೨೦೧೮ರಲ್ಲಿ   ಅಂದಿನ  ಮುಖ್ಯನ್ಯಾಯಮೂರ್ತಿ   ಜಸ್ಟೀಸ್  ರಂಜನ್ ಗೊಗೊಯ್  ನಿವಾಸದಲ್ಲಿರುವ   ಕಚೇರಿಗೆ   ಕರ್ತವ್ಯಕ್ಕೆ   ನಿಯೋಜಿಸಿದ ದಿನದಿಂದ ತನಗೆ  ಕಿರುಕುಳಗಳು ಆರಂಭಗೊಂಡಿದ್ದವು   ಎಂದು ಆಕೆ ಆರೋಪಿಸಿದ್ದರು.  ಲೈಂಗಿಕ  ಕಿರುಕುಳ  ನಡೆಸಲಾಯಿತು  ಎಂದು  ದೂರಿದ  ನಂತರ  ತಮ್ಮನ್ನು ಕರ್ತವ್ಯದಿಂದ  ಬದಲಾಯಿಸಿ, ನಂತರ  ಉದ್ಯೋಗದಿಂದ ವಜಾಗೊಳಿಸಿದ್ದಾರೆ   ಎಂದು  ಆಕೆ ಆರೋಪಿಸಿದ್ದರು.

ಹಾಲಿ  ಸುಪ್ರೀಂ ಕೋರ್ಟ್   ಮುಖ್ಯನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ  ನ್ಯಾಯಾಲಯದ ಆಂತರಿಕ ಸಮಿತಿ   ಮಹಿಳೆಯ  ಆರೋಪಗಳ ಬಗ್ಗೆ ತನಿಖೆ ನಡೆಸಿ.     ಆರೋಪಗಳು  ನಿರಾಧಾರ  ಎಂದು ನ್ಯಾಯಮೂರ್ತಿ ಗೊಗೊಯ್‌ಗೆ ಅವರಿಗೆ  ಕ್ಲೀನ್ ಚಿಟ್ ನೀಡಿತ್ತು.  ಆದರೆ, ನಿಯಮಗಳ ಪ್ರಕಾರ ವರದಿಯನ್ನು ಬಹಿರಂಗಗೊಳಿಸದ  ಕಾರಣ   ವರದಿಯಲ್ಲಿನ  ವಿವರಗಳು  ಗೋಪ್ಯವಾಗಿಯೇ ಉಳಿದುಕೊಂಡಿದೆ, ಆದರೆ,    ಸಮಿತಿಯ ವಿಚಾರಣೆಯ ಬಗ್ಗೆ   ಸಂತ್ರಸ್ಥ  ಮಹಿಳೆ   ಅಸಮಾಧಾನ ವ್ಯಕ್ತಪಡಿಸಿ, ತನಿಖಾ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದರು. ಕಳೆದ ವರ್ಷದ  ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್   ಪ್ರಧಾನ ಕಾರ್ಯದರ್ಶಿ,  ಮಹಿಳೆ  ಮಾಡಿದ್ದ    ಆರೋಪಗಳನ್ನು ಖಂಡಿಸಿ,  ಅವುಗಳು  ಅಸತ್ಯದ ಆರೋಪಗಳು ಎಂದು  ತಳ್ಳಿಹಾಕಿದ್ದರು. 

ಅಲ್ಲದೆ,   ತನ್ನನ್ನು   ಉದ್ಯೋಗದಿಂದ  ತೆಗೆದುಹಾಕಿದ  ಕೆಲ  ತಿಂಗಳ  ನಂತರ   ದೆಹಲಿ ಪೊಲೀಸ್  ವಿಭಾಗದಲ್ಲಿ  ಕಾರ್ಯ ನಿರ್ವಹಿಸುತ್ತಿದ್ದ  ಪತಿ ಮತ್ತು ಸಹೋದರನನ್ನು ಕೆಲಸದಿಂದ ತೆಗೆಯಲಾಗಿದೆ   ಎಂದು ಮಹಿಳೆ ಆರೋಪಿಸಿದ್ದರು. ೨೦೧೯ ರ ಜೂನ್‌ನಲ್ಲಿ ಅವರು ಮತ್ತೆ ಕರ್ತವ್ಯಕ್ಕೆ ಮರು ಸೇರ್ಪಡೆಗೊಂಡಿದ್ದಾರೆ  ಎಂದು ವರದಿಯಾಗಿದೆ. ಮತ್ತೊಂದೆಡೆ, ಸುಪ್ರೀಂ ಕೋರ್ಟ್‌ನಲ್ಲಿ  ಕೆಲಸ  ಕೊಡಿಸುವುದಾಗಿ  ವ್ಯಕ್ತಿಯೊಬ್ಬರಿಂದ  ಹಣ ತೆಗೆದುಕೊಂಡಿದ್ದಾರೆ  ಎಂಬ ಆರೋಪ ಸಂಬಂಧ  ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.